ಬೀದರ.31.ಡಿಸೆಂಬರ್.25:- ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದರು.
ಅವರು ಮಂಗಳವಾರ ನಗರದ ಪ್ರತಾಪ್ ನಗರದ ಘಾಳೆ ಲಕ್ಜುರೀಸ್ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸರ್ಕಾರ ಪಂಚ ಗ್ಯಾರಂಟಿಗಳ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ “ಗ್ಯಾರಂಟಿ ಕಾರ್ಯಾಗಾರ-ಗ್ಯಾರಂಟಿ ಉತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ರಾಜ್ಯದ 4 ಕೋಟಿಗೂ ಹೆಚ್ಚು ಜನರು ಫಲಾನುಭವಿಗಳಾಗಿದ್ದಾರೆ. ಪ್ರತಿ ಪಕ್ಷಗಳು, ಬಂಡವಾಳಶಾಹಿಗಳು ಗ್ಯಾರಂಟಿಗಳನ್ನು ವಿರೋಧಿಸುವರು, ಟೀಕಿಸುವರು, ಅವರೇ ಇವಾಗ ದೇಶದ ಇತರೆ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ ಎಂದರು. ತಮ್ಮ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ತಿಳಿಸಿರುವ ಹಾಗೆ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆoದರು.
ಬೀದರ ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ 3,44,855 ಮಹಿಳೆಯರು ಫಲಾನುಭವಿಗಳು ಇದ್ದು, ಇದುವರೆಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ಮಾಹೆಗೆ 2000 ರೂ. ಅಂತೆ 1552 ಕೋಟಿ ರೂಪಾಯಿ ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,48,617 ಫಲಾನುಭವಿಗಳು ಇದ್ದು, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದ್ದು, 447 ಕೋಟಿ ರೂಪಾಯಿ ಬಳಸಲಾಗಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 13,13,355 ಜನರು ಫಲಾನುಭವಿಗಳಾಗಿದ್ದು, 80% ರಷ್ಟು ಜನರು ಒಳಗೊಂಡಿದ್ದಾರೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 11 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಸರ್ಕಾರ ಕೆಎಸ್‌ಆರ್‌ಸಿಗೆ 315 ಕೋಟಿ ರೂಪಾಯಿ ಪಾವತಿಸಿದೆ ಎಂದರು.
ಜಿಲ್ಲೆಗೆ ಪಂಚ ಗ್ಯಾರಂಟಿಗಳಿoದ 2500 ಕೋಟಿ ರೂಪಾಯಿ ದೊರೆತಂತಾಗಿದೆ ಹಾಗೂ 300 ಕೋಟಿ ರೂಪಾಯಿ ರೈತರಿಗೆ ಬೆಳೆ ಪರಿಹಾರ ನೀಡಲಾಗಿದೆ ಎಂದರು. ನಮ್ಮ ಸರ್ಕಾರ ಬಡವರ ಪರವಾದ ಸರ್ಕಾರವಾಗಿದೆ. ಬಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಆದ್ದರಿಂದ ಇಂದು ನಮ್ಮ ರಾಜ್ಯದ ದೇಶದಲ್ಲೇ ಅತಿ ಹೆಚ್ಚು ತಲಾದಯ ಹೊಂದಿರುವ ರಾಜ್ಯ ಕೀರ್ತಿ ಪಡೆದಿದೆ ಎಂದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಎಂ. ರೇವಣ್ಣ ಅವರು ಮಾತನಾಡಿ, ರಾಜ್ಯದಲ್ಲಿ ತಮ್ಮ ಸರ್ಕಾರ ಜನಪರ, ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮೊದಲಿನಿಂದಲೂ ತಮ್ಮ ಸರ್ಕಾರ ಎಲ್ಲಾ ಜನರು ಬದುಕು ಕಟ್ಟಿಕೊಳ್ಳವಂತೆ ಮಾಡಿದೆ. ಉಳ್ಳುವನೇ ಭೂಮಿಯ ಒಡೆಯ, 20 ಅಂಶಗಳ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೆ, ಶಿಕ್ಷಣ, ಆರೋಗ್ಯ, ವಿಜ್ಞಾನ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದರು. ಬಡವರ ಏಳಿಗೆಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಪಂಚ ಗ್ಯಾರಂಟಿಗಳು ದಾರಿಯಾಗಿವೆ. ವಾರ್ಷಿಕವಾಗಿ 51 ಸಾವಿರ ಕೋಟಿ ರೂಪಾಯಿ ಗ್ಯಾರಂಟಿಗಳ ಮೂಲಕ ನೇರವಾಗಿ ಜನರಿಗೆ ತಲುಪುತ್ತಿವೆ. ರಾಜ್ಯದಲ್ಲಿ 621 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವುದರ ಮೂಲಕ ಗಿನ್ನಿಸ್ ದಾಖಲೆ ಮಾಡಲಾಗಿದೆ. ಗ್ಯಾರಂಟಿಗಳಿoದ ಜನರ ಜೀವನ ಮಟ್ಟ ಸುಧಾರಣೆಯಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ (ಮೈಸೂರು ವಿಭಾಗ) ಉಪಾಧ್ಯಕ್ಷರಾದ ಪುಷ್ಪ ಅಮರನಾಥ ಅವರು ಮಾತನಾಡಿ, ಬಡವರ ಬದುಕಿನ ಬದ್ಧತೆಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಹಾಗೂ ರಾಜ್ಯದ ಅಭಿವೃದ್ಧಿಗೆ ಗ್ಯಾರಂಟಿಗಳು ಸಹಾಯಕವಾಗಿವೆ ಎಂದರು.
ಹಿರಿಯ ಪತ್ರಕರ್ತರು ಹಾಗೂ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ವಾಸು ಹೆಚ್. ವಿ ಅವರು ಮಾತನಾಡಿ, ಪಂಚ ಗ್ಯಾರಂಟಿಗಳಿoದ ಜನರ ತಲಾದಯ ಹೆಚ್ಚಾಗಿದೆ. ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಸಂವಿಧಾನದ ರಾಜ್ಯ ನೀರ್ದೆಶಕ ತತ್ವಗಳು ಮತ್ತು ಮೂಲಭೂತ ಹಕ್ಕುಗಳ ಅನುಗುಣವಾಗಿ ಬಡವರ ಪರವಾದ ಯೋಜನೆಗಳಾಗಿವೆ. ಆರ್ಥಿಕ ಸಮಾನತೆ ತರುವ ಉದ್ದೇಶ ಈ ಗ್ಯಾರಂಟಿ ಯೋಜನೆಗಳು ಹೊಂದಿವೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿoದ ಆಯೋಜಿಸಲಾಗಿದ್ದ ಐದು ಗ್ಯಾರಂಟಿಗಳ ವಸ್ತುಗಳ ಮೇಳವನ್ನು ಸಚಿವರು ವಿಕ್ಷಿಸಿದವರು. ವನ್ಯ ಜೀವಿಗಳಿಂದ ಹಾನಿಗೊಳಗಾದವರಿಗೆ ಸಚಿವ ಈಶ್ವರ ಖಂಡ್ರೆ ಅವರು ಪರಿಹಾರದ ಚೆಕ್ ಅನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ (ಕಲಬುರಗಿ ವಿಭಾಗ) ಉಪಾಧ್ಯಕ್ಷರಾದ ಎಸ್. ಆರ್ ಮೆಹರೂಜ್ ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ (ಬೆಂಗಳೂರು-1 ವಿಭಾಗ) ಉಪಾಧ್ಯಕ್ಷರಾದ ಸೂರಜ್ ಹೆಗಡೆ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಬಿ. ಪಾಟೀಲ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯ್ಕ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿರೀಶ್ ಬದೋಲೆ, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ, ತಾಲೂಕು ಅಧ್ಯಕ್ಷರು, ಸದಸ್ಯರ , ಪಂಚ ಗ್ಯಾರಂಟಿಗಳ ಫಲಾನುಭವಿಗಳು ಉಪಸ್ಥಿತರಿದ್ದರು.






Any questions related to ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ – ಸಚಿವ ಈಶ್ವರ ಬಿ. ಖಂಡ್ರೆ?