Home » ಲೈವ್ ನ್ಯೂಸ್ » ಬಣ್ಣಗಳ ಲೋಕದಲ್ಲಿ ಹೊಸ ಕಲರವ, ಜಲವರ್ಣ ಕಾರ್ಯಾಗಾರಕ್ಕೆ ಚಾಲನೆ
ಯುವ ಕಲಾವಿದರ ಪ್ರತಿಭೆ ಅರಳಲಿ, ನಾಗಣ್ಣ ಪರಿಟ್

ಬಣ್ಣಗಳ ಲೋಕದಲ್ಲಿ ಹೊಸ ಕಲರವ, ಜಲವರ್ಣ ಕಾರ್ಯಾಗಾರಕ್ಕೆ ಚಾಲನೆ
ಯುವ ಕಲಾವಿದರ ಪ್ರತಿಭೆ ಅರಳಲಿ, ನಾಗಣ್ಣ ಪರಿಟ್

ಬೀದರ್ ಸೆ. 22ಃ ಕಲೆಯ ಮೂಲಕ ಬದುಕಿನ ಅನುಭವಗಳನ್ನು ದಾಖಲಿಸುವ ಶಕ್ತಿ ಕಲಾವಿದರಿಗಿದೆ. ಜಲವರ್ಣ ಚಿತ್ರಕಲೆ ಪ್ರಕೃತಿ, ಜನ ಜೀವನ ಹಾಗೂ ಭಾವನೆಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಮಾಧ್ಯಮವಾಗಿದ್ದು, ಯುವ ಕಲಾವಿದರು ಇಂತಹ ತರಬೇತಿ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೀದರ ಮಹಾನಗರ ಪಾಲಿಕೆ ವಲಯ ಆಯುಕ್ತ ನಾಗಣ್ಣ ಮನೋಹರ ಪರಿಟ್ ಹೇಳಿದರು.

ನಗರದ ಡಾ. ಎಸ್.ಎಂ. ಪಂಡಿತ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಬೆಳಿಗ್ಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ಆಯೋಜಿಸಿರುವ ಜಲವರ್ಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಕಲೆ ಕೇವಲ ಬಣ್ಣಗಳನ್ನು ಕಾಗದದ ಮೇಲೆ ಮೂಡಿಸುವ ಕಲೆಯಲ್ಲ. ಅದು ಕಲಾವಿದನ ಕಲ್ಪನೆ, ಭಾವನೆ ಮತ್ತು ಸುತ್ತಲಿನ ಸಮಾಜವನ್ನು ನೋಡುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಜಲ ವರ್ಣದಂತಹ ಸೂಕ್ಷö್ಮ ಕಲಾ ಪ್ರಕಾರದಲ್ಲಿ ಉತ್ತಮ ತರಬೇತಿ ಪಡೆದರೆ ಕಲಾವಿದರು ತಮ್ಮದೇ ಆದ ಕಲಾ ಶೈಲಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಸಂಚಾಲಕರಾದ ಬಸವರಾಜ ಎಲ್. ಜಾನೆ ಪ್ರಾಸ್ತಾವಿಕವಾಗಿ  ಮಾತನಾಡಿದ ಅವರು ರಾಜ್ಯದ ವಿವಿಧ ಭಾಗಗಳ ಪ್ರತಿಭಾವಂತ ಕಲಾವಿದರನ್ನು ಒಂದೆಡೆ ಸೇರಿಸಿ ಅವರ ಕಲಾ ಕೌಶಲ ವೃದ್ಧಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಗಿರಿಜನ ಉಪಯೋಜನೆಯಡಿ ಕಲಾವಿದರಿಗೆ ತರಬೇತಿ ನೀಡುವ ಮೂಲಕ ಅವರಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಡಾ. ಎಸ್.ಎಂ. ಪಂಡಿತ್ ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಕ್ಷೆ ಕವಿತಾ ಬಿ. ಪಂಚಾಕ್ಷರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಹಿರಿಯ ಕಲಾವಿದರಾದ ಪ್ರಭಾಕರ್, ಅಶೋಕ್ ಹಿರೇಮಠ, ಸೋಮಶೆಟ್ಟಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಷ್ಣುಕಾಂತ ಠಾಕೂರು, ಡಾ. ಎಸ್.ಎಂ. ಪಂಡಿತ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಸುರೇಖಾ ವಾಲ್ದೊಡ್ಡೆ, ಮಂಜುಳಾ ಜಾನೆ, ಬಿ.ಕೆ ಬಡಿಗೇರ್, ಯೋಗೇಶ್ ಮಠದ, ನಾಗರಾಜ್ ಜೋಗಿ, ಸಂತೋಷ ಹೊನ್ನಿಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಹಿರಿಯ ಕಲಾವಿದ ಬಿ.ಕೆ. ಬಡಿಗೇರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜಲವರ್ಣ ಚಿತ್ರಕಲೆಯ ವಿವಿಧ ತಂತ್ರಗಳ ಕುರಿತು ಪ್ರಾಯೋಗಿಕ ತರಬೇತಿ ನೀಡುತ್ತಿದ್ದಾರೆ.

ಹಾವೇರಿ, ಗದಗ, ಬೀದರ್, ಮೈಸೂರು, ಪಾವಗಡ, ಗುಳೇದಗುಡ್ಡ, ಇಳಕಲ್, ಧಾರವಾಡ, ದೊಡ್ಡಮಾಲೂರು, ಯಾದಗಿರಿ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಅನೇಕ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಸೆ.21 ರಿಂದ 24 ರವರೆಗೆ ನಡೆಯಲಿರುವ ಕಾರ್ಯಾಗಾರವು ಯುವ ಕಲಾವಿದರಿಗೆ ಜಲವರ್ಣ ಕಲೆಯ ಸೂಕ್ಷö್ಮತೆ ಬಣ್ಣಗಳ ಸಂಯೋಜನೆ ಹಾಗೂ ಚಿತ್ರ ರಚನಾ ತಂತ್ರಗಳನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ಕಲ್ಪಿಸಿದೆ.
ಪ್ರಾರಂಭದಲ್ಲಿ ವಿಜಯಶ್ರೀ ಸ್ವಾಗತಿಸಿದರು, ಪೀಟರ್ ನಿರೂಪಿಸಿದರೆ, ಸುಧಾರಾಣಿ ವಂದಿಸಿದರು.

ಅದೇ ಸಂದರ್ಭದಲ್ಲಿ ಶಿಭಿರಾರ್ಥಿಗಳು, ಉಪನ್ಯಾಸಕರು, ಅನೇಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Author

ಪ್ರಮುಖ ಸುದ್ದಿ

Stock market

Astrology