ಮಗುವಿಗೆ ಕುಟುಂಬದ ಪ್ರೀತಿ, ಶಿಕ್ಷಣ ಮುಖ್ಯ: ಎನ್.ಮಹೇಶಬಾಬು
ಕೊಪ್ಪಳ.23.ಸೆಪ್ಟೆಂಬರ್.26: ಮಗುವಿನ ಪೋಷಣೆ, ಬೆಳವಣಿಗೆ ಮತ್ತು ರಕ್ಷಣೆಯ ಪ್ರಾಥಮಿಕ ಜವಾಬ್ದಾರಿ ಜೈವಿಕ ಅಥವಾ ದತ್ತು ಪೋಷಕರದ್ದಾಗಿದೆ. ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಗುವನ್ನು ಸಾಂಸ್ಥಿಕ ಪೋಷಣೆಯಲ್ಲಿ (ಬಾಲಮಂದಿರ) ಇರಿಸುವುದು ಕೊನೆಯ ಆಯ್ಕೆಯಾಗಬೇಕೇ ಹೊರತು ಮೊದಲ ಆದ್ಯತೆಯಾಗಬಾರದು ಎಂದು ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾದ ಎನ್.ಮಹೇಶಬಾಬು ಹೇಳಿದರು.
ಅವರು ಇತ್ತೀಚೆಗೆ (ಸೆ. 19ರಂದು) ಕೊಪ್ಪಳದ ಸರಕಾರಿ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 (ತಿದ್ದುಪಡಿ-2021) ನಿಯಮಾವಳಿಗಳ ಕುರಿತು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ ಅವರು, “ಮಕ್ಕಳನ್ನು ದೀರ್ಘಕಾಲದವರೆಗೆ ಅನಾವಶ್ಯಕವಾಗಿ ಪಾಲನಾ ಸಂಸ್ಥೆಗಳಲ್ಲಿ ಇರಿಸಿಕೊಳ್ಳಬಾರದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ವಸತಿ ಸಹಿತ ಶಾಲೆಗಳಿಗೆ ದಾಖಲಿಸುವುದು ಅಥವಾ ಪ್ರಾಯೋಜಕತ್ವ ಯೋಜನೆಯಡಿ ನೆರವು ನೀಡಿ ಮರಳಿ ಕುಟುಂಬಕ್ಕೆ ಸೇರ್ಪಡೆಗೊಳಿಸಬೇಕು. ಜತೆಗೆ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಮುಂದುವರಿಯುತ್ತಿರುವುದನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದರು.
ಪರಿತ್ಯಜಿಸಿದ, ಒಪ್ಪಿಸಲ್ಪಟ್ಟ ಮಕ್ಕಳು ಹಾಗೂ ಪೋಷಕರಿಂದ ಪಾಲನೆ ಸಾಧ್ಯವಿಲ್ಲವೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ದೃಢಪಟ್ಟ ಮಕ್ಕಳನ್ನು ಕಾನೂನುಬದ್ಧ ‘ದತ್ತು ಪ್ರಕ್ರಿಯೆ’ಗೆ ಒಳಪಡಿಸಿ ಶಾಶ್ವತ ಕುಟುಂಬವನ್ನು ಕಲ್ಪಿಸಿಕೊಡಲು ಆದ್ಯತೆ ನೀಡಬೇಕು. ‘ಮಿಷನ್ ವಾತ್ಸಲ್ಯ’ ಯೋಜನೆಯಡಿ ಯಾವುದೇ ಮಗು ರಕ್ಷಣೆ ಮತ್ತು ಶಿಕ್ಷಣದಿಂದ ವಂಚಿತವಾಗಬಾರದು. ಬೀದಿ ಬದಿಯ ಮಕ್ಕಳು, ಭಿಕ್ಷಾಟನೆ ಹಾಗೂ ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಲುಕಿರುವ ಸಂಕಷ್ಟಕ್ಕೀಡಾದ ಮಕ್ಕಳನ್ನು ಪತ್ತೆಹಚ್ಚಲು ಸಂಬಂಧಪಟ್ಟ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಿಯಮಿತವಾಗಿ ಅನಿರೀಕ್ಷಿತ ದಾಳಿಗಳನ್ನು ನಡೆಸಿ, ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅಮರೇಶ, ಜಿಲ್ಲಾ ನಿರೂಪಣಾಧಿಕಾರಿಗಳಾದ ನಟರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಅನ್ನಪೂರ್ಣ ಹುಬಕಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಹಿಣಿ ಕೊಟಗಾರ, ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಕೃಷ್ಣಾಸಾ ಬಾಕಳೆ, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರಾದ ಪೂರ್ಣಿಮಾ ಏಳಬಾವಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ವೆಂಕಟೇಶ ದೇಶಪಾಂಡೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲಮಂದಿರದ ಸಿಬ್ಬಂದಿ ಉಪಸ್ಥಿತರಿದ್ದರು.





Any questions related to ಸರಕಾರಿ ಬಾಲಕರ ಬಾಲಮಂದಿರಕ್ಕೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರ ಭೇಟಿ.?