Home » ಲೈವ್ ನ್ಯೂಸ್ » ಈ ವಿಶ್ವವಿದ್ಯಾಲಯದಲ್ಲಿ 16 ಸ್ನಾತಕೋತ್ತರ ಕೋರ್ಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ!

ಈ ವಿಶ್ವವಿದ್ಯಾಲಯದಲ್ಲಿ 16 ಸ್ನಾತಕೋತ್ತರ ಕೋರ್ಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ!

ಬೆಂಗಳೂರು.30.ಸೆಪ್ಟೆಂಬರ್.26: 2026-27ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಮಂಗಳೂರು ವಿಶ್ವವಿದ್ಯಾನಿಲಯಲ್ಲಿ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಚಾಲು ಶೈಕ್ಷಣಿಕ ವರ್ಷದಲ್ಲಿ ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಅದಕ್ಕೆ ಈ  ಕೋರ್ಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂದು ಮಂಗಳಗಂಗೋತ್ರಿಯಲ್ಲಿ ಮಂಗಳವಾರ ನಡೆದ ಸಭೆಯ ನಂತರ ಈ ವಿಷಯ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರು ತಿಳಿಸಿದರು.

‘ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸ್ನಾತಕೋತ್ತರ ಕೋರ್ಸ್‌ ನಡೆಸಲು ಕನಿಷ್ಠ 15 ವಿದ್ಯಾರ್ಥಿಗಳಿರಬೇಕು. ಅನಾಲಿಟಿಕಲ್ ಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್, ಸೈಬರ್ ಸೆಕ್ಯುರಿಟಿ, ಸಂಖ್ಯಾವಿಜ್ಞಾನ, ಪರಿಸರ ವಿಜ್ಞಾನ, ವಸ್ತು ವಿಜ್ಞಾನ ಮತ್ತು ಜಿಯೋಇನ್ಫರ್ಮ್ಯಾಟಿಕ್ಸ್, ಬಯೋಸೈನ್ಸ್ ಎಂ.ಎಸ್‌ಸಿ ಕೋರ್ಸ್‌ಗಳಿಗೆ, ಎಂ.ಇಡಿ, ಎಂ.ಕಾಂ ಎಚ್‌ಆರ್‌ಡಿ, ಎಂ.ಸಿ.ಜೆ, ಸಮಾಜಶಾಸ್ತ್ರ, ತುಳು, ಕೊಂಕಣಿ, ಹಿಂದಿ, ಸಂಸ್ಕೃತ ಎಂ.ಎ. ಕೋರ್ಸ್‌ಗಳಿಗೆ ಇಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿಸಲ್ಲಿಸಿಲ್ಲ. ಹಾಗಾಗಿ ಈ ಕೋರ್ಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದರು.

‘ಈ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಉಪನ್ಯಾಸಕರ ಕೊರತೆ ಇದ್ದು, ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಕೇವಲ ಇಬ್ಬರು ಅಥವಾ ಮೂವರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ನಾವು ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸಲು ಸಾಧ್ಯವಿಲ್ಲ. ಹಿರಿಯ ಬೋಧಕ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಮತ್ತು ಸ್ನಾತಕೋತ್ತರ ವಿಭಾಗಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು, ವಿಶ್ವವಿದ್ಯಾನಿಲಯವು ಸಂಬಂಧಿತ ವಿಭಾಗಗಳನ್ನು ವಿವಿಧ ‘ಸ್ಕೂಲ್ ಆಫ್ ಸ್ಟಡೀಸ್’ ಅಡಿಯಲ್ಲಿ ತರುತ್ತಿದೆ.

ಪ್ರಸ್ತಾವಿತ ವ್ಯವಸ್ಥೆಯಡಿ ಬಯೋಸೈನ್ಸ್, ಅಪ್ಲೈಡ್ ಬಾಟನಿ ಮತ್ತು ಅಪ್ಲೈಡ್ ಝೂವಾಲಜಿ, ಫುಡ್ ಸೈನ್ಸ್ ಮತ್ತು ಮೈಕ್ರೋಬಯಾಲಜಿ ವಿಭಾಗಗಳನ್ನು ಒಂದೇ ಸೂರಿನಡಿ ತರಲಾಗಿದೆ. ಮೆರೈನ್ ಜಿಯಾಲಜಿ ಮತ್ತು ಜಿಯಾಗ್ರಫಿ ವಿಭಾಗಗಳನ್ನು ಮತ್ತೊಂದು ಗುಂಪಿನಡಿ ತರಲಾಗುವುದು’ ಎಂದು ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 150 ಕಾಲೇಜುಗಳು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿವೆ. ಪುತ್ತೂರಿನ ಅಂಬಿಕಾ ಕಾಲೇಜು, ಜೊಕಟ್ಟೆಯ ಅಂಜುಮಾನ್ ಪ್ರಥಮ ದರ್ಜೆ ಕಾಲೇಜು, ಪ್ರೇರಣಾ ಕಾಲೇಜು ಮತ್ತು ಭಾರತಿ ಕಾಲೇಜುಗಳು ಸಂಯೋಜನೆ ಮುಂದುವರಿಸಲು ಅರ್ಜಿ ಸಲ್ಲಿಸಿಲ್ಲ ಎಂದರು.’ನೆಲ್ಯಾಡಿ ಮತ್ತು ಬನ್ನಡ್ಕದ ಘಟಕ ಕಾಲೇಜುಗಳಿಗೆ ಹೊಸ ವಿದ್ಯಾರ್ಥಿಗಳ ಸೇರ್ಪಡೆ ನಡೆದಿಲ್ಲ. ಈ ಕಾಲೇಜುಗಳನ್ನು ಸಮೀಪದ ಸರ್ಕಾರಿ ಕಾಲೇಜುಗಳ ಜೊತೆ ವಿಲೀನಗೊಳಿಸುವ ಕುರಿತು ಸರ್ಕಾರ ನಿರ್ಧರಿಸಲಿದೆ’ ಎಂದು ತಿಳಿಸಿದರು.

ಹಂಪನಕಟ್ಟೆಯ ಸಂಧ್ಯಾ ಕಾಲೇಜಿನಲ್ಲಿ ‘ಇಂಟರ್ನ್ಯಾಷನಲ್ ಬಿಸಿನೆಸ್‌’ ಎಂಬಿಎ ಕೋರ್ಸ್ ಮಾತ್ರ ಲಭ್ಯ. ಇದನ್ನೂ ವಿಶ್ವವಿದ್ಯಾನಿಲಯದ ಪ್ರಾಂಗಣಕ್ಕೆ ಸ್ಥಳಾಂತ ರಿಸಲು ಯೋಜಿಸುತ್ತಿದ್ದೇವೆ’ ಎಂದರು.

ಸಭೆಯಲ್ಲಿ ಕುಲಸಚಿವ ಸಂತೋಷ್ ಜಗಲಾಸರ್, ಕುಲಸಚಿವ (ಮೌಲ್ಯಮಾಪನ) ಎಚ್. ದೇವೇಂದ್ರಪ್ಪ ಮತ್ತು ಹಣಕಾಸು ಅಧಿಕಾರಿ ಎಸ್. ಪಂಚಲಿಂಗಸ್ವಾಮಿ ಉಪಸ್ಥಿತರಿದ್ದರು.

ಪಿಎಚ್‌.ಡಿ ಪರಿಷ್ಕೃತ ನಿಯಮಗಳಿಗೆ ಅನುಮೋದನೆ

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ರಚಿಸಿದ್ದ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಒಳಗೊಂಡಿರುವ, ಪಿಎಚ್‌,ಡಿ ಪದವಿ ಪ್ರದಾನಕ್ಕೆ ಸಂಬಂಧಿಸಿದ ಪರಿಷ್ಕೃತ ನಿಯಮಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯು ಅನುಮೋದನೆ ನೀಡಿದೆ.

ಪರಿಷ್ಕೃತ ನಿಯಮಾವಳಿಗಳನ್ನು ಸಿದ್ಧಪಡಿಸಿದ ಏಕೈಕ ವಿಶ್ವವಿದ್ಯಾನಿಲಯ ಮಂಗಳೂರು ವಿಶ್ವವಿದ್ಯಾನಿಲಯವಾಗಿದೆ. ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ಇದನ್ನು ಇತರ ಸರ್ಕಾರಿ ವಿಶ್ವವಿದ್ಯಾನಿಲಯಗಳಿಗೂ ಕಳುಹಿಸಿದೆ’ ಎಂದು ಪ್ರೊ. ಧರ್ಮ ತಿಳಿಸಿದರು.

ಹೊಸ ಕೋರ್ಸ್‌ಗಳಿಗೆ ಅನುಮೋದನೆ

ರಿಟೇಲ್ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಆಡ್-ಆನ್ ಕೋರ್ಸ್‌ಗಳ ಪರಿಷ್ಕೃತ ಪಠ್ಯಕ್ರಮಕ್ಕೆ ಹಾಗೂ ಬಿಕಾಂ (ಹ್ಯೂಮನ್ ರಿಸೋರ್ಸಸ್ ಆಪರೇಷನ್ಸ್ ಎಇಡಿಪಿ) ಕಾರ್ಯಕ್ರಮದ ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳ ಪಠ್ಯಕ್ರಮಕ್ಕೆ ಶೈಕ್ಷಣಿಕ ಮಂಡಳಿಯು ಅನುಮೋದನೆ ನೀಡಿದೆ. ಬಿ.ಎ ಗ್ರಾಮೀಣ ಅಭಿವೃದ್ಧಿ ಕೋರ್ ಕೋರ್ಸ್‌ನ ಐದನೇ ಮತ್ತು ಆರನೇ ಸೆಮಿಸ್ಟರ್‌ಗಳ ಪಠ್ಯಕ್ರಮಕ್ಕೂ ಅನುಮೋದನೆ ನೀಡಲಾಯಿತು.

ಈವೆಂಟ್, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‌: ಈವೆಂಟ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಪಠ್ಯಕ್ರಮವನ್ನು ಶೈಕ್ಷಣಿಕ ಮಂಡಳಿ ಅನುಮೋದಿಸಿದೆ. ಇವುಗಳನ್ನು ಪರಿ ಚಯಿಸಲು ವಿಶ್ವವಿದ್ಯಾನಿಲಯವು ‘ವೆಡ್ಮಿನ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕುಲಪತಿ ತಿಳಿಸಿದರು.

Author

ಪ್ರಮುಖ ಸುದ್ದಿ

Stock market

Astrology