ಮುಂಬೈ.16.ಜುಲೈ.26: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಆಮೀರ್ ಖಾನ್ ಇತ್ತೀಚೆಗಷ್ಟೇ ಗೌರಿ ಸ್ಪ್ರ್ಯಾಟ್ ಅವರನ್ನು ವಿವಾಹವಾಗುವ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಜುಲೈ 5 ರಂದು ನಡೆದ ಈ ಮೂರನೇ ಮದುವೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಟನ ವಿರುದ್ಧ ವ್ಯಾಪಕ ಟೀಕೆಗಳು ಮತ್ತು ಟ್ರೋಲ್‌ಗಳು ಕೇಳಿಬರುತ್ತಿವೆ.
ಈ ಬೆನ್ನಲ್ಲೇ ಆಮೀರ್ ಖಾನ್ ಅವರ ದಶಕಗಳ ಆಪ್ತ ಸ್ನೇಹಿತ ಹಾಗೂ ನಟ ಅಮೀನ್ ಹಾಜಿ ಅವರು ಆಮೀರ್ ಬೆಂಬಲಕ್ಕೆ ನಿಂತಿದ್ದು, ಅವರ ವೈಯಕ್ತಿಕ ಜೀವನದ ಬಗ್ಗೆ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಆಮೀರ್ ಖಾನ್ ಈ ಹಿಂದೆ 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 16 ವರ್ಷಗಳ ಸಂಸಾರದ ನಂತರ ಇವರು ದೂರಾಗಿದ್ದರು. ಆ ಬಳಿಕ 2005 ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದ ಆಮೀರ್, 2021 ರಲ್ಲಿ ಅವರಿಂದಲೂ ವಿಚ್ಛೇದನ ಪಡೆದಿದ್ದರು. ಇದೀಗ ಸುಮಾರು ಎರಡು ದಶಕಗಳಿಂದ ಪರಿಚಿತರಾಗಿದ್ದ ಗೌರಿ ಸ್ಪ್ರ್ಯಾಟ್ ಅವರನ್ನು ಜುಲೈನಲ್ಲಿ ಮದುವೆಯಾಗುವ ಮೂಲಕ ಆಮೀರ್ ಸುದ್ದಿಯಲ್ಲಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಮೀನ್ ಹಾಜಿ, ಆಮೀರ್ ಖಾನ್ ಅವರ ನಿಜವಾದ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಹೊರಗಿನ ಜಗತ್ತು ಅವರ ಸಂಬಂಧಗಳನ್ನು ಕೇವಲ ತಮಾಷೆಗಾಗಿ ನೋಡುತ್ತದೆ, ಆದರೆ ಅವರ ಪ್ರಾಮಾಣಿಕತೆ ಯಾರಿಗೂ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಬಂಧಗಳ ಮುರಿತದಿಂದ ಆಮೀರ್ ಕಣ್ಣೀರಿಟ್ಟಿದ್ದರು
ಆಮೀರ್ ಖಾನ್ ಅವರೊಂದಿಗೆ 35 ವರ್ಷಗಳ ಸುದೀರ್ಘ ಸ್ನೇಹ ಹೊಂದಿರುವ ಅಮೀನ್ ಹಾಜಿ, “ಬಹಳಷ್ಟು ಜನರು ಒಂದು ಸಂಬಂಧ ವಿಫಲವಾದರೆ ವಿವಾಹದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಆದರೆ ಆಮೀರ್ ಹಾಗಲ್ಲ, ಅವರು ಸದಾ ಮದುವೆ ಎಂಬ ಪವಿತ್ರ ಬಂಧಕ್ಕೆ ಗೌರವ ನೀಡುತ್ತಾರೆ. ಪ್ರತಿಯೊಬ್ಬರೂ ಅವರ ವೈಯಕ್ತಿಕ ಜೀವನವನ್ನು ನೋಡಿ ಜೋಕ್ ಮಾಡುತ್ತಾರೆ. ಆದರೆ ಪ್ರತಿ ಬಾರಿ ಸಂಬಂಧ ಮುರಿದಾಗಲೂ ಅವರು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ತಮ್ಮ ಹಿಂದಿನ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯನ್ನು ಅವರು ಸರಿಯಾಗಿ ನಿಭಾಯಿಸಿದ್ದಾರೆ” ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಆಮೀರ್ ಖಾನ್ ಅತ್ಯಂತ ಭಾವುಕ ವ್ಯಕ್ತಿಯಾಗಿದ್ದು, ಸಂಬಂಧಗಳ ಮುರಿತದಿಂದ ಅವರು ಅನುಭವಿಸಿದ ನೋವನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದಿದ್ದಾರೆ. “ಜನರು ಅವರ ಮದುವೆಯ ಬಗ್ಗೆ ಸುಲಭವಾಗಿ ಮಾತನಾಡುತ್ತಾರೆ. ಆದರೆ ಅವರು ಅನುಭವಿಸಿದ ಹೃದಯಾಘಾತದ ನೋವನ್ನು ನಾನು ನೋಡಿದ್ದೇನೆ, ಅವರು ಕಣ್ಣೀರು ಹಾಕಿದ್ದ ಸಾಕ್ಷಿಯಾಗಿದ್ದೇನೆ. ಹೊರಗಿನವರಿಗೆ ಕಾಣುವಷ್ಟು ಸಂಬಂಧಗಳು ಸರಳವಾಗಿರುವುದಿಲ್ಲ. ಮದುವೆ ಮುರಿದುಬೀಳಲು ಒಬ್ಬರೇ ಕಾರಣ ಎಂದು ಬೊಟ್ಟು ಮಾಡುವುದು ತಪ್ಪು” ಎಂದು ಅಮೀನ್ ಹಾಜಿ ಗೆಳೆಯನ ಪರ ವಕಾಲತ್ತು ವಹಿಸಿದ್ದಾರೆ.
ಕೆಲಸದ ಮೇಲಿನ ಅತಿಯಾದ ಪ್ರೀತಿಯೇ ಕಾರಣವಾಯಿತೇ?
ಆಮೀರ್ ಖಾನ್ ತಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಮಾಡುತ್ತಾರೆ. ಆದರೆ ಈ ಅತಿಯಾದ ಬದ್ಧತೆಯು ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಅಮೀನ್ ಅಭಿಪ್ರಾಯಪಟ್ಟಿದ್ದಾರೆ. ಸದಾ ಕೆಲಸದಲ್ಲಿ ಮುಳುಗಿರುವ ವ್ಯಕ್ತಿಯೊಂದಿಗೆ ಬದುಕು ನಡೆಸುವಾಗ ಸಂಗಾತಿಗೆ ಕಡೆಗಣಿಸಲ್ಪಟ್ಟ ಭಾವನೆ ಬರುವುದು ಸಹಜ ಎಂದು ಅವರು ಹೇಳಿದ್ದಾರೆ.
ಸೋರ್ಸ್ ಫ್ರಾಂ ವೆಬ್ದುನಿಯ





Any questions related to ಮೂರನೇ ಮದುವೆ ಬೆನ್ನಲ್ಲೇ ಆಮೀರ್ ಖಾನ್ ಪರ ಬ್ಯಾಟಿಂಗ್ ಮಾಡಿದ ಆಪ್ತ ಸ್ನೇಹಿತ: ನಟನ ಕಣ್ಣೀರಿನ ಕಥೆ ಬಿಚ್ಚಿಟ್ಟ ಅಮೀನ್ ಹಾಜಿ?