ಕೋತ್ವಾಲನಿಗೆ ಹೆಂಡ ಕೊಡುತ್ತ ಇವರು ಕೂತಿದ್ದರು : ಡಿಕೆ ಬ್ರದರ್ಸ್ ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ!
ಬೆಂಗಳೂರು.23.ಆಗಸ್ಟ್.26: ನೈಸ್ ರಸ್ತೆ ಟೋಲ್ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ಜಟಾಪಟಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಮನಗರದ ಅಕ್ಕೂರಿನಲ್ಲಿ ಡಿ.ಕೆ. ಸಹೋದರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ದಿನಕ್ಕೊಂದು ಸೂಟ್‌ಕೇಸ್ ಹಿಡಿದುಕೊಂಡು ಬರುವವರಂತೆ ಎಲ್ಲೆಲ್ಲಿ ಭೂಮಿ ಸಿಗುತ್ತದೆಯೋ ಅಲ್ಲೆಲ್ಲಾ ಲಪಟಾಯಿಸುವ ಕೆಲಸವನ್ನು ನಾವು ಮಾಡಿಲ್ಲ ಎಂದು ನೇರ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಟಾಂಗ್ ನೀಡಿದ್ದ ಮಾಜಿ ಸಂಸದ ಡಿ.ಕೆ. ಸುರೇಶ್, ಕೇವಲ ಜನರನ್ನು ಎತ್ತಿಕಟ್ಟಿ ರಾಜಕಾರಣ ಮಾಡುವುದೇ ಕೆಲವರ ಕಸುಬಾಗಿದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದರು.
“ಒಬ್ಬ ಕೇಂದ್ರ ಸಚಿವರು ಯಾವ ರೀತಿಯಾಗಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ ಎಂಬುದನ್ನು ಮಾಧ್ಯಮದವರು ಗಮನಿಸಬೇಕು. ಅವರು ಕೇವಲ ಒಂದೇ ಟೋಲ್ ಬಗ್ಗೆ ಏಕೆ ಮಾತನಾಡುತ್ತಾರೆ? ಎಲ್ಲಾ ಟೋಲ್‌ಗಳ ಬಗ್ಗೆಯೂ ಮಾತನಾಡಿ, ಯಾರಿಗೂ ದುಡ್ಡು ಕಟ್ಟಬೇಡಿ ಎಂದು ಹೇಳಲಿ. ಮಾಡುವುದೆಲ್ಲಾ ಅನಾಚಾರ, ಆದರೆ ಮನೆ ಮುಂದೆ ಬೃಂದಾವನ ಎಂಬಂತೆ ಅವರ ವರ್ತನೆ ಇದೆ” ಎಂದು ವ್ಯಂಗ್ಯವಾಡಿದ್ದರು.
ಡಿ.ಕೆ. ಸುರೇಶ್ ಅವರ ಈ ‘ಬೃಂದಾವನ’ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, “ಇಬ್ಬರು ಮಹಾನ್ ಅಭಿವೃದ್ಧಿ ಹರಿಕಾರರು ನೀಡಿರುವ ಹೇಳಿಕೆಯನ್ನು ನಾನು ಗಮನಿಸಿದ್ದೇನೆ.
ನಾವು ನಂಬಿರುವ ಮತ್ತು ಕೈಮುಗಿಯುವ ಬೃಂದಾವನ ಸಂಸ್ಕೃತಿಯ ಪ್ರತೀಕವೇ ಹೊರತು, ಸೂಟ್‌ಕೇಸ್ ಹಿಡಿದು ರೈತರ ಜಮೀನು ಲಪಟಾಯಿಸುವ ಬೃಂದಾವನವಲ್ಲ. ನಾವು ಸಂಸ್ಕೃತಿಯ ಬೃಂದಾವನ ಕಟ್ಟಿ ಪೂಜೆ ಮಾಡುವವರು” ಎಂದು ತಿರುಗೇಟು ನೀಡಿದರು.
ನೈಸ್ ರಸ್ತೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರ ಪರ ಧ್ವನಿಯೆತ್ತಿದ ಕುಮಾರಸ್ವಾಮಿ, ಅಭಿವೃದ್ಧಿಯ ಅಸಲಿ ಬಣ್ಣವನ್ನು ಬಿಚ್ಚಿಟ್ಟರು. “ಕಳೆದ 20 ವರ್ಷಗಳಿಂದ ರೈತರ ಭೂಮಿಯನ್ನು ವಶಪಡಿಸಿಕೊಂಡಿದ್ದರೂ ಅವರಿಗೆ ಇನ್ನೂ ಒಂದು ರೂಪಾಯಿ ಪರಿಹಾರ ನೀಡಿಲ್ಲ.
ವಿರೋಧಿಗಳಿಗೆ ಟೇಪ್ ಹಿಡಿದು ಜಮೀನು ತೂಕ ಹಾಕುವುದು ಹಾಗೂ ಲೆಕ್ಕಾಚಾರ ಮಾಡುವುದು ಮಾತ್ರ ಬರುತ್ತದೆ. ನಾವು ಸುಮ್ಮನೆ ಕಾರ್ಯಕರ್ತರನ್ನು ಎತ್ತಿಕಟ್ಟಿ ಅಭಿವೃದ್ಧಿಗೆ ವಿರೋಧ ಮಾಡುತ್ತಿಲ್ಲ, ಬದಲಾಗಿ ಅನ್ಯಾಯಕ್ಕೊಳಗಾದ ರೈತರ ಪರವಾಗಿ ನಿಂತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಉಭಯ ನಾಯಕರ ಮಧ್ಯೆ ‘ಪಾಪದ ಕೊಳೆ’ಯ ಕುರಿತಾದ ವಾಕ್ಸಮರವೂ ತಾರಕಕ್ಕೇರಿತು. ನೈಸ್ ವಿವಾದ ಅವರದ್ದೇ ಪಾಪದ ಫಲ ಎಂದಿದ್ದ ಡಿ.ಕೆ. ಸುರೇಶ್ ಮಾತಿಗೆ ಕೆಂಡಾಮಂಡಲರಾದ ಕುಮಾರಸ್ವಾಮಿ, “ಆ ಪಾಪದ ಕೊಳೆಯನ್ನು ತೊಳೆಯುವ ಕೆಲಸವನ್ನೇ ಈಗ ಹಂತ ಹಂತವಾಗಿ ಮಾಡುತ್ತಿದ್ದೇವೆ.
ರಾಮನಗರಕ್ಕೆ ನಾವು ಬಂದಾಗ ಕನಕಪುರ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಅದಕ್ಕೆ ಕನೆಕ್ಷನ್ ಕೊಡಿಸಿದ್ದು ಎಚ್.ಡಿ. ದೇವೇಗೌಡರು. ಕೋತ್ವಾಲನಿಗೆ ಹೆಂಡ ಕುಡಿಸುತ್ತಾ ಕೂತಿದ್ದವರು ಈಗ ಮಾತನಾಡುತ್ತಿದ್ದಾರೆ” ಎಂದು ಡಿ.ಕೆ. ಬ್ರದರ್ಸ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
Source: kannada News Now





Any questions related to ನೈಸ್ ರಸ್ತೆ ಟೋಲ್ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ಜಟಾಪಟಿ !?