ಸರ್ವರಿಗೂ ಶರಣು ಶರಣಾರ್ಥಿ. ಸ್ನೇಹಿತರೇ, ನಮ್ಮ ದಿನನಿತ್ಯದ ಬದುಕಿನಲ್ಲಿ ಸಮಾನತೆ ಎನ್ನುವ ಪದ ಪರಿಚಿತವಾದುದು. ಸಮತೆ ಮತ್ತು ಸಮಾನತೆ ಎರಡೂ ಪದಗಳು ಒಂದೇ ಎನ್ನಿಸಿದರು ಅರ್ಥದಲ್ಲಿ ವಿಭಿನ್ನತೆ ಉಂಟು. ಅದರಲ್ಲೂ ಈ ಸ್ತ್ರೀ ವಾದ ಅಂದ ತಕ್ಷಣ ಸ್ಮೃತಿಯಲ್ಲಿ ಸಂಚರಿಸುವುದು ಲಿಂಗ ಸಮಾನತೆ.ಆದರೆ ಒಬ್ಬ ಸ್ತ್ರೀವಾದಿಯಾಗಿ ನಾನಿಲ್ಲಿ ಬಯಸುತ್ತಿರುವುದು ಬರೀ ಮಹಿಳಾ ಸಮಾನತೆಯನ್ನಷ್ಟೆ ಅಲ್ಲ, ಸಮತೆಯನ್ನೂ ಕೂಡಾ.
ಭಾರತ ಸಂವಿಧಾನದ 3 ನೇ ಭಾಗದಲ್ಲಿ 12 ರಿಂದ 32 ರವರೆಗೆ, ವಿಧಿ 14 – ಕಾನೂನಿನ ಮುಂದೆ ಎಲ್ಲರೂ ಸಮಾನರು, 15 – ಲಿಂಗ ,ಜಾತಿ, ಧರ್ಮ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ, 16 – ಸಾರ್ವಜನಿಕ ಉದ್ಯೋಗಾವಕಾಶದಲ್ಲಿ ಸಮಾನ ಅವಕಾಶ, 21 – ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ನೀಡಿ ಎಲ್ಲರನ್ನೂ ಒಳಗೊಂಡಂತೆ ಮಹಿಳೆಯರಿಗೂ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಅಸಮಾನತೆಯನ್ನು ತೊಡೆದು ಸಮಾನತೆಯೆಡೆಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂಬುದು ಬರೀ ಹಾಳೆಗಳಲ್ಲಿ ಮಾತ್ರ ಪ್ರತಿಯಾಗುತ್ತಿದೆ ಹೊರತು ವಾಸ್ತವಾಗಿ ಅಲ್ಲ.
ತಕ್ಕ ಉದಾಹರಣೆ ಎಂಬಂತೆ ಲಿಂಗತ್ವ ಸಮಾನತೆ ಸೂಚ್ಯಂಕದಲ್ಲಿ ಭಾರತ 145 ರಾಷ್ಟ್ರಗಳಲ್ಲಿ 131 ನೇ ಸ್ಥಾನದಲ್ಲಿರುವುದು ಕಳವಳಕಾರಿಯಾದ ಸಂಗತಿ.ಇದು ಹೀಗೆ ಮುಂದುವರೆದರೆ ಸಮಾನತೆ ಎಂಬುದು ಕನಸಾಗುತ್ತದೆ. ಹಾಗಾದರೆ ಈ ಸಮಾನತೆ ಸಾಧಿಸಲು ಸಮತೆ ಅಗತ್ಯವಾದುದು.
ಒಂದು ಕ್ರಿಕೆಟ್ ಮ್ಯಾಚ್ ನ್ನು ಒಬ್ಬ ಕುಳ್ಳ,ಇನ್ನೊಬ್ಬ ಎತ್ತರದವನು ವೀಕ್ಷಿಸುತ್ತಿರುವಾಗ, ಗಿಡ್ಡವಿರುವನಿಗೆ ಮ್ಯಾಚ್ ಕಾಣಿಸುವುದಿಲ್ಲ.ಇಬ್ಬರಿಗೂ ಸಮನಾಗಿ ಕಾಣಲು ಮಾಡಬಹುದಾದರೂ ಏನು ಎಂಬ ಪ್ರಶ್ನೆ ಬಂದಾಗ, ಗಿಡ್ಡ ವ್ಯಕ್ತಿಗೆ ಇನ್ನೂ ಎತ್ತರವಾಗಿ ಕಾಣುವಂತೆ ಏನನ್ನಾದರೂ ತಳಪಾಯ ಹಾಕಿ ನಿಲ್ಲಿಸಿದಾಗ ಮಾತ್ರ ಆ ವ್ಯಕ್ತಿ ಜೊತೆಗಿರುವವನ ಸಮನಾಗಿ ನಿಂತು ಮ್ಯಾಚ್ ನೋಡಲು ಸಾಧ್ಯವಾಗುತ್ತದೆ.
ಹಾಗೆ ಅನಾದಿ ಕಾಲದಿಂದಲೂ ಅಬಲೆಯೆನ್ನುತ್ತ, ಪಾತಾಳಕ್ಕೆ ನೂಕಿರುವ ಮಹಿಳೆಯರಿಗೆ ಇಂದು ಉಳ್ಳವರ ಅಂದರೆ ಪುರುಷರ ಸಮನಾದ ಮೀಸಲಾತಿಯ ಅಗತ್ಯವಿದೆ. ಇದನ್ನೇ ನಾವು ಸಮತೆ ಎಂದು ಉಲ್ಲೇಖಿಸುವುದು. ಆದರೆ ಇಲ್ಲಿ ನೀಡಿರುವ ಮೀಸಲಾತಿ ವಿಶೇಷವೇನಲ್ಲ ಕಾರಣ ಇದು ಹೆಚ್ಚುವರಿಯಾದ ಸವಲತ್ತಲ್ಲ, ಅಂಚಿನಲ್ಲಿರುವವರನ್ನು ಮೇಲೆತ್ತಲು ಇರುವ ಅಗತ್ಯತೆ.ನಮ್ಮ ಅಂದಕಾರದಿಂದಲೇ ಪುರುಷ ಪ್ರಧಾನ ಸಮಾಜದ ಅಹಂಕಾರದಿಂದ ಮೂಲೆಗೊತ್ತಿರುವ ಸ್ತ್ರೀ ಸಮಾನತೆಯನ್ನ ಮುನ್ನೆಲೆಗೆ ತರಬೇಕಾದ್ದು ಸರ್ವ ಮಾನವರ ಜವಾಬ್ದಾರಿಯಾಗಿದೆ.
ಪ್ರಕೃತಿಯಲ್ಲಿ ಒಂದು ದೊಡ್ಡ ಆಲದ ಮರ ಬೆಳೆಯುತ್ತದೆ ಎಂದರೆ ಸ್ವಾರ್ಥಿಯಂತೆ ಒಂದೇ ಬೆಳೆಯುವುದಿಲ್ಲ, ತನ್ನ ಸುತ್ತಲೂ ಆಗ ತಾನೇ ಚಿಗುರೊಡೆಯುತ್ತಿರುವ ಹತ್ತಾರು ಸಸಿಗಳಿಗೆ , ಯಾವುದೇ ಜಾತಿ ಮತ ನೋಡದೆ ನೆರಳು, ಆಸರೆ, ಆಹಾರ ನೀಡಿ, ತನ್ನ ಜೊತೆಗೆ ಬೆಳೆಸುತ್ತದೆ, ಎಂದಾದರೆ ನಾವೇಕೆ ನಮ್ಮವರಾದ, ತನ್ನ ಜೀವನವನ್ನೇ ಇತರರಿಗಾಗಿ ಮೀಸಲಿಡುವ ಈ ಮಾತೃ ರೂಪಿಗೆ ಸಮತೆಯನ್ನು ಕಲ್ಪಿಸಬಾರದು. ಪ್ರಸಿದ್ಧ ಪರಿಸರಸ್ತ್ರೀವಾದಿ *’ವಂದನಾಶಿವ’* ರವರು
“ಮಹಿಳೆ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧವಿದೆ, ಈ ಪುರುಷ ಇಬ್ಬರನ್ನೂ ಹಿಂಸಿಸುತ್ತಿದ್ದಾನೆ,ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ” ಎಂದು ಉಲ್ಲೇಖಿಸಿರುವುದು ನೂರರಷ್ಟು ಸತ್ಯ.
ಬೇರಿನಲ್ಲೇ ಬೆರೆತು ಹೋಗಿರುವ ಈ ಲಿಂಗಬೇದ ಎಂಬ ಅಸ್ಪೃಷ್ಯತೆ ಅಳಿಸಿಹಾಕಬೇಕಾದರೆ, ಮೊದಲು ಕುಟುಂಬ ಎಂಬ ಸಂಸ್ಥೆ ಬದಲಾಗಬೇಕಿದೆ. ನಮ್ಮನೆಯ ಅಣ್ಣ,ತಮ್ಮ , ಅಕ್ಕ, ತಂಗಿಯರಲ್ಲಿ ಪುರುಷರೇ ಹೆಚ್ಚೆಂಬ ಭಾವ ಅಳಿದು, ಎಲ್ಲರೂ ಸಮಾನರು ಎಂಬ ಅರಿವು ಮೂಡುವುದೋ ಅಂದೇ ಈ ಅಸಮಾನತೆಗೆ ಅಂತ್ಯ ಹಾಡಿ ಸಮತೆಯ ಮೂಲಕ ಸಮಾನತೆಯ ತತ್ವ ಸಾಕಾರವಾಗುವುದು. ಅದಕ್ಕೆ
*’ನಾವಲ್ ಎಲ್ ಸಾದವಿ’* ಹೇಳ್ತಾರೆ
” ಪಾಲಕರೇ ನಿಮ್ಮ ಮಗಳಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗುವುದನ್ನು ಕಲಿಸಿಕೊಡಿ ಅದರಿಂದ ಆಕೆ, ಉತ್ತಮ ಜೀವನ ಸಂಗಾತಿಯನ್ನು ಹುಡುಕುತ್ತಾಳೆಯೇ ಹೊರತು, ಆಳುವವನನ್ನಲ್ಲ.
ಹಾಗೆ ನಿಮ್ಮ ಮಗನಿಗೆ ಕೌಟುಂಬಿಕ ಸ್ವಾತಂತ್ರ್ಯವನ್ನು ಕಲಿಸಿಕೊಡಿ , ಅದರಿಂದ ಅವನು ಪ್ರೀತಿಯ ಜೊತೆಗಾತಿಯನ್ನು ಹುಡುಕುತ್ತಾನೆಯೇ ಹೊರತು ಮನೆಕೆಲಸದವಳನ್ನಲ್ಲ.
ಎಂಬುದು ಸ್ಪಷ್ಟವಾಗಿ ತಿಳಿಸುತ್ತಿರುವುದೆನೆಂದರೆ,ನಾವು ಬಯಸುವ ಬದಲಾವಣೆ ನಮ್ಮಿಂದಲೇ, ಕುಟುಂಬದಿಂದಲೇ ,ಪ್ರಾರಂಭವಾಗಬೇಕು ಅನ್ನುವಂತೆ, ಜಾಗತಿಕವಾಗಿ ಮಹಿಳೆಗೆ ಸ್ಥಾನ ಸಿಗಬೇಕೆಂಬುದರ ಮೊದಲು ಮನೆಯಲ್ಲೇ, ಕುಟುಂಬದಲ್ಲೇ ಆಕೆಗೆ ಸ್ವತಂತ್ರ ಸಮಾನತೆ ಸಿಗಲಿ.
ಹಾಗಾದರೆ, ಬರೀ ಸಾಮಾಜಿಕ,ಆರ್ಥಿಕ , ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ನೀಡಿದ್ದೇವೆಂದು ಉಕ್ತಿಯಲ್ಲಿ ಕೇಳಿದ್ದೆ ಆಯಿತು, ದಶಕಗಳೇ ಕಳೆದರು ಇನ್ನೂ ಬಗೆಹರಿಯದ ‘ನಾರಿಶಕ್ತಿ ವಂದನ್ ಅಧಿನಿಯಮ ‘ 33% ಮೀಸಲಾತಿಯನ್ನೇ ನೀಡಲು ಮನಸ್ಸೇ ಒಪ್ಪುತ್ತಿಲ್ಲ ನಮ್ಮ ಪುರುಷ ಪ್ರಧಾನ ಸಮಾಜಕ್ಕೆ. ಇದು ಬದಲಾಗಬೇಕೆಂದರೆ ,ನಿತ್ಯ ಕೈಗೊಳ್ಳುವ ನಿರ್ಧಾರಗಳಲ್ಲಿ, ಧರಿಸುವ ಬಟ್ಟೆeಯ ಆಯ್ಕೆಯಲ್ಲಿ, ಆಕೆಯ ಆಲೋಚನೆಯಲ್ಲಿ , ದುಡಿಮೆಯಲ್ಲಿ, ಖರ್ಚು ಮಾಡುವ ಹಣದಲ್ಲಿ, ಸಂಗಾತಿಯ ಆಯ್ಕೆಯಲ್ಲಿ, ಮಕ್ಕಳ ಪಡೆಯುವ ನಿರ್ಧಾರದಲ್ಲಿ , ಶಿಕ್ಷಣ , ಉದ್ಯೋಗ, ಗೌರವ, ಆಸ್ತಿಯಲ್ಲಿ ಸಮಾನ ಹಕ್ಕನ್ನು ನಾವು ಪಡೆಯಬೇಕು.ಇದನ್ನ ನೀಡುವವರಾರು? ಎಂದು ಪ್ರಶ್ನಿಸುವ ಬದಲು, ನೀವ್ಯಾಕೆ ನೀಡಬೇಕು ನಾವೇ ಪಡೆದುಕೊಳ್ಳುತ್ತೇವೆ ಎಂಬ ದಿಟ್ಟ ನಿರ್ಧಾರದೆಡೆಗೆ ಸಾಗಬೇಕು.ಹೀಗೆ ನೋಡಿದರೆ ಇವೆಲ್ಲದರಲ್ಲೂ ಆಕೆಗೆ ನಿಷಿದ್ಧ ಸ್ಥಾನವೇ ಇದೆ, ಆದ್ದರಿಂದ ಯಾವಾಗ ಆಕೆ ಆರ್ಥಿಕವಾಗಿ ಸಬಲಳಾಗುವಳೋ ಅಂದು ಸಮತೆಯ ಒಂದೊಂದೇ ಮೆಟ್ಟಿಲನ್ನು ಹತ್ತಿ ಸಮಾನತೆಯ ಗುರಿ ಮುಟ್ಟಿ ಸರ್ವರಿಗೂ ಸಿಂಹ ಸ್ವಪ್ನವಾಗುವಳು.
ಪ್ರಮುಖ ಸ್ತ್ರೀವಾದಿ ಚಿಂತಕಿ
‘ *ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್* ‘ ರವರ
*ಎ ವಿಂಡಿಕೇಷನ್ ಆಫ್ ದಿ ರೈಟ್ಸ್ ಆಫ್ ದಿ ವುಮನ್(1792)* ಕೃತಿಯಲ್ಲಿ ಉಲ್ಲೇಖಿಸುವಂತೆ , “ಮಹಿಳೆಯರ ಮನಸ್ಸನ್ನು ಜ್ಞಾನದಿಂದ ಬಲಪಡಿಸಿ, ಆಗ ಕುರುಡು ಆಜ್ಞಾಪಾಲನೆ ಅಥವಾ ಗುಲಾಮಗಿರಿಗೆ ಅಂತ್ಯ ಹಾಡಬಹುದು” ಅರ್ಥಾತ್ ಮಹಿಳೆಯರು ಪುರುಷರ ಮೇಲೆ ಅಧಿಕಾರ ಹೊಂದಬೇಕೆಂದು ನಾನು ಬಯಸುವುದಿಲ್ಲ; ಬದಲಿಗೆ ಅವರು ತಮ್ಮ ಸ್ವಂತ ಬದುಕಿನ ಮೇಲೆ ಸಂಪೂರ್ಣ ಅಧಿಕಾರ ಮತ್ತು ನಿಯಂತ್ರಣ ಹೊಂದಿರಬೇಕೆಂದು ಬಯಸುತ್ತೇನೆ”. ಎಂಬುದು ಜಾಗತಿಕವಾಗಿ ಕ್ರಾಂತಿಯನ್ನು ಹಚ್ಚಿದ ವಿಚಾರಗಳು.
ಹಾಗಾಗಿ ಬರೀ ಹೆಣ್ಣೆಂದು ಉಲ್ಲೇಖಿಸಿ, ಆ ಪದಕ್ಕೆ ಅಶಕ್ತೆ ಎಂಬ ಕಳಂಕವನ್ನು ಕೊಟ್ಟಿದ್ದು ಸಾಕು, ಹೆಣ್ಣೆಂದರೆ ಸಾಧಕಿ, ಧೈರ್ಯ, ಬಲ, ಪರಿಪೂರ್ಣತೆ, ದುರ್ಗೆ, ಸದಾ ಬೆಳಕು ನೀಡುವ ಕಿರಣ, ಎನ್ನುವ ಸಮತೆಯ ಹಾದಿ ಮುನ್ನಡೆಯಲಿ. ಸರ್ವರಿಗೂ ಶರಣು ಶರಣಾರ್ಥಿ.
ಕಾವ್ಯ ಕಡ್ಲಿಗೌಡ್ರ, ಹಿರೇಕುರುವತ್ತಿ,
ಎಂ ಎ, ರಾಜ್ಯಶಾಸ್ತ್ರ ವಿಭಾಗ,
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.





Any questions related to ಸ್ತ್ರೀ ಸಮಾನತೆಗೆ , ಸಮತೆ ಅಗತ್ಯ.?