Home » ಲೈವ್ ನ್ಯೂಸ್ » ಅಡುಗೆ ಎಣ್ಣೆಗಳ ಮೇಲಿನ ಮೂಲ ಆಮದು ಸುಂಕವನ್ನು ಇಳಿಕೆ ಮಾಡಿದೆ.

ಅಡುಗೆ ಎಣ್ಣೆಗಳ ಮೇಲಿನ ಮೂಲ ಆಮದು ಸುಂಕವನ್ನು ಇಳಿಕೆ ಮಾಡಿದೆ.

ಹೊಸ ದೆಹಲಿ.04.ಆ:ಕೇಂದ್ರ ಸರ್ಕಾರವು ಪ್ರಮುಖ ಅಡುಗೆ ಎಣ್ಣೆಗಳ ಮೇಲಿನ ಮೂಲ ಆಮದು ಸುಂಕವನ್ನು ಇಳಿಕೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟು, ಗ್ರಾಹಕರಿಗೆ ತುಸು ಸಮಾಧಾನ ತರುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

ಸರ್ಕಾರದ ಹೊಸ ನಿರ್ಧಾರದಂತೆ ಕಚ್ಚಾ ಪಾಮ್ ಎಣ್ಣೆ ಮತ್ತು ಕಚ್ಚಾ ಸೋಯಾಬೀನ್ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇಕಡಾ ಹತ್ತರಿಂದ ಶೇಕಡಾ ಐದಕ್ಕೆ ತಗ್ಗಿಸಲಾಗಿದೆ.

ಅದೇ ರೀತಿ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ಅಂದರೆ ಶೇಕಡಾ ಶೂನ್ಯಕ್ಕೆ ಇಳಿಸಲಾಗಿದೆ. ಇದರೊಂದಿಗೆ ಸಂಸ್ಕರಿಸಿದ (ರಿಫೈನ್ಡ್) ಎಣ್ಣೆಗಳ ಮೇಲಿನ ಸುಂಕದಲ್ಲೂ ಕಡಿತ ಮಾಡಲಾಗಿದೆ.

ಭಾರತವು ತನ್ನ ಅಡುಗೆ ಎಣ್ಣೆಯ ಅಗತ್ಯಕ್ಕಾಗಿ ಇಂದಿಗೂ ಶೇಕಡಾ ಅರ್ಧಕ್ಕಿಂತ ಹೆಚ್ಚು ವಿದೇಶಗಳನ್ನೇ ಅವಲಂಬಿಸಿದೆ. 2024-25ರ ಸಾಲಿನಲ್ಲಿ ದೇಶದಲ್ಲಿ ಲಭ್ಯವಿದ್ದ ಒಟ್ಟು ಅಡುಗೆ ಎಣ್ಣೆಯ ಪೈಕಿ ಶೇಕಡಾ 56 ರಷ್ಟು ವಿದೇಶಗಳಿಂದ ಆಮದಾಗಿದ್ದರೆ, ಕೇವಲ ಶೇಕಡಾ 44 ರಷ್ಟು ಮಾತ್ರ ದೇಶೀಯ ಉತ್ಪಾದನೆಯಿಂದ ದೊರೆತಿದೆ. 2016-17 ರಿಂದಲೂ ಭಾರತದ ಆಮದು ಅವಲಂಬನೆ ಶೇಕಡಾ 54 ಕ್ಕಿಂತ ಹೆಚ್ಚೇ ಉಳಿದುಕೊಂಡಿದ್ದು, 2016-17ರಲ್ಲಿ ಇದು ಶೇಕಡಾ 60 ರಷ್ಟಿತ್ತು.

ಆಮದಾಗುವ ಖಾದ್ಯ ತೈಲಗಳಲ್ಲಿ ಪಾಮ್ ಎಣ್ಣೆಯ ಪಾಲು ಅತ್ಯಂತ ದೊಡ್ಡದಾಗಿದೆ. 2024-25ರಲ್ಲಿ ಭಾರತವು ಒಟ್ಟು 75.17 ಲಕ್ಷ ಟನ್ ಪಾಮ್ ಎಣ್ಣೆಯನ್ನು (ಕಚ್ಚಾ ಮತ್ತು ಸಂಸ್ಕರಿಸಿದ) ಆಮದು ಮಾಡಿಕೊಂಡಿದೆ. ಇದಲ್ಲದೆ 48-21 ಲಕ್ಷ ಟನ್ ಕಚ್ಚಾ ಸೋಯಾಬೀನ್ ಎಣ್ಣೆ ಹಾಗೂ 28.92 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗಿದ್ದು, ದೇಶದ ಒಟ್ಟು ಆಮದಿನಲ್ಲಿ ಈ ಮೂರು ಎಣ್ಣೆಗಳ ಪಾಲು ಸಿಂಹಪಾಲಾಗಿದೆ.

ಭಾರತವು ತನ್ನ ಹೆಚ್ಚಿನ ಖಾದ್ಯ ತೈಲವನ್ನು ವಿದೇಶಗಳಿಂದ ತರಿಸಿಕೊಳ್ಳುವುದರಿಂದ ಆಮದು ಸುಂಕದ ಇಳಿಕೆಯು ಮಾರುಕಟ್ಟೆಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಆದರೆ ಆಮದು ಸುಂಕ ಕಡಿಮೆಯಾದ ತಕ್ಷಣವೇ ಚಿಲ್ಲರೆ ಮಾರುಕಟ್ಟೆಯಲ್ಲಿ ಎಣ್ಣೆ ಬೆಲೆ ತಕ್ಷಣಕ್ಕೆ ಕುಸಿಯುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಗ್ರಾಹಕರು ತೆರುವ ಅಂತಿಮ ಬೆಲೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯ ದರಗಳು, ರೂಪಾಯಿ ಮತ್ತು ಡಾಲರ್ ವಿನಿಮಯ ಮೌಲ್ಯ, ಸರಕು ಸಾಗಣೆ ವೆಚ್ಚ, ಎಣ್ಣೆ ಸಂಸ್ಕರಣೆ, ಪ್ಯಾಕಿಂಗ್, ವಿತರಣಾ ವೆಚ್ಚ ಹಾಗೂ ವ್ಯಾಪಾರಿಗಳ ಲಾಭದ ಪ್ರಮಾಣಗಳು ನಿರ್ಧರಿಸುತ್ತವೆ. ಹಾಗಾಗಿ ಸರ್ಕಾರದ ಈ ಸುಂಕ ಕಡಿತದ ನಿಜವಾದ ಲಾಭ ಎಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ತಲುಪಲಿದೆ ಎಂಬುದೇ ಈಗಿನ ಪ್ರಮುಖ ಅಂಶವಾಗಿದೆ.

Author

ಪ್ರಮುಖ ಸುದ್ದಿ

Stock market

Astrology