ಬೆಂಗಳೂರು.21.ಸೆಪ್ಟೆಂಬರ್.26:: ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ, ರೈತರ ವಿವಿಧ ಸಮಸ್ಯೆಗಳು, ಪಶ್ಚಿಮ ಘಟ್ಟ ರಕ್ಷಣೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ಕುರಿತು ಚರ್ಚೆ ಮಾಡಲು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ 3 ದಿನಗಳ ವಿಶೇಷ ಸೆ.21ರಿಂದ ಅಧಿವೇಶನ ಪ್ರಾರಂಭವಾಗಲಿದೆ.
ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನವು ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಮತ್ತು ಗದ್ದಲದ ಹಿನ್ನೆಲೆಯಲ್ಲಿ ಆಗಸ್ಟ್ 24, 2026 ರಂದು ನಿಗದಿತ ಅವಧಿಗಿಂತ ಮೂರು ದಿನ ಮುಂಚಿತವಾಗಿಯೇ (ಅರ್ಧಕ್ಕೆ) ಅನಿರ್ದಿಷ್ಟಾವಧಿ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಸೆ.21ರಿಂದ ನಡೆಸಲು ನಿರ್ಧರಿಸಲಾಗಿದೆ.
ವಿಶೇಷ ಅಧಿವೇಶನ
ಈ ಮೂರು ದಿನ ನಡೆಸುವ ಅಧಿವೇಶನ ವಿಶೇಷವಾಗಿ ಇರಲಿದೆ. ಇದರಲ್ಲಿ ರಾಜ್ಯದ ಎರಡು ಪ್ರಮುಖ ಸವಾಲುಗಳಾದ ಬರ ಪರಿಸ್ಥಿತಿ ಮತ್ತು ಕಸ್ತೂರಿರಂಗನ್ ವರದಿ ಕೇಂದ್ರಬಿಂದುವಾಗುವ ನಿರೀಕ್ಷೆಯಿದೆ. ಡಾ. ಕೆ.ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ತಂಡವು ವರದಿ ನೀಡಿದ್ದು, ಅದನ್ನ ಆಧರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಆತಂಕ ವ್ಯಕ್ತವಾಗಿದೆ. ವರದಿಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ರಾಜ್ಯದ ಸ್ಪಷ್ಟ ನಿಲುವನ್ನು ನಿರ್ಣಯದ ಮೂಲಕ ಕೇಂದ್ರಕ್ಕೆ ತಲುಪಿಸುವುದು ಈ ಅಧಿವೇಶನದ ಮುಖ್ಯ ಉದ್ದೇಶವಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಬರಗಾಲ ಸ್ಥಿತಿ ತೀವ್ರವಾಗಿದೆ. ವಿವಿಧ ಕಡೆಗಳಲ್ಲಿ ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರು, ಜಾರುವಾರುಗಳಿಗೆ ನೀರಿನ ಕೊರತೆಯಾಗಿದೆ. ವಿದ್ಯುತ್ ಅಭಾವವೂ ತೀವ್ರಗೊಂಡಿದೆ. ಕೃಷಿ ಕ್ಷೇತ್ರಕ್ಕೆ ಸಂಕಷ್ಟ ಎದುರಾಗಿದೆ. ಇದೆಲ್ಲದಕ್ಕೂ ತುರ್ತು ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಅಧಿವೇಶನ ಕರೆಯಲಾಗಿದೆ. ನಾಳೆಯಿಂದ ಸೆ.23ರವರೆಗೆ ನಡೆಯಲಿರುವ ವಿಶೇಷ ಅಧಿವೇಶನವನ್ನು ರೈತರ ಸಮಸ್ಯೆ ಮತ್ತು ಬರ ಪರಿಸ್ಥಿತಿಯ ಚರ್ಚೆಗೆ ಬಳಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಹೇಳಿದ್ದಾರೆ.
ಕಸ್ತೂರಿ ರಂಗನ್ ವರದಿ ಸಮಗ್ರ ಚರ್ಚೆ
ವಿಶೇಷ ಅಧಿವೇಶನ ನಡೆಯುತ್ತಿರುವುದರ ಮುಖ್ಯ ಉದ್ದೇಶ ಕಸ್ತೂರಿ ರಂಗನ್ ವರದಿ ಬಗ್ಗೆ ಸಮಗ್ರ ಚರ್ಚೆ ಮಾಡುವುದು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್ ವರದಿಯಿಂದ ಪರಿಣಾಮ ಬೀರುವ ಪ್ರದೇಶಗಳ ಕುರಿತು ಸ್ಥಳೀಯ ವಾಸ್ತವಾಂಶ ಆಧಾರಿತ ಸಮೀಕ್ಷೆಯ ಅಗತ್ಯವನ್ನೂ ಪ್ರಸ್ತಾಪಿಸಿದ್ದಾರೆ. ಅದೇ ರೀತಿ ಬೆಂಗಳೂರು-ಮೈಸೂರು ಇನ್ಫಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಆರೋಪಗಳು, ಬಿಡದಿ ಉಪನಗರ ಯೋಜನೆ ಸೇರಿದಂತೆ ಈ ಹಿಂದೆ ಸಮರ್ಪಕವಾಗಿ ಚರ್ಚೆಯಾಗದ ವಿಷಯಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆಯೂ ಇದೆ. ಇದರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕೇವಲ ನಿರ್ಣಯ ಕೈಗೊಳ್ಳುವ ವೇದಿಕೆಯಾಗದೆ, ಸರ್ಕಾರ-ಪ್ರತಿಪಕ್ಷಗಳ ನಡುವೆ ನೀತಿ ಮತ್ತು ಆಡಳಿತದ ಕುರಿತು ತೀವ್ರ ವಾಗ್ವಾದಕ್ಕೂ ಕಾರಣವಾಗುವ ಸಾಧ್ಯತೆಯಿದೆ.3 ದಿನ ಮೊದಲೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಅಧಿವೇಶನ
ಕರ್ನಾಟಕ ವಿಧಾನಮಂಡಲ ಅಧಿಕವೇಶನ ಆಗಸ್ಟ್ 13ರಿಂದ ಆರಂಭವಾಗಿತ್ತು. ಆದರೆ ಆಗಸ್ಟ್ 24ರಂದು ಅರ್ಧಕ್ಕೇ ಸ್ಥಗಿತಗೊಳ್ಳಲಾಗಿತ್ತು. ವಿಪಕ್ಷಗಳ ಗಲಾಟೆಗೆ ಬೇಸತ್ತು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟಾಚಾರದಲ್ಲಿ ಆರೋಪಿಯಾಗಿದ್ದ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದೇ ವಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿತ್ತು.
ನಾಗೇಂದ್ರ ಅವರನ್ನ ಸಚಿವ ಸ್ಥಾನದಿಂದ ತೆಗೆಯುವವರೆಗೂ ನಾವು ಸದನ ನಡೆಯಲು ಬಿಡೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಹಾಗಾಗಿಯೇ ಅಧಿವೇಶನವನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಹಲವು ಚರ್ಚೆಗಳು ಬಾಕಿ ಇದ್ದವು.





Any questions related to 21ಸೇ ಇಂದಿನ ವಿಶೇಷ ಅಧಿವೇಶನ ಮತ್ತು ಚರ್ಚೆಯ ಮುಖ್ಯಾಂಶಗಳು!?