ಕಲಬುರಗಿ.16.ಜುಲೈ.26: ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳು ಪರಾರಿ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಹಿನ್ನೆಲೆ 8 ಜೈಲಧಿಕಾರಿಗಳನ್ನು ಅಮಾನತುಗೊಳಿಸಿ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಆದೇಶ ಮಾಡಿದ್ದಾರೆ.
ಕಲಬುರಗಿ: ಜೈಲಿನಿಂದ ಪರಾರಿಯಾದ ಕೈದಿ ಅರೆಸ್ಟ್ ವೇಳೆ ಹಲ್ಲೆಗೆ ಯತ್ನ, ಕಾಲಿಗೆ ಗುಂಡು ಹಾರಿಸಿ ಬಂಧನ; 8 ಸಿಬ್ಬಂದಿ ಅಮಾನತು; Video
ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿ,ಪರಾರಿಯಾಗಿದ್ದ ಮೂರು ಜನ ಆರೋಪಿಗಳ ಪತ್ತೆಗಾಗಿ ಕಲಬುರಗಿ ನಗರ, ಎಸ್ಪಿ ಹಾಗೂ ಬೀದರ್ ಪೊಲೀಸರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಜೈಲಾಧಿಕಾರಿಗಳ ಈ ಬೇಜವಾಬ್ದಾರಿತನದ ಕುರಿತು ಟಿವಿ9 ಕನ್ನಡ ವಾಹಿನಿ ಸಾಕ್ಷಿ ಸಮೇತ ವರದಿ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಅಮಾನತುಗೊಳಿಸಲಾಗಿದೆ.
ಯಾರೆಲ್ಲಾ ಅಮಾನತು?
ಕಲಬುರಗಿ ಸೆಂಟ್ರಲ್ ಜೈಲಿನ ಅಧೀಕ್ಷಕ ರಾಕೇಶ್ ಕಾಂಬ್ಳೆ, ಸಹಾಯಕ ಅಧೀಕ್ಷಕ ಬಿ. ಸುರೇಶ್ ಹಾಗೂ ಜೈಲರ್ ಶ್ರೀಮಂತಗೌಡ ಪಾಟೀಲ್ ಸೇರಿದಂತೆ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ವಾರ್ಡರ್ಗಳಾದ ನಿಂಗಣ್ಣ, ಯಮನಪ್ಪ ಕುರುಬರ, ಬಸವರಾಜ್ ಮೇತ್ರಿ, ಸಾವಿತ್ರಿ ತಳಕೇರಿ ಹಾಗೂ ಅಜೀಮ್ರನ್ನು ಸಹ ಕರ್ತವ್ಯಲೋಪದ ಆರೋಪದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಎಸ್ಕೇಪ್ ಆಗಿದ್ದ ಮೂವರಲ್ಲಿ ಓರ್ವ ಸೆರೆ!
ಮೂವರು ಕೈದಿಗಳ ಪೈಕಿ ಓರ್ವ ನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಎಸ್ಕೇಪ್ ಆಗಿರುವ ಮಾಸ್ಟರ್ ಮೈಂಡ್ ಮಸ್ತಾನ್ ಹಾಗೂ ಸಾಗರ್ನ ಸೆರೆಗಾಗಿ ಪೊಲೀಸರು ಕಾರ್ಯಚರಣೆ ಮುಂದುವರೆಸಿದ್ದಾರೆ. ಇದಕ್ಕೆಂದು ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ನ ಕೆಲ ರೈತರ ಜಮೀನುಗಳಲ್ಲಿ ಡ್ರೋನ್ ಬಳಸಿ ಕೈದಿಗಳ ತಲಾಶ್ ಮಾಡಲಾಗಿದೆ.
ಈ ಘಟನೆ ನೋಡಿ ನನಗೆ ದೊಡ್ಡ ಶಾಕ್ ಆಗಿದೆ ಎಂದ ಆರಗ ಜ್ಞಾನೇಂದ್ರ
ಇನ್ನು ಪ್ರಕರಣ ಕುರಿತಾಗಿ ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ”ಈ ಘಟನೆ ನೋಡಿ ನನಗೆ ದೊಡ್ಡ ಶಾಕ್ ಆಗಿದೆ. ರಾಜ್ಯದಲ್ಲಿ ಕಾರಾಗೃಹಗಳ ಅವ್ಯವಸ್ಥೆ ಸರಿಪಡಿಸುವ ಅಗತ್ಯವಿದೆ. ನಾನು ಗೃಹ ಸಚಿವ ಇದ್ದಾಗ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಪಾರ್ಟಿ ಮಾಡಿದ್ದರು.
ಈ ಘಟನೆ ಬೆನ್ನಲ್ಲೇ ಅಧಿಕಾರಿಗಳನ್ನು ಅಮಾನತು ಮಾಡಿ ಶಿಕ್ಷೆ ಕೊಟ್ಟಿದ್ದೆ. ಕಾಂಗ್ರೆಸ್ ಸರ್ಕಾರದ ಮೂರೂವರೆ ವರ್ಷದ ಅವಧಿಯಲ್ಲಿ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ. ಗೃಹ ಇಲಾಖೆಯ ಸಂಪೂರ್ಣ ವಿಫಲ ಆಗಿದೆ” ಎಂದು ಕಿಡಿಕಾರಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಆರಗ ಜ್ಞಾನೇಂದ್ರ, ”ಕಾರಾಗೃಹ ಸುಧಾರಣೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ತಮ್ಮ ಇಲಾಖೆ ವಿಷಯ ಬಿಟ್ಟು ಬೇರೆಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಗೃಹ ಇಲಾಖೆಯನ್ನು ಬೇರೆ ಯಾರಿಗಾದರೂ ವಹಿಸಿಕೊಡಬೇಕು, ಇಲ್ಲದಿದ್ದರೆ ಸಮರ್ಥವಾಗಿ ಗೃಹ ಇಲಾಖೆ ಸಚಿವರು ನಿಭಾಯಿಸಬೇಕು. ರಾಜ್ಯದ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತದೆ.
ಕಾರಾಗೃಹಗಳಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಜೈಲಿನಲ್ಲಿ ಡ್ರಗ್ಸ್, ಮಾರಕಾಸ್ತ್ರ ಹಾಗೂ ಪಿಸ್ತೂಲುಗಳು ಪತ್ತೆಯಾಗುತ್ತಿವೆ. ಇದು ಕರ್ನಾಟಕಕ್ಕೆ ದೊಡ್ಡ ಕಳಂಕ, ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.





Any questions related to ಕಲಬುರಗಿ ಕಾರಾಗ್ರಹದಿಂದ 3 ಕೈದಿಗಳು ಪರಾರಿ.?