Home » ಲೈವ್ ನ್ಯೂಸ್ » ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು: ಶಾಸಕ ಪ್ರಭು ಚವ್ಹಾಣ

ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು: ಶಾಸಕ ಪ್ರಭು ಚವ್ಹಾಣ

ಔರಾದ.29.ಆಗಸ್ಟ್.26:ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳನ್ನು ಗೌರವಿಸಿ, ಅವುಗಳನ್ನು ಉಳಿಸಿ ಬೆಳೆಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಹೇಳಿದರು. ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆ.29ರಂದು ಅದ್ದೂರಿಯಾಗಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರೊಂದಿಗೆ ರಕ್ಷಾ ಬಂಧನ ಆಚರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಾಲಕಿಯರು ಶಾಸಕರಿಗೆ ಆರತಿ ಬೆಳಗಿ ರಾಖಿ ಕಟ್ಟಿ ಶುಭ ಹಾರೈಸಿದರು. ಶಾಸಕರು ವಿದ್ಯಾರ್ಥಿನಿಯರಿಗೆ ಸಿಹಿ ತಿನ್ನಿಸಿ, ಸಸಿಗಳನ್ನು ನೀಡಿ ಗೌರವಿಸಿದರು. ಬಳಿಕ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಸಾಲು ಸಾಲಾಗಿ ಆಗಮಿಸಿ ಶಾಸಕರಿಗೆ ರಾಖಿ ಕಟ್ಟಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ, ರಕ್ಷಾ ಬಂಧನ ನಮ್ಮ ದೇಶದ ವಿಶಿಷ್ಟ ಹಬ್ಬವಾಗಿದೆ. ಈ ದಿನ ಮಹಿಳೆಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಶುಭ ಹಾರೈಸುತ್ತಾರೆ. ಸಹೋದರರು ಸಹೋದರಿಯರ ರಕ್ಷಣೆಯ ಸಂಕಲ್ಪ ತೊಡುತ್ತಾರೆ. ಇಂತಹ ಹಬ್ಬಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ನಮ್ಮ ಮಕ್ಕಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಜೊತೆಗೆ ನಮ್ಮಲ್ಲಿ ಆಚರಣೆಯಲ್ಲಿರುವ ಸಂಸ್ಕೃತಿ, ಪರಂಪರೆಯನ್ನು ಗೌರವಿಸಬೇಕು. ಅವುಗಳನ್ನು ಉಳಿಸಿ ಬೆಳೆಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ದಿಶೆಯಲ್ಲಿ ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಎಲ್ಲ ಹಬ್ಬ-ಹರಿದಿನಗಳನ್ನು ಆಚರಿಸುತ್ತಾ ಬರುತ್ತಿದ್ದೇನೆ. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಾರ್ವಜನಿಕ ದಹಿ ಹಂಡಿ ಉತ್ಸವ, ದೀಪಾವಳಿ, ಜಾತ್ರಾ ಮಹೋತ್ಸವಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ದಸರಾ ಸಂದರ್ಭದಲ್ಲಿ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.

ಬಾಲಕಿಯರು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕು. ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ವ್ಯಯಿಸದೆ, ದೇಶದ ಹಿತಕ್ಕಾಗಿ ಏನು ಮಾಡಬಹುದು ಎಂಬುದರ ಕುರಿತು ಚಿಂತಿಸಬೇಕು. ದೇಶಕ್ಕಾಗಿ ಶ್ರಮಿಸಿದ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹಾಗೂ ಸಾವಿತ್ರಿಬಾಯಿ ಫುಲೆ ಅವರಂತೆ ಸಾಧಿಸುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಆಶೀರ್ವಚನ ನೀಡಿ, ರಕ್ಷಾ ಬಂಧನ ದೇಶದಲ್ಲಿ ಆಚರಿಸುವ ವಿಶಿಷ್ಟ ಕಾರ್ಯಕ್ರಮ ಸಹೋದರತ್ವ ಭಾವನೆಯನ್ನು ಬೆಳೆಸುವ ಅಪರೂಪದ ಹಬ್ಬ ಇದಾಗಿದೆ. ಇದನ್ನು ಸಾರ್ವಜನಿಕವಾಗಿ ಆಚರಿಸುತ್ತಿರುವ ಶಾಸಕ ಪ್ರಭು ಬಿ.ಚವ್ಹಾಣ ಅವರ ಕೆಲಸ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳ ಹಕ್ಕುಗಳ ಅರಿವು ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಅರಿವು ಕಾರ್ಯಕ್ರಮ ನಡೆಯಿತು. ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಂಬಿಕಾದೇವಿ ಕೋತಮಿರ್ ಅವರು ಮಕ್ಕಳ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಬಾಲಕಿಯರು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಆತ್ಮರಕ್ಷಣೆ ಮಾಡಿಕೊಳ್ಳುವ ಧೈರ್ಯ ಬೆಳೆಸಿಕೊಳ್ಳಬೇಕು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು. ಮುಖಂಡರಾದ ಗುರುನಾಥ ರಾಜಗೀರಾ ಅವರು ರಕ್ಷಾ ಬಂಧನ ಹಬ್ಬದ ಮಹತ್ವವನ್ನು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಅನೀಲಕುಮಾರ ಎಕಲೂರೆ, ಅಮರೇಶ್ವರ ಕಾಲೇಜಿನ ಪ್ರಾಚಾರ್ಯ ಆರ್.ಪಿ. ಮಠ, ಸಿದ್ದರಾಮರೇಶ್ವರ ಪಿಯು ಕಾಲೇಜು ಪ್ರಾಚಾರ್ಯ ನವೀನಕುಮಾರ ಉತಕಾರ್, ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೇಮಾ ಹೂಗಾರ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಧೊಂಡಿಬಾ ನರೋಟೆ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು, ಶಿಕ್ಷಕರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಓಂಪ್ರಕಾಶ ದಡ್ಡೆ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸಂದೇಶ ನೀಡಲಾಯಿತು. ಇದೇ ವೇಳೆ ರಾಷ್ಟಿçÃಯ ಕ್ರೀಡಾ ದಿನದ ಅಂಗವಾಗಿ ಮೇಜರ್ ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಮನ ಸಲ್ಲಿಸಿ ಗೌರವಿಸಲಾಯಿತು.

Author

ಪ್ರಮುಖ ಸುದ್ದಿ

Stock market

Astrology