Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ನೇಮಕ ವಿಳಂಬ: ಪಿಎಚ್‌ಡಿ ಸಂಶೋಧಕರು ‘ಪಿಜಿ’ ವಿದ್ಯಾರ್ಥಿಗಳಿಗೆ ಪಾಠ!

ಅತಿಥಿ ಉಪನ್ಯಾಸಕರ ನೇಮಕ ವಿಳಂಬ: ಪಿಎಚ್‌ಡಿ ಸಂಶೋಧಕರು ‘ಪಿಜಿ’ ವಿದ್ಯಾರ್ಥಿಗಳಿಗೆ ಪಾಠ!

ವಿಜಯಪುರ: ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಸ್ನಾತಕೋತ್ತರ (ಪಿಜಿ) ತರಗತಿಗಳಿಗೆ ಬೋಧಕರ ಕೊರತೆ ಮತ್ತು ಅತಿಥಿ ಉಪನ್ಯಾಸಕ ನೇಮಕ ವಿಳಂಬವಾಗಿರುವುದರಿಂದ ಪಿಎಚ್‌ಡಿ ವಿದ್ಯಾರ್ಥಿನಿಯರೇ ಕಳೆದ ಒಂದು ವರೆ ತಿಂಗಳಿಂದ ಪಾಠ ಪ್ರವಚನ ಮಾಡುತ್ತಿದ್ದಾರೆ.

ವಿಜಯಪುರ ದಲ್ಲಿರುವ ಸ್ನಾತಕೋತ್ತರ ಅಧ್ಯಯನ ವಿಭಾಗ, ಉಡುತಡಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಸಿಂಧನೂರು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಬೀದರ್‌ ಪ್ರಾದೇಶಿಕ ಕೇಂದ್ರವೂ ಒಳಗೊಂಡಂತೆ ವಿಶ್ವವಿದ್ಯಾಲಯದಲ್ಲಿ 80 ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, 15 ಅರೆಕಾಲಿಕ ಅತಿಥಿ ಉಪನ್ಯಾಸಕರು ಸೇರಿದಂತೆ ಒಟ್ಟು 95 ಹುದ್ದೆಗಳು ಖಾಲಿ ಇವೆ.

ಆಗಸ್ಟ್‌ 12 ರಂದು ಉಡುತಡಿಯಲ್ಲಿ ನಡೆದ 156ನೇ ಸಿಂಡಿಕೇಟ್‌ ಸಾಮಾನ್ಯ ಸಭೆಯಲ್ಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಪೂರ್ಣಕಾಲಿಕ, ಅರೆಕಾಲಿಕ ಮತ್ತು ತಾತ್ಕಾಲಿಕ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ಪಡೆದುಕೊಂಡಿದ್ದರೂ ಇದುವರೆಗೂ ನೇಮಕ ಮಾಡಿಕೊಳ್ಳದೇ ಕಾಲಹರಣ ಮಾಡಲಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣ ಕ್ಷೀಣವಾಗತೊಡಗಿದೆ. ಜೊತೆಗೆ ಶೈಕ್ಷಣಿಕ ಗುಣಮಟ್ಟವೂ ಕುಸಿದಿರುವ ಆರೋಪ ಇದೆ. ಇದೀಗ ಪಿಎಚ್‌ಡಿ ವಿದ್ಯಾರ್ಥಿನಿಯರಿಂದ ಪಾಠ ಮಾಡಿಸುತ್ತಿರುವುದು ಶೈಕ್ಷಣಿಕ ಗುಟ್ಟಮಟ್ಟ ಮತ್ತಷ್ಟು ಕುಸಿತಕ್ಕೆ ಕಾರಣವಾಗಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ತರಗತಿಗಳಿಗೆ ವಿದ್ಯಾರ್ಥಿನಿಯರ ದಾಖಲಾತಿಯೂ ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ವಿಶ್ವವಿದ್ಯಾಲಯದಲ್ಲಿ ತರಗತಿಗಳು ಆರಂಭವಾಗಿ ತಿಂಗಳಾದರೂ ಪಾಠ-ಪ್ರವಚನಗಳು ಸರಿಯಾಗಿ ನಡೆಯದೇ ಇರುವುದರಿಂದ ಭ್ರಮಾನಿರಶನವಾಗಿದೆ. ಮಹಿಳಾ ವಿವಿಗೆ ಸೇರ್ಪಡೆಯಾಗುವ ಮೂಲಕ ತೊಂದರೆಗೆ ಸಿಲುಕಿದ್ದೇವೆ.

ಪಿಜಿಗೆ ಸೇರ್ಪಡೆಯಾದವರು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲೇ ಇರಬೇಕು ಎಂದು ಶುಲ್ಕ ಕೂಡ ಕಡ್ಡಾಯವಾಗಿ ಪಾವತಿಸಿಕೊಂಡಿದ್ದಾರೆ. ಪಾಠಗಳು ಆರಂಭವಾಗುವವರೆಗೆ ಮನೆಗಾದರೂ ಹೋಗೋಣ ಎಂದರೆ ಸಾಧ್ಯವಾಗದೇ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗಿದೆ’ ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಸೇರಿಕೊಂಡಿರುವ ವಿದ್ಯಾರ್ಥಿನಿಯರು ತಮಗೆ ತಿಳಿದಷ್ಟು ವಿಷಯವನ್ನು ತಪ್ಪು-ಒಪ್ಪುಗಳೊಂದಿಗೆ ಪಿಜಿ ವಿದ್ಯಾರ್ಥಿನಿಯರಿಗೆ ಹೇಳಿಕೊಡುತ್ತಿದ್ದು, ವಿದ್ಯಾರ್ಥಿನಿಯರ ನಿರಾಶೆಗೆ ಕಾರಣವಾಗಿದೆ.

ಪಿಎಚ್‌ಡಿ, ನೆಟ್‌, ಕೆ-ಸೆಟ್‌ ಆದವರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಯುಜಿಸಿ ನಿಯಮಾವಳಿ ಇದೆ. ಆದರೆ, ಮಹಿಳಾ ವಿಶ್ವವಿದ್ಯಾಲಯವು ಈ ಎಲ್ಲ ನಿಯಮಾವಳಿಯನ್ನು ಗಾಳಿಗೆ ತೂರಿದೆ.

ಸ್ನಾತಕೊತ್ತರ ತರಗತಿಗಳು ಆರಂಭವಾಗುವ ಮೊದಲೇ ಅಗತ್ಯ ಇರುವ ಅತಿಥಿ ಉಪನ್ಯಾಸಕ ನೇಮಕ ಮಾಡಿಕೊಂಡಿರಬೇಕು ಎಂಬ ನಿಯಮವಿದ್ದರೂ ತರಗತಿ ಆರಂಭವಾಗಿ ತಿಂಗಳಾದರೂ ಇದುವರೆಗೂ ನೇಮಕ ಮಾಡಿಕೊಳ್ಳದೇ ವಿದ್ಯಾರ್ಥಿನಿಯರ ಭವಿಷ್ಯದ ಜೊತೆ ವಿಶ್ವವಿದ್ಯಾಲಯ ಆಟವಾಡುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ರಾಜ್ಯದ ಬೇರೆ, ಬೇರೆ ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರಿಗೆ ಆಕರ್ಷಕ ವೇತನ ನೀಡುತ್ತಿವೆ. ಆದರೆ, ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಕಾಯಂ ಅತಿಥಿ ಉಪನ್ಯಾಸಕರಿಗೆ ₹30 ಸಾವಿರ ಹಾಗೂ ತಾತ್ಕಾಲಿಕ ಅತಿಥಿ ಉಪನ್ಯಾಸಕರಿಗೆ ಕೇವಲ ₹15 ಸಾವಿರ ಗೌರವ ಧನ ನೀಡುತ್ತಿದೆ. ಇದರಿಂದ ವಿಶ್ವವಿದ್ಯಾಲಯಕ್ಕೆ ಗುಣಮಟ್ಟದ ಉಪನ್ಯಾಸಕರು ಬರುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಅಕ್ಕಮಹಾದೇವಿ ವಿಶ್ವವಿದ್ಯಾಲ ಯದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ನೇಮಕ ವಿಳಂಬ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಉಳಿಸಿಕೊಳ್ಳಲು ಪರೋಕ್ಷ ಪ್ರಯತ್ನ ವಿಶ್ವವಿದ್ಯಾಲಯ ನಡೆದಿದೆ ಎನ್ನಲಾಗುತ್ತಿದೆ.

ಅನುಮೋದನೆ ದೊರೆತ ಬಳಿಕ ನೇಮಕ

‘ಖಾಲಿ ಇರುವ ಬೋಧಕರ ನೇಮಕಾತಿಗಾಗಿ ವಿಶ್ವವಿದ್ಯಾಲಯದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ; ಸರ್ಕಾರದಿಂದ ಅನುಮೋದನೆ ದೊರೆತ ನಂತರವಷ್ಟೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಯುಜಿಸಿ ನಿಯಮಗಳ ಪ್ರಕಾರ, ಪಿಎಚ್‌ಡಿ ವಿದ್ಯಾರ್ಥಿಗಳು ವಾರಕ್ಕೆ 4 ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸ್ನಾತಕೋತ್ತರ (ಪಿಜಿ) ತರಗತಿಗಳು ಯಾವುದೇ ಅಡಚಣೆಯಿಲ್ಲದೆ ಸುಗಮವಾಗಿ ನಡೆಯುತ್ತಿವೆ’ ಎಂದು ಹೇಳಿದ್ದಾರೆ.

ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಪತಿರಾಜ್ಯದಲ್ಲೇ ಪ್ರಥಮ ಬಾರಿಗೆ ಪಿಎಚ್‌ಡಿ ವಿದ್ಯಾರ್ಥಿನಿಯರಿಗೆ ಅರೆಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಂಡಿದ್ದು, ಈಗಾಗಲೇ ಅವರು ಆರಂಭಿಕ ತರಗತಿ ತೆಗೆದುಕೊಳ್ಳುತ್ತಿದ್ದಾರೆ

Author

ಪ್ರಮುಖ ಸುದ್ದಿ

Stock market

Astrology