ಕೇರಳ: ಜಾಮೀನಿನ ಮೇಲೆ ಹೊರಬಂದು ನೆರೆಹೊರೆಯ ತಾಯಿ-ಮಗನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ ಹಂತಕ ಚೆಂತಾಮರ (62) ಗೆ ಪಾಲಕ್ಕಾಡ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ-IV ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶ ಕೆನ್ನೆತ್ ಜಾರ್ಜ್, ಈ ಕ್ರೂರ ಹತ್ಯಾಕಾಂಡವನ್ನು ‘ಅಪರೂಪದಲ್ಲೇ ಅಪರೂಪದ’ ಪ್ರಕರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರೋಪಿ ಚೆಂತಾಮರ ಕೊಲೆ ಮಾಡಿದ ನಂತರವೂ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ನ್ಯಾಯಾಲಯದಲ್ಲೂ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.
ಜಾಮೀನಿನ ಮೇಲೆ ಹೊರಬಂದು ಮತ್ತೆ ಈ ರೀತಿಯ ಡಬ್ಬರ್ ಕೊಲೆ ಮಾಡಿರುವುದು ಆತ ಸಮಾಜಕ್ಕೆ ನಿರಂತರ ಬೆದರಿಕೆ ಎಂಬುದನ್ನು ತೋರಿಸುತ್ತದೆ ಎಂದು ಕೋರ್ಟ್ ಉಲ್ಲೇಖಿಸಿದೆ.
ವಿಚಾರಣೆ ವೇಳೆ ನ್ಯಾಯಾಧೀಶರು, “ನಿಮಗೆ ಮರಣದಂಡನೆ ಶಿಕ್ಷೆ ವಿಧಿಸಬಹುದು” ಎಂದು ತಿಳಿಸಿದಾಗ, ಚೆಂತಾಮರ “ನನಗೆ ಮರಣದಂಡನೆಯನ್ನೇ ವಿಧಿಸಿ, ನಾನು ಗಾಂಧಿಯಂತೆ ಅಲ್ಲ, ಯಾರಾದರೂ ಹೊಡೆದರೆ ವಾಪಸ್ ಹೊಡೆಯುತ್ತೇನೆ. ನಿಮಗೂ ಇದು ಅನುಭವಕ್ಕೆ ಬಂದಾಗಷ್ಟೇ ನೋವು ಅರ್ಥವಾಗುತ್ತದೆ” ಎಂದು ನ್ಯಾಯಾಧೀಶರ ಎದುರಲ್ಲೇ ಉದ್ಧಟತನ ಮೆರೆದಿದ್ದ.
ಈ ವಾದಗಳನ್ನು ಆತನ ಪಶ್ಚಾತ್ತಾಪದ ಕೊರತೆಗೆ ಸಾಕ್ಷಿಯಾಗಿ ಕೋರ್ಟ್ ಪರಿಗಣಿಸಿದೆ.2019 ರ ಆಗಸ್ಟ್ 31 ರಂದು ಚೆಂತಾಮರ ತನ್ನ ಕುಟುಂಬದ ವಿಘಟನೆಗೆ ಕಾರಣ ಎಂಬ ದ್ವೇಷದಿಂದ ಸಜಿತಾ ಎಂಬ ಮಹಿಳೆಯನ್ನು ಕಡಿದು ಕೊಂದಿದ್ದ.
ಆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಈತ, 2025 ರ ಜನವರಿ 27 ರಂದು ಸಜಿತಾಳ ಪತಿ ಸುಧಾಕರನ್ ಮತ್ತು ಆತನ 75 ವರ್ಷದ ವೃದ್ಧ ತಾಯಿ ಲಕ್ಷ್ಮಿಯನ್ನು ಮನೆಯ ಹೊರಗಡೆಯೇ ಬೆನ್ನಟ್ಟಿ ಭೀಕರವಾಗಿ ಕಡಿದು ಕೊಂದಿದ್ದ. ಕೇವಲ 18 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಪ್ರಾಸಿಕ್ಯೂಷನ್ ಪರ ವಕೀಲ ಎಂ.ಜೆ. ವಿಜಯಕುಮಾರ್ ವಾದ ಮಂಡಿಸಿದ್ದು, ನ್ಯಾಯಾಲಯ ಹಂತಕನಿಗೆ ಮರಣದಂಡನೆ ವಿಧಿಸಿ ಪೀಠದಲ್ಲಿದ್ದ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿದೆ.
Source:The Mangloru Mirror





Any questions related to ಒಂದು ಕೊಲೆಯ ಜಾಮೀನಿನ ಮೇಲೆ ಬಂದು ಮತ್ತೆ ಎರಡು ಕೊಲೆ – ಕೋರ್ಟ್ ನಲ್ಲಿ ನನ್ನ ತಂಟೆಗೆ ಬಂದರೆ ಬಿಡಲ್ಲ!?