ಹುಣಸಗಿ.22.ಸೆಪ್ಟೆಂಬರ್.26: ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ನಕಲಿ ದಾಖಲೆ ಪ್ರಕರಣಗಳು ಬೆಳಕಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶ್ರೀನಿವಾಸಪುರದ ಅತಿಥಿ ಶಿಕ್ಷಕರೊಬ್ಬರು ಏಕಕಾಲಕ್ಕೆ ಎರಡು ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ನಕಲಿ ದಾಖಲೆ ಸಲ್ಲಿಸಿ ಡಬಲ್ ಪಗಾರ್ ಪಡೆದ ಪ್ರಕರಣ ಬೆಳಕಿಗೆ ಬಂದಿದೆ.ರಮೇಶ ರಾಠೋಡ ಎನ್ನುವವರು ಎರಡೂಕಡೆ ಪಗಾರ್ ಪಡದು ಸಿಕ್ಕಿಬಿದ್ದರು.
2025-26ನೇ ಸಾಲಿನಲ್ಲಿ ವಜ್ಜಲ್ ಮತ್ತು ಬಾಚಿಮಟ್ಟಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸಿರುವ ಬಗ್ಗೆ ದಾಖಲೆ ಸಲ್ಲಿಸಿ ಎರಡೂ ಶಾಲೆಗಳಿಂದ ವೇತನ ಪಡೆದಿದ್ದಾರೆ.
ಏಕಕಾಲಕ್ಕೆ 2 ಶಾಲೆಯಲ್ಲಿ ಕರ್ತವ್ಯ ಎಂದು ದಾಖಲೆ ಸೃಷ್ಟಿಸಿ ಡಬಲ್ ಪಗಾರ್ ಪಡೆದ ಅತಿಥಿ ಶಿಕ್ಷಕ
ಬಾಚಿಮಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ ರಾಠೋಡ (ಡಿಡಿಒ ಕೋಡ್: 303460), 2025-26ನೇ ಸಾಲಿನಲ್ಲಿ ವಜ್ಜಲ್ ಸರ್ಕಾರಿ ಪ್ರೌಢಶಾಲೆಗೂ (ಡಿಡಿಒ ಕೋಡ್: 303820) ಅತಿಥಿ ಶಿಕ್ಷಕರಾಗಿ ನೇಮಕ ಹೊಂದಿ ದಾಖಲೆಗಳನ್ನು ಸಲ್ಲಿಸಿ ವೇತನ ಪಡೆದಿದ್ದಾರೆ.
ರಮೇಶ ರಾಠೋಡ ಅವರ ಕಕ್ಕೇರಾ ಎಸ್ಬಿಐ ಶಾಖೆಯ ಖಾತೆ ಸಂಖ್ಯೆಗೆ ವಜ್ಜಲ್ ಶಾಲೆಯಿಂದ ಕೆ-2 ಬಿಲ್ ಟೋಕನ್ ಸಂಖ್ಯೆ 2515442080ರ ಮೂಲಕ ವೇತನ ಜಮೆಯಾಗಿದೆ. ಇದೇ ಖಾತೆಗೆ ಬಾಚಿಮಟ್ಟಿ ಸರ್ಕಾರಿ ಪ್ರೌಢಶಾಲೆಯಿಂದಲೂ ಕೆ-2 ಬಿಲ್ ಟೋಕನ್ ಸಂಖ್ಯೆ 2516812864ರ ಮೂಲಕ ಹಣ ಜಮೆಯಾಗಿರುವುದು ದಾಖಲೆಗಳು ಹೇಳುತ್ತವೆ. ಜುಲೈ 2025ರ ಹಾಜರಾತಿ ನೋಂದಣಿಯಲ್ಲಿಯೂ ರಮೇಶ ರಾಠೋಡ ಅವರ ಹೆಸರು ಎರಡೂ ಶಾಲೆಗಳಲ್ಲಿ ನಮೂದಾಗಿದೆ.
ನಿಯಮದಂತೆ ಅತಿಥಿ ಶಿಕ್ಷಕರು ಒಂದು ಶಾಲೆಯಲ್ಲಿ ಪೂರ್ಣಾವಧಿ ಕಾರ್ಯ ನಿರ್ವಹಿಸಬೇಕಾಗಿದ್ದು, 12 ಕಿ.ಮೀ. ಅಂತರದಲ್ಲಿರುವ ಎರಡು ಶಾಲೆಗಳಲ್ಲಿ ಒಂದೇ ಸಮಯದಲ್ಲಿ ಹಾಜರಾತಿ ಹೇಗೆ ಸಾಧ್ಯ. ಏಕಕಾಲಕ್ಕೆ ಎರಡೂ ಶಾಲೆಗಳಲ್ಲಿ ಬೋಧನೆ ಮಾಡಲು ಹೇಗೆ ಸಾಧ್ಯ. ಇದನ್ನು ಮುಖ್ಯಗುರುಗಳು ಗಮನಿಸಲಿಲ್ಲವೇ, ಮುಖ್ಯ ಶಿಕ್ಷಕರ ಸಹಕಾರ ಇಲ್ಲದೇ ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಾಲ ಮುಖ್ಯಶಿಕ್ಷಕರು ಹೇಳುವುದೇನು?
ರಮೇಶ ರಾಠೋಡ ನಮ್ಮ ಶಾಲೆಯಲ್ಲಿ ಮೂರು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದ ಕಾರಣ ಗೈರಾಗುತ್ತಿದ್ದರು ಎಂದು ಬಾಚಿಮಟ್ಟಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾನಗೌಡ ಬಿರಾದಾರ್ ಹೇಳುತ್ತಾರೆ.
ವಜ್ಜಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರ ಕೊರತೆ ಇದ್ದ ಕಾರಣ ರಮೇಶ ರಾಠೋಡ ಅವರನ್ನು ನೇಮಿಸಿಕೊಂಡಿದ್ದೆವು. ಅವರು ಎಂಟು ತಿಂಗಳು ಕಾರ್ಯ ನಿರ್ವಹಿಸಿದ್ದಕ್ಕೆ ಎಂಟು ತಿಂಗಳ ವೇತನ ಪಾವತಿಸಲಾಗಿದೆ. ಅವರು ಬೇರೆ ಶಾಲೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವುದು ತಿಳಿದ ಬಳಿಕ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ನಂತರ ಅವರು ಮತ್ತೆ ನಮ್ಮ ಶಾಲೆಗೆ ಸೇರಿಕೊಂಡಿದ್ದು, ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳಲಾಗಿದೆ ಎಂದು ವಜ್ಜಲ್ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಗುರುಬಸಪ್ಪ ಅಪ್ಪಗೋಳ್ ಹೇಳಿದ್ದಾರೆ.
“ರಾಜ್ಯದ ಎಚ್.ಆರ್.ಎಂಎಸ್ ತಂತ್ರಾಂಶದಲ್ಲಿ ಒಬ್ಬರ ಹೆಸರು ಎರಡು ಕಡೆ ಕಾಣಿಸಿಕೊಳ್ಳಲು ಸಾಧ್ಯವಿಲ್ಲ, ಅದು ಸ್ಥಳೀಯ ಮಟ್ಟದಲ್ಲಿ ನಡೆದಿರುವ ಲೋಪವಾಗಿರಬಹುದು. ಈಗಾಗಲೇ ತನಿಖಾ ತಂಡ ರಚಿಸಲಾಗಿದೆ.”
-ಚನ್ನಬಸಪ್ಪ ಮುಧೋಳ್, ಡಿಡಿಪಿಐ ಯಾದಗಿರಿ
“ರಮೇಶ ರಾಠೋಡ ಪ್ರಕರಣ ಗಮನಕ್ಕೆ ಬಂದಿದೆ. ಕೆ-2 ಬಿಲ್, ಹಾಜರಾತಿ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಶಿಕ್ಷಕ ಮತ್ತು ಸಹಕರಿಸಿದ ಮುಖ್ಯಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.”
-ನಿಂಗರಾಜ ಮೂಲಿಮನಿ, ಬಿಇಒ, ಸುರಪುರ
“ನಾನು ಯಾವುದೇ ಕಳವು ಮಾಡಿಲ್ಲ, ಮಲ್ ಶಾಲೆಯ ಮುಖ್ಯಗುರು ಬರುವಂತೆ ತಿಳಿಸಿದ್ದರಿಂದ ಅಲ್ಲಿಗೆ ತೆರಳಿ ಹಿಂದಿ ಬೋಧಿಸಿದ್ದೇನೆ. ಆದರೆ ಕಳೆದ ಮೂರು ವರ್ಷಗಳಿಂದ ಬಾಟಿಮಟ್ಟಿ ಸರ್ಕಾರಿ ಶಾಲೆಯಲ್ಲಿಯೇ ಸೇವೆ ಸಲ್ಲಿಸಿದ್ದೇನೆ.”
ರಮೇಶ ರಾಠೋಡ್, ಅತಿಥಿ ಶಿಕ್ಷಕ





Any questions related to ನಕಲಿ ದಾಖಲೆ ಸಲ್ಲಿಸಿ ಡಬಲ್ ಪಗಾರ್ ಪಡೆದ ಪ್ರಕರಣ!?