Home » ಲೈವ್ ನ್ಯೂಸ್ » 15 ಸಾವಿರ ಶಿಕ್ಷಕರ ಭರ್ತಿ ಇಂಗ್ಲಿಷ್ ಕಡ್ಡಾಯ ಕನ್ನಡ ಮೇಷ್ಟ್ರುಗಳಿಗೆ ಕೊಕ್ ?

15 ಸಾವಿರ ಶಿಕ್ಷಕರ ಭರ್ತಿ ಇಂಗ್ಲಿಷ್ ಕಡ್ಡಾಯ ಕನ್ನಡ ಮೇಷ್ಟ್ರುಗಳಿಗೆ ಕೊಕ್ ?

Facebook
X
WhatsApp
Telegram

ಬೆಂಗಳೂರು.18.ಜುಲೈ.26: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 15 ಸಾವಿರ ಹುದ್ದೆಗಳು ಸರ್ಕಾರ ನೇಮಕಾತಿ ಪ್ರಕ್ರಿಯ ಪ್ರಾರಂಭಿಸಿದೆ ಆದರೆ ಕನ್ನಡ ಉಳಿಸಿ, ಬೆಳೆಸಬೇಕಾದ ಸರ್ಕಾರವೇ ಹಂತ-ಹಂತವಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಮೂಲೆಗುಂಪು ಮಾಡಲು ಹೊರಟಿದೆಯೇ? ಇಂತಹದ್ದೊಂದು ಗಂಭೀರ ಚರ್ಚೆ ಮತ್ತು ಆಕ್ರೋಶವೀಗ ಶಿಕ್ಷಣ ವಲಯದಲ್ಲಿ ಕೇಳಿ ಬರುತ್ತಿದೆ. ಶಾಲಾ ಶಿಕ್ಷಣ ಇಲಾಖೆಯು ಭರ್ತಿ ಮಾಡಲು ಮುಂದಾಗಿರುವ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಹಾಗೂ ಆಂಗ್ಲ ಭಾಷಾ ಹೇರಿಕೆಗೆ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

2026-27ನೇ ಸಾಲಿನಿಂದ ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳ ಸಬಲೀಕರಣ ಹಾಗೂ ದ್ವಿಭಾಷಾ ಮಾಧ್ಯಮವನ್ನು ವಿಸ್ತರಿಸಲು ಸರ್ಕಾರ ಒಲವು ತೋರಿದೆ. ಆದರೆ, ಇದನ್ನೇ ನೆಪವಾಗಿಸಿಕೊಂಡು ಹೊಸ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.ಇಷ್ಟೇ ಅಲ್ಲದೆ, ಗಣಿತ, ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೂ ಇಂಗ್ಲಿಷ್‌ ಭಾಷಾ ಪ್ರೌಢಿಮೆಯನ್ನು ಕಡ್ಡಾಯಗೊಳಿಸಿ, ಪ್ರಾಥಮಿಕ ಹಂತದಲ್ಲೂ ಶೇ.50ರಷ್ಟು ಅಂಕಗಳನ್ನು ನಿಗದಿಪಡಿಸಲಾಗಿದೆ.

ಸರ್ಕಾರದ ಈ ಗುಪ್ತ ಕಾರ್ಯಸೂಚಿಯು ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದಲ್ಲೇ ಓದಿ ಬಂದ ಸಾವಿರಾರು ಪ್ರತಿಭಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗದ ಸಮಾನ ಅವಕಾಶವನ್ನು ನಿರಾಕರಿಸುವಂತಿದೆ.


ಸಿಎಂಗೆ ಪ್ರಾಧಿಕಾರದ ಪತ್ರ

ಸರ್ಕಾರದ ಈ ನಿರ್ಧಾರದ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ . ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದು ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.

”ಜಗತ್ತಿನಾದ್ಯಂತ ನಡೆದಿರುವ ಶಿಕ್ಷಣ ಸಂಶೋಧನೆಗಳು ಮಗುವಿನ ಬೌದ್ಧಿಕ ಮತ್ತು ಸೃಜನಶೀಲ ಬೆಳವಣಿಗೆಗೆ ಮಾತೃಭಾಷೆಯೇ ಅತ್ಯುತ್ತಮ ಮಾಧ್ಯಮ ಎಂದು ಸಾರಿವೆ. ಇಂತಹ ಸಂದರ್ಭದಲ್ಲಿ ತಾಯ್ನುಡಿಯ ಸ್ಥಾನವನ್ನು ದುರ್ಬಲಗೊಳಿಸುವುದು ಮುಂದಿನ ಪೀಳಿಗೆಗೆ ಕನ್ನಡದೊಂದಿಗಿನ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಕಡಿದುಕೊಳ್ಳುವಂತೆ ಮಾಡುತ್ತದೆ. ಇದು ರಾಜ್ಯದ ಭಾಷಾ ನೀತಿಗೆ ಬಗೆಯುವ ಗಂಭೀರ ದ್ರೋಹ ಎಂದು ಆಕ್ಷೇಪಿಸಿದ್ದಾರೆ. ಅಲ್ಲದೆ, ಇಂಗ್ಲಿಷ್‌ ಕಡ್ಡಾಯದ ನಿಯಮವನ್ನು ತಕ್ಷಣವೇ ಹಿಂಪಡೆದು, ಕನ್ನಡ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಿಕ್ಷಕರ ಹುದ್ದೆ ವಿವರ

ಶಿಕ್ಷಕರ ಹುದ್ದೆ ಖಾಲಿ ಇರುವುದು: 58,000

ಸರ್ಕಾರ ಭರ್ತಿ ಮಾಡುತ್ತಿರುವುದು: 15,000
ಕಡೆಗಣನೆ ಏಕೆ? ಸರ್ಕಾರಿ ವಾದ

1. ಕನ್ನಡ ಮಾಧ್ಯಮ ಓದುವ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ

2. ಈಗಾಗಲೇ ನೇಮಕವಾದ ಭಾಷಾ ಶಿಕ್ಷಕರ ಹುದ್ದೆ ತೆರವಾಗಿಲ್ಲ

3. ಆಂಗ್ಲಮಾಧ್ಯಮ, ಖಾಸಗಿ ಶಾಲೆಗಳತ್ತ ಹೆಚ್ಚಿದ ಪೋಷಕರ ಒಲವು

4. ದ್ವಿಭಾಷಾ ಕಲಿಕೆ ಹಿನ್ನೆಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರ ಕಡೆಗಣನೆ

5. ಬಹುತೇಕ ಕನ್ನಡ ಶಿಕ್ಷಕರಿಗೆ ಆಂಗ್ಲಮಾಧ್ಯಮ ಬೋಧನೆ ಕಷ್ಟ
ಏನು ಆಗಬೇಕು ?

*ಭಾಷಾ ಶಿಕ್ಷಕರಿಗೆ ಶೇ.50ರಷ್ಟು ಆಂಗ್ಲಭಾಷೆ ಅಂಕ ಪರಿಗಣನೆ ಬೇಡ

* ಖಾಲಿ ಇರುವ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ

* ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ಮಯ ಮಾಡುವ ಹಿಡನ್‌ ಅಜೆಂಡಾ ನಿಲ್ಲಲಿ

“ರಾಜ್ಯದಲ್ಲಿ ಈಗಾಗಲೇ ಕನ್ನಡ ಮಾಧ್ಯಮದಲ್ಲಿ ಮಕ್ಕಳ ಕೊರತೆಯಿದೆ. ಅಳಿದುಳಿದ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸದೆ ಹೋದರೆ ಮಾತೃ ಭಾಷೆಯಲ್ಲಿ ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಕನ್ನಡ ಶಿಕ್ಷಕರನ್ನು ಕೂಡ ನೇಮಕಾತಿಯಲ್ಲಿ ಪರಿಗಣಿಸಬೇಕು.”

ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

“15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕುರಿತ ಕರಡು ಪ್ರತಿ ಇನ್ನೂ ಸರ್ಕಾರದ ಹಂತದಲ್ಲಿದೆ. ಶಾಲಾ ಶಿಕ್ಷಣ ಇಲಾಖೆಗೆ ಇನ್ನೂ ಕೂಡ ಆದೇಶದ ಪ್ರತಿ ತಲುಪಿಲ್ಲ.”

-ಸುರಳ್ಕರ್‌ ವಿಕಾಸ್‌ ಕಿಶೋರ್‌, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology