ಕೊಪ್ಪಳ-ತಳಕಲ್-ಜಿಲ್ಲಾಧಿಕಾರಿಗಳ ಕಛೇರಿ ಮಾರ್ಗದಲ್ಲಿ ನಗರ ಸಾರಿಗೆ ಆರಂಭ
ಕೊಪ್ಪಳ.01.ಜುಲೈ 26: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗದ ವತಿಯಿಂದ ಕೊಪ್ಪಳ-ತಳಕಲ್-ಜಿಲ್ಲಾಧಿಕಾರಿಗಳ ಕಛೇರಿ ಮಾರ್ಗದಲ್ಲಿ ಇಂದಿನಿಂದ (ಜುಲೈ 1ರಿಂದ) ನೂತನ ನಗರ ಸಾರಿಗೆ ಆರಂಭಿಸಲಾಗಿದೆ.
ಈ ನೂತನ ಬಸ್ ಸಂಚಾರಕ್ಕೆ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಬುಧವಾರ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ಶಾಸಕರು ಮಾತನಾಡಿ, ಕೊಪ್ಪಳ-ತಳಕಲ್-ಡಿಸಿ ಆಫೀಸ್ ಮಾರ್ಗದಲ್ಲಿ ನೂತನ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಸಾರ್ವಜನಿಕ ಪ್ರಯಾಣಿಕರ ಮನವಿಗೆ ಸ್ಪಂದಿಸಿ, ನೂತನ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಕೊಪ್ಪಳ ನಗರ ಸಂಚಾರ ಮತ್ತು ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಲು ಅನುಕೂಲವಾಗಲಿದೆ.

ತಳಕಲ್ ಇಂಜಿನಿಯರಿಂಗ್ ಕಾಲೇಜು, ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳಿಗೂ ನೂತನ ಬಸ್ ಸಂಚಾರವು ಸಹಕಾರಿಯಾಗಲಿದೆ. ಅಲ್ಲದೇ ನಮ್ಮ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳಾ ಫಲಾನುಭವಿಗಳು ಈ ನಗರ ಸಾರಿಗೆ ಮೂಲಕ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾದ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ, ಕೊಪ್ಪಳ ತಾಲ್ಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಾಲಚಂದ್ರನ್, ಸದಸ್ಯರಾದ ಪರುಶುರಾಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಸಿನಯ್ಯ, ಕಾರ್ಮಿಕ ಕಲ್ಯಾಣ ಅಧಿಕಾರಿ ಸತ್ಯನಾರಾಯಣ, ಅಂಕಿ ಸಂಖ್ಯೆ ಅಧಿಕಾರಿ ಎಂ.ಡಿ. ಶಬ್ಬೀರ್, ಲೆಕ್ಕಾ ಪತ್ರ ಅಧಿಕಾರಿ ಚಿತ್ತವಡಿಗಪ್ಪ, ಘಟಕ ವ್ಯವಸ್ಥಾಪಕ ರಮೇಶ ಚಿಣಗಿ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.





Any questions related to ನೂತನ ಬಸ್ ಸಂಚಾರಕ್ಕೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರಿಂದ ಚಾಲನೆ?