ಬೀದರ.27.ಜುಲೈ.26: ಬೀದರ ಜಿಲ್ಲೆಯಾದ್ಯಂತ 2026ರ ಜುಲೈ 30 ರಂದು “ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ”ಯನ್ನು ಅರ್ಥಪೂರ್ಣವಾಗಿ ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬೀದರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಮಹಿಳೆಯ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾದ ಹಿನ್ನೆಲೆಯಲ್ಲಿ ಮಾನವ ಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ಸಾಗಾಣಿಕೆಗೆ ಒಳಪಟ್ಟ ಮಹಿಳೆಯ ಮತ್ತು ಮಕ್ಕಳ ಪುನರ್ ವಸತಿ ಮಾಡುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುವುದ್ದರಿಂದ ವಿಶ್ವಸಂಸ್ಥೆಯು ಜುಲೈ 30ನ್ನು ಮಾನವ ಕಳ್ಳ ಸಾಗಾಣಿಕೆ ತಡೆ ದಿನವೆಂದು ಘೋಷಿಸಿರುತ್ತದೆ. ಹಾಗಾಗಿ ಪ್ರತಿ ವರ್ಷ ಜುಲೈ 30ನೇ ತಾರೀಖಿನಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೂಚಿಸಿದೆ.
ಭಾರತೀಯ ಸಂವಿಧಾನದಲ್ಲಿ ಶೋಷಣೆಯ ವಿರುದ್ಧದ ಹಕ್ಕು ಅನುಚ್ಚೇದ-23 ಮತ್ತು 24ರಲ್ಲಿ ವಿವರಿಸಲಾಗಿದೆ. ಇದರ ಪ್ರಕಾರ ಮಾನವ ಕಳ್ಳ ಸಾಗಾಣಿಕೆ ಕಾನೂನಿನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಐಪಿಸಿ ಸೆಕ್ಷನ್ 370, (2) ಪ್ರಕಾರ ಕಳ್ಳ ಸಾಗಾಣಿಕೆಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಅದನ್ನು 10 ವರ್ಷಗಳ ವಿಸ್ತರಿಸಿ, ದಂಡ ಸಹ ವಿಧಿಸಲಾಗುತ್ತದೆ. ಐಪಿಸಿ ಸೆಕ್ಷನ್ 370, (3) ಪ್ರಕಾರ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಕಳ್ಳ ಸಾಗಾಣಿಕೆ ಮಾಡಿದರೆ 10 ವರ್ಷಗಳ ಜೈಲು ಶಿಕ್ಷೆ ಅದನ್ನು ಜೀವಾವಧಿ ಶಿಕ್ಷೆಯವರೆಗೆ ವಿಸ್ತರಿಸಬಹುದು ಮತ್ತು ದಂಡ ವಿಧಿಸಲಾಗುವುದು. 2026ರ ಜುಲೈ 30 ರಂದು ಬೀದರ ಜಿಲ್ಲೆಯ ಎಲ್ಲಾ ಹಂತದ ಸರಕಾರಿ ಕಚೇರಿಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪ್ರತಿಜ್ಞಾ ವಿಧಿ ಕೈಗೊಳ್ಳಲು ಸೂಚನೆ ನೀಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಜುಲೈ 30 ರಂದು “ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ” ಅರ್ಥಪೂರ್ಣವಾಗಿ ಆಚರಣೆಗೆ ಸೂಚನೆ?