ಹೊಸ ದೆಹಲಿ.28.ಆಗಸ್ಟ್.26: ಸಂಸ್ಥಾಪಕ ಹಾಗೂ ಮಾಧ್ಯಮ ದಿಗ್ಗಜ ಸುಭಾಷ್ ಚಂದ್ರ ಅವರ ₹22,000 ಕೋಟಿಗೂ ಅಧಿಕ ಮೌಲ್ಯದ ಸಾಲದ ಹೊಣೆಗಾರಿಕೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರ (NCLT) ಕೇವಲ ₹6 ಕೋಟಿಗೆ ಇತ್ಯರ್ಥಪಡಿಸಿ (ಸಾಲ ಮರುರಚನೆ) ರಿಯಾಯಿತಿ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಪ್ರಕ್ರಿಯೆಯನ್ನು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಖಂಡಿಸಿದ್ದು, ಎನ್ಸಿಎಲ್ಟಿ ಹಾಗೂ ಸುಭಾಷ್ ಚಂದ್ರ ಅವರ ವಿರುದ್ಧ ತೀವ್ರ ವಾಗ್ದಾಳಿ ನಡಸಿದ್ದಾರೆ.
ಸಾಮಾನ್ಯ ನಾಗರಿಕರಿಗೆ ಸಿಗದ ಇಂತಹ ವಿಶೇಷ ಸೌಲಭ್ಯಗಳು ಬೃಹತ್ ಉದ್ಯಮಿಗಳಿಗೆ ಮಾತ್ರ ಹೇಗೆ ಸಿಗುತ್ತವೆ ಎಂದು ಅಭಿಜಿತ್ ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸುಭಾಷ್ ಚಂದ್ರ ಅವರಂತಹ ಪ್ರಭಾವಿ ಉದ್ಯಮಿಗಳಿಗೆ ಸಿಗುವ ಈ ರೀತಿಯ ರಿಯಾಯಿತಿ ಸೌಲಭ್ಯಗಳು ನಮ್ಮಂತಹ ಸಾಮಾನ್ಯ ಜನರಿಗೆ ಏಕೆ ಸಿಗುವುದಿಲ್ಲ?” ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ಸಾಲ ಇತ್ಯರ್ಥ ಪ್ರಕ್ರಿಯೆಯಲ್ಲಿ ಬಾಕಿ ಉಳಿಯುವ ಬೃಹತ್ ಮೊತ್ತವನ್ನು ಹೇಗೆ ಭರಿಸಲಾಗುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲಿರುವ ಅವರು, ₹22,000 ಕೋಟಿಯ ಸಾಲವನ್ನು ಕೇವಲ ₹6 ಕೋಟಿಗೆ ಇತ್ಯರ್ಥಗೊಳಿಸಿದ ಬಳಿಕ ಉಳಿದ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ನಷ್ಟವನ್ನು ಕೊನೆಗೆ ದೇಶದ ಸಾಮಾನ್ಯ ತೆರಿಗೆದಾರರ ಹಣದಿಂದಲೇ ಭರಿಸಲಾಗುತ್ತದೆ. ಇದುವೇ ನಮ್ಮ ವ್ಯವಸ್ಥೆ ಕೆಲಸ ಮಾಡುವ ಕ್ರೂರ ವಾಸ್ತವ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಷಯ ತೀವ್ರ ಚರ್ಚೆಗೆ ಕಾರಣವಾಗಿದ್ದು, ಎನ್ಸಿಎಲ್ಟಿ ನಿರ್ಧಾರದಿಂದಾಗಿ ಸುಭಾಷ್ ಚಂದ್ರ ಅವರಿಗೆ ಸುಮಾರು ಶೇಕಡಾ 99ಕ್ಕಿಂತಲೂ ಹೆಚ್ಚು ಸಾಲ ಮನ್ನಾ ಸಿಕ್ಕಂತಾಗಿದೆ ಎಂದು ಹಲವು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಭಾಷ್ ಚಂದ್ರ ಅವರು ಈ ಬೃಹತ್ ಮೊತ್ತವನ್ನು ವೈಯಕ್ತಿಕವಾಗಿ ಸಾಲವಾಗಿ ಪಡೆದುಕೊಂಡಿರಲಿಲ್ಲ. ಬದಲಾಗಿ, ವಿವಿಧ ವ್ಯವಹಾರಗಳಿಗೆ ಅವರು ನೀಡಿದ್ದ ಜಾಮೀನುದಾರ (ಗ್ಯಾರಂಟರ್) ಹೊಣೆಗಾರಿಕೆಯಡಿ ಸ್ವೀಕೃತವಾಗಿದ್ದ ಒಟ್ಟು ₹22,006.5 ಕೋಟಿ ಮೊತ್ತದ ಪಾವತಿ ಹಕ್ಕುಗಳಿಗೆ ಈ ಇತ್ಯರ್ಥ ಪ್ರಕ್ರಿಯೆ ಅನ್ವಯವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ, ಇಷ್ಟೊಂದು ಬೃಹತ್ ಮಟ್ಟದ ರಿಯಾಯಿತಿ ನೀಡಿಕೆಯು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಆಕ್ಷೇಪಗಳು ಬಲವಾಗಿ ಕೇಳಿಬರುತ್ತಿವೆ.





Any questions related to ಉದ್ಯಮಿ ಸುಭಾಷ್ ಚಂದ್ರ ಮಾಡಿದ್ದ 22 ಸಾವಿರ ಕೋಟಿ ಸಾಲ ಮನ್ನಾ – ನನ್ನ ಶಿಕ್ಷಣ ಸಾಲ ಕೂಡ ಮನ್ನಾ ಮಾಡಿ ಎಂದ ದಿಪ್ಕೆ!?