ಬೆಂಗಳೂರು.15.ಅ: ಕರಾವಳಿಯ ಪ್ರಮುಖ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದ ಹೆಸರನ್ನು ಅಧಿಕೃತವಾಗಿ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಕಂದಾಯ ಇಲಾಖೆಯು ಮಂಗಳವಾರ (ಅಕ್ಟೋಬರ್ 13) ಕರಡು ಅಧಿಸೂಚನೆಯನ್ನ ಹೊರಡಿಸಿದ್ದು, ಜಿಲ್ಲೆಯ ಹೆಸರು ಬದಲಾವಣೆ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿದೆ.
ಮಂಗಳೂರು ಜಿಲ್ಲೆಯಾಗಿ ಮರುನಾಮಕರಣ: ರಾಜ್ಯ ಸಂಪುಟ ಸಭೆಯ ಮಹತ್ವದ ನಿರ್ಧಾರ
ಕಳೆದ ಸೆಪ್ಟೆಂಬರ್ 18ರಂದು ಮಂಗಳೂರು ನಗರದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಜಿಲ್ಲೆಯ ಹೆಸರು ಬದಲಾವಣೆಯ ಕುರಿತು ಪ್ರಸ್ತಾಪಿಸಿ, ಘೋಷಣೆ ಮಾಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯನ್ನ ಮಂಗಳೂರು ಜಿಲ್ಲೆ ಎಂದು ಕರೆಯಬೇಕು ಎಂಬುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಕರಾವಳಿ ಭಾಗದ ಅನೇಕ ರಾಜಕೀಯ ಮುಖಂಡರು, ಸಾಮಾಜಿಕ ಚಿಂತಕರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ಮುಖಂಡರು ಸರ್ಕಾರಕ್ಕೆ ಈ ಕುರಿತು ನಿರಂತರವಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಈ ಎಲ್ಲಾ ಮನವಿಗಳನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇದೀಗ ಆಡಳಿತಾತ್ಮಕವಾಗಿ ಹೆಸರು ಬದಲಾಯಿಸಲು ಅಂತಿಮ ಹೆಜ್ಜೆ ಇಟ್ಟಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಕರಡು ಅಧಿಸೂಚನೆ ಪ್ರಕಟ
ಕಂದಾಯ ಇಲಾಖೆ ಹೊರಡಿಸಿರುವ ಈ ಕರಡು ಅಧಿಸೂಚನೆಯು, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಯಮಾವಳಿಗಳ ಅನ್ವಯ ಪ್ರಕಟಗೊಂಡಿದೆ. ಸರ್ಕಾರದ ನಿಯಮಗಳ ಪ್ರಕಾರ, ಯಾವುದೇ ಒಂದು ಜಿಲ್ಲೆ, ತಾಲೂಕು ಅಥವಾ ಗ್ರಾಮದ ಹೆಸರು ಬದಲಾಯಿಸುವಾಗ ಕಾನೂನಾತ್ಮಕವಾಗಿ ಸಾರ್ವಜನಿಕರ ಅಭಿಪ್ರಾಯ ಪಡೆಯುವುದು ಕಡ್ಡಾಯವಾಗಿದೆ.
ಇದೇ ನಿಯಮದ ಅಡಿ ಸರ್ಕಾರವು ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ಅಧಿಕೃತವಾಗಿ ಅಂತಿಮ ಆದೇಶ ಹೊರಡಿಸುವ ಮುನ್ನ ಜನರ ಅಭಿಪ್ರಾಯ ತಿಳಿಯಲು ಮುಂದಾಗಿದೆ. ಮಂಗಳೂರು ಕೇವಲ ಒಂದು ನಗರವಲ್ಲ, ಅದೊಂದು ಜಾಗತಿಕ ಬ್ರಾಂಡ್. ಹಾಗಾಗಿ ಇಡೀ ಜಿಲ್ಲೆಗೆ ಅದೇ ಹೆಸರಿಡುವುದು ಸೂಕ್ತ ಎಂಬ ವಾದಕ್ಕೆ ಈಗ ಕಾನೂನಿನ ಬಲ ಸಿಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಹಿಂದೆ ಅವಿಭಜಿತವಾಗಿದ್ದಾಗ ಉಡುಪಿ ಹಾಗೂ ಮಂಗಳೂರು ಎರಡನ್ನೂ ಒಳಗೊಂಡಿತ್ತು. 1997ರಲ್ಲಿ ಉಡುಪಿ ಜಿಲ್ಲೆ ಪ್ರತ್ಯೇಕಗೊಂಡ ಬಳಿಕ ಜಿಲ್ಲೆಯ ವ್ಯಾಪ್ತಿ ಕಿರಿದಾಯಿತು. ಆದರೂ, ಹಳೆಯ ‘ದಕ್ಷಿಣ ಕನ್ನಡ’ ಎಂಬ ಹೆಸರು ಹಾಗೆಯೇ ಉಳಿದುಕೊಂಡಿತ್ತು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಕನ್ನಡಕ್ಕಿಂತ ಹೆಚ್ಚಾಗಿ ಮಂಗಳೂರು ಎಂಬ ಹೆಸರೇ ಹೆಚ್ಚು ಚಿರಪರಿಚಿತ. ಶೈಕ್ಷಣಿಕ ಕಾಶಿ, ಪ್ರಮುಖ ಬಂದರು ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಗಳೂರು ಹೆಸರನ್ನೇ ಇಡೀ ಜಿಲ್ಲೆಗೆ ಇಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂಬುದು ತಜ್ಞರ ಅಭಿಪ್ರಾಯ.
ಸಾರ್ವಜನಿಕರ ಅಭಿಪ್ರಾಯ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಈ ಕರಡು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ಮುಂದಿನ 30 ದಿನಗಳವರೆಗೆ ಸಾರ್ವಜನಿಕರು ತಮ್ಮ ಸಲಹೆ ಅಥವಾ ಆಕ್ಷೇಪಣೆಗಳನ್ನ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಹೆಸರು ಬದಲಾವಣೆಯಿಂದ ಆಗುವ ಒಳಿತು-ಕೆಡುಕುಗಳ ಬಗ್ಗೆ, ಅಥವಾ ಈ ಪ್ರಸ್ತಾವನೆಗೆ ನಿಮ್ಮ ವಿರೋಧವಿದ್ದರೆ ಅದನ್ನು ಲಿಖಿತ ರೂಪದಲ್ಲಿ ಸರ್ಕಾರಕ್ಕೆ ನೇರವಾಗಿ ತಿಳಿಸಬಹುದು.
ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನ ಮುಖ್ಯಮಂತ್ರಿಗಳ ಅಧಿಕೃತ ಇಮೇಲ್ ವಿಳಾಸ (cm.kar@nic.in), ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಇಮೇಲ್ (prs.revenue@gmail.com) ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಇಮೇಲ್ (dc.mnglr@gmail.com) ಗೆ ಕಳುಹಿಸಬಹುದಾಗಿದೆ.
30 ದಿನಗಳ ಗಡುವು ಮುಗಿದ ಬಳಿಕ, ಬಂದಿರುವ ಎಲ್ಲಾ ಪ್ರತಿಕ್ರಿಯೆಗಳನ್ನ ಪರಿಶೀಲಿಸಿ ಸರ್ಕಾರ ಹೆಸರು ಬದಲಾವಣೆಯ ಅಂತಿಮ ಆದೇಶವನ್ನ ಪ್ರಕಟಿಸಲಿದೆ.





Any questions related to ದಕ್ಷಿಣ ಕನ್ನಡ ಇನ್ಮುಂದೆ ಮಂಗಳೂರು ಜಿಲ್ಲೆ:?