ಈಶಾನ್ಯ ಶಿಕ್ಷಕರ ಕ್ಷೇತ್ರ: ಮೂರನೇ ಬಾರಿಗೆ ನಮೋಶಿ-ಮಟ್ಟೂರ ಮಧ್ಯೆ ಜಂಗಿಕುಸ್ತಿ
ಉರಿ ಬಿಸಿಲಲ್ಲೂ ಬಿರುಸಿನ ಪ್ರಚಾರ, ಶಿಕ್ಷಕರ ಮನಗೆಲ್ಲಲು ಕಸರತ್ತು
ಕಲಬುರಗಿ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಹತ್ತು ದಿನಗಳಷ್ಟೇ ಉಳಿದಿದ್ದು, ಉರಿ ಬಿಸಿಲಲ್ಲೂ ಬಿರುಸಿನ ಪ್ರಚಾರ ನಡೆಯುತ್ತಲಿದೆ. ಮತದಾರರ ಓಲೈಕೆಗಾಗಿ ಕಸರತ್ತು ತೀವ್ರಗೊಂಡಿರುವುದರಿAದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಬಿಜೆಪಿಯಿAದ ಶಶೀಲ್ ನಮೋಶಿ ಹಾಗೂ ಕಾಂಗ್ರೆಸ್‌ನಿAದ ಶರಣಪ್ಪ ಮಟ್ಟೂರ ಕಣಕ್ಕಿಳಿದಿದ್ದು, ಇದು ಇವರಿಬ್ಬರ ನಡುವಿನ ಸತತ ಮೂರನೇ ನೇರ ಹಣಾಹಣಿಯಾಗಿದೆ. 2014ರಲ್ಲಿ ಮೊದಲ ಬಾರಿಗೆ ಎದುರಾಳಿಗಳಾದಾಗ ಮಟ್ಟೂರ ಗೆಲ್ಲುವ ಮೂಲಕ ಮೊದಲ ಬಾರಿಗೆ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತಂದಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ನಂತರ 2020ರಲ್ಲೂ ಇಬ್ಬರ ಮಧ್ಯೆಯೇ ನೇರ ಪೈಪೋಟಿ ಏರ್ಪಟ್ಟಿತ್ತಲ್ಲದೇ ಮಟ್ಟೂರ ಮುಗ್ಗರಿಸಿ ನಮೋಶಿ ಗೆಲುವಿನ ನಗೆ ಬೀರಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಇದೀಗ ಮೂರನೇ ಬಾರಿಗೆ ಈ ಇಬ್ಬರೂ ಅದೇ ಪಕ್ಷಗಳಿಂದ ಸ್ಪರ್ಧಿಸಿದ್ದು, ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ತೀವ್ರ ಹಣಾಹಣಿ ಕಂಡುಬರುತ್ತಿದೆ. ಈ ಚುನಾವಣೆಯಿಂದಾಗಿ ತೀವ್ರ ಬರದ ಮಧ್ಯೆಯೂ ಕ್ಷೇತ್ರದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಉರಿ ಬಿಸಿಲನ್ನೂ ಲೆಕ್ಕಿಸದೆ ಇಬ್ಬರೂ ಅಭ್ಯರ್ಥಿಗಳು ಏಳು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಶಿಕ್ಷಕರನ್ನು ಒಲಿಸಿಕೊಳ್ಳಲು ಕಸರತ್ತು
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಈ ಕ್ಷೇತ್ರದಲ್ಲಿ ಶಿಕ್ಷಕ ಮತದಾರರ ಒಲವು ಗಳಿಸುವುದು ನಮೋಶಿ ಮತ್ತು ಮಟ್ಟೂರ ಅವರಿಗೆ ದೊಡ್ಡ ಸವಾಲಾಗಿದೆ. ಪ್ರೌಢಶಾಲಾ ಶಿಕ್ಷಕರು, ಪಿಯು, ಪದವಿ ಕಾಲೇಜು ಉಪನ್ಯಾಸಕರನ್ನು ತಲುಪಲು ಅಭ್ಯರ್ಥಿಗಳು ಹಾಗೂ ಎರಡೂ ಪಕ್ಷಗಳ ಮುಖಂಡರು ಸಭೆ, ಬೈಠಕ್, ಸಮಾಲೋಚನೆ ಮತ್ತು ವೈಯಕ್ತಿಕ ಸಂಪರ್ಕಕ್ಕೆ ಒತ್ತು ನೀಡುತ್ತಿದ್ದಾರೆ. ಬಿಜೆಪಿಗೆ ಜೆಡಿಎಸ್ ಬಲವಿರುವುದು ತುಸು ಅನುಕೂಲಕರವಾಗಿದೆ.
ಬಿಜೆಪಿ ಭದ್ರಕೋಟೆ
ಈ ಕ್ಷೇತ್ರ ಮೊದಲಿನಿಂದಲೂ ಬಿಜೆಪಿಗೆ ಒಲಿಯುತ್ತ ಕೇಸರಿ ಭದ್ರಕೋಟೆಯೆನಿಸಿದೆ. ಅಲ್ಲದೇ ಅಭ್ಯರ್ಥಿ, ಹಾಲಿ ಎಂಎಲ್‌ಸಿ ಶಶೀಲ್ ನಮೋಶಿ ಅವರಿಗೆ ಇಲ್ಲಿ ಕಳೆದ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ ಹೆಗ್ಗಳಿಕೆಯಿದೆ. ಶಿಕ್ಷಕರು ಮತ್ತು ಉಪನ್ಯಾಸಕರ ವಲಯದಲ್ಲಿ ನಿರಂತರ ಸಂಪರ್ಕ, ಪಕ್ಷದ ಸಂಘಟನಾ ಬಲ ಹಾಗೂ ತಮ್ಮ ಹಿಂದಿನ ಅವಧಿಗಳ ಸಾಧನೆಗಳು, ಕಾರ್ಯಗಳನ್ನು ಮುಂದಿಟ್ಟುಕೊAಡು ಮತ್ತೊಮ್ಮೆ ಶಿಕ್ಷಕರ ಓಲೈಕೆಯಲ್ಲಿ ತೊಡಗಿದ್ದಾರೆ.
ಮರಳಿ ಯತ್ನವ ಮಾಡುತ್ತಿರುವ ಮಟ್ಟೂರ
ಮತ್ತೊಂದೆಡೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರು ಕ್ಷೇತ್ರದಲ್ಲಿ ತಮ್ಮ ಹಿಂದಿನ ಅನುಭವ, ಶಿಕ್ಷಕರೊಂದಿಗಿನ ಒಡನಾಟ, ಸಂಪರ್ಕ ಆಧರಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದು ಹಾಗೂ ಈ ಭಾಗದಲ್ಲಿ ಪಕ್ಷದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು, ಅಹಿಂದ ವರ್ಗದ ಮತಗಳು ಗಣನೀಯ ಪ್ರಮಾಣದಲ್ಲಿರುವುದು ಅನುಕೂಲಕರವಾಗಿದೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಮೋಶಿ, ಮಟ್ಟೂರ ಅವರಲ್ಲದೇ ಜೆಡಿಯು’ನಿಂದ ಶಂಕರರೆಡ್ಡಿ ಪಾಟೀಲ್, ಆಮ್ ಆದ್ಮಿ ಪಕ್ಷದಿಂದ ಸಾಯಬಣ್ಣಾ ಜಮಾದಾರ ಸೇರಿದಂತೆ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಜೆಯ ತೊಡಕು
ದಸರಾ ರಜೆ ಶುರುವಾಗಿರುವುದರಿಂದ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಸಿಗುತ್ತಿಲ್ಲ. ಇದು ಪ್ರಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಹೀಗಾಗಿ ಅಭ್ಯರ್ಥಿಗಳು, ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆಗಳಿಗೆ ತೆರಳಿ ಪ್ರಚಾರ ನಡೆಸುತ್ತಲಿದ್ದಾರೆ.
(ಬಾಕ್ಸ್))
* ಒಟ್ಟು ಮತದಾರರು: 34,784
* ಕಲಬುರಗಿ ಜಿಲ್ಲೆಯಲ್ಲೇ ಅತಿಹೆಚ್ಚು ಮತದಾರರು
* 144 ಮತಗಟ್ಟೆಗಳ ಸ್ಥಾಪನೆ
* 13 ಅಭ್ಯರ್ಥಿಗಳು ಕಣದಲ್ಲಿ
* 23ರಂದು ಮತದಾನ, 27ರಂದು ಎಣಿಕೆ





Any questions related to ಈಶಾನ್ಯ ಶಿಕ್ಷಕ ಮತ ಕ್ಷೇತ್ರದ ಚುನಾವಣೆ, ಮೂರನೇ ಸಲ ಮಟ್ಟೂರ ನಮೋಷಿ ನಡುವೆ ಜಂಗಿ ಕುಸ್ತಿ?