Home » ಲೈವ್ ನ್ಯೂಸ್ » ವಿಶೇಷ್ಚೇತನ|ಪಿಂಚಣಿ ₹5 ಸಾವಿರಕ್ಕೆ ಹೆಚ್ಚಿಸಿ:ಕಿವುಡರ ಕ್ಷೇಮಾಭಿವೃದ್ಧಿ ಸಂಘ!

ವಿಶೇಷ್ಚೇತನ|ಪಿಂಚಣಿ ₹5 ಸಾವಿರಕ್ಕೆ ಹೆಚ್ಚಿಸಿ:ಕಿವುಡರ ಕ್ಷೇಮಾಭಿವೃದ್ಧಿ ಸಂಘ!

ಬೆಂಗಳೂರು.04.ಸೇ: ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಚ್. ಶಂಕರ್ ಅವರು ಶ್ರವಣದೋಷ ಇದ್ದವರಿಗೆ ಜೀವನ ನಿರ್ವಹಣಾ ವೆಚ್ಚ ಹೆಚ್ಚಳ ಮತ್ತು ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ, ಶ್ರವಣದೋಷವುಳ್ಳ ಅರ್ಹ ವ್ಯಕ್ತಿಗಳಿಗೆ ನೀಡಲಾಗುತ್ತಿರುವ ಮಾಸಿಕ ಪಿಂಚಣಿಯನ್ನು ₹1,400ರಿಂದ ₹5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ಸಂಘವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 10ನೇ ವಾರ್ಷಿಕೋತ್ಸವ ಹಾಗೂ ಅಂತರರಾಷ್ಟ್ರೀಯ ಶ್ರವಣದೋಷವುಳ್ಳವರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರವಣದೋಷವುಳ್ಳವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

‘ಸಾಮಾನ್ಯ ಶಾಲಾ ಶಿಕ್ಷಕರಿಗೆ ಸಂಜ್ಞಾ ಭಾಷಾ ತರಬೇತಿಗೆ ಯೋಜನೆ ರೂಪಿಸಬೇಕು. ಇದರಿಂದ ಶ್ರವಣದೋಷವುಳ್ಳ ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ.

ಸರ್ಕಾರಿ ಮತ್ತು ಖಾಸಗಿ ಉದ್ಯೋಗಾವಕಾಶಗಳಲ್ಲಿ, ವಿಶೇಷವಾಗಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು. ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸಿ, ಬ್ಯಾಂಕ್‌ಗಳಿಂದ ಸಾಲಸೌಲಭ್ಯ ಒದಗಿಸಲು ಕ್ರಮವಹಿಸಬೇಕು. ಶ್ರವಣದೋಷವುಳ್ಳವರಲ್ಲಿ ಅರ್ಹರಿಗೆ ಚಾಲನಾ ಪರವಾನಗಿ ಸೌಲಭ್ಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ವಿಸ್ತೃತ ಪ್ರಯಾಣದ ಮಿತಿಯೊಂದಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಬೇಕು. ಶ್ರವಣದೋಷವುಳ್ಳ ದಂಪತಿಗೆ ವಿವಾಹದ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಬೇಕು. ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ‘ಬೆರಾ’ ಯಂತ್ರದಂತಹ ಸೂಕ್ತ ಸೌಲಭ್ಯ, ವೈದ್ಯಕೀಯ ಪ್ರಮಾಣಪತ್ರಗಳು ಮತ್ತು ‘ಯುಡಿಐಡಿ’ ವಿಶಿಷ್ಟ ಗುರುತಿನ ಚೀಟಿಗೆ ಸಂಬಂಧಿಸಿದ ಸೇವೆಗಳಿಗೆ ನೆರವು ಒದಗಿಸಬೇಕು’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಅಥವಾ ಕೈಗೆಟಕುವ ದರದಲ್ಲಿ ಚಿಕಿತ್ಸೆ ಒದಗಿಸಬೇಕು. ಶಾಲೆ-ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಹಾಗೂ ಶೈಕ್ಷಣಿಕ ಬೆಂಬಲ ನೀಡಬೇಕು’ ಎಂದು ಆಗ್ರಹಿಸಿದರು.

ನ್ಯಾಷನಲ್ ಅಸೋಸಿಯೇಷನ್ ಆಫ್‌ ಬ್ಲೈಂಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ರಾಜೇಶ್ ಪಾಲ್ಗೊಂಡಿದ್ದರು. ಶ್ರವಣದೋಷವುಳ್ಳ ಮಕ್ಕಳು ಕಿರುನಾಟಕ ಪ್ರದರ್ಶಿಸಿದರು.

ಸ್ಪಂದಿಸುವುದು ಸಮಾಜದ ಜವಾಬ್ದಾರಿ’ : ‘ಶ್ರವಣದೋಷವುಳ್ಳವರ ಸಮಸ್ಯೆಗೆ ಸ್ಪಂದಿಸುವುದು ಮತ್ತು ಅವರಿಗೆ ಅಗತ್ಯ ಸಹಕಾರ ನೀಡುವುದು ಸಮಾಜದ ಜವಾಬ್ದಾರಿ. ಅಂಗವಿಕಲರ ಬಗ್ಗೆ ಸರ್ಕಾರಗಳೂ ವಿಶೇಷವಾಗಿ ಯೋಚಿಸಬೇಕಾಗುತ್ತದೆ. ನಾನು ಆರೋಗ್ಯ ಸಚಿವನಾಗಿದ್ದಾಗ ಕಾಕ್ಲಿಯರ್ ಇಂಪ್ಲಾಂಟ್‌ ವಿಷಯದಲ್ಲಿ ವೈಜ್ಞಾನಿಕವಾಗಿ ಯೋಚಿಸಿ ಹಲವಾರು ಸೂಚನೆಗಳನ್ನು ನೀಡಿದೆ.

ಜಿಲ್ಲೆಗಳಲ್ಲಿ ಕೆಲ ಶಾಲೆಗಳ ಶಿಕ್ಷಕರಿಗಾದರೂ ಸಂಜ್ಞಾ ಭಾಷೆಗಳ ಬಗ್ಗೆ ತರಬೇತಿ ಒದಗಿಸಬೇಕು. ಈ ಕುರಿತು ಶಿಕ್ಷಣ ಸಚಿವರ ಜತೆಗೆ ಚರ್ಚಿಸುತ್ತೇನೆ’ ಎಂದು ಶಾಸಕ ದಿನೇಶ್ ಗುಂಡೂರಾವ್ ಹೇಳಿದರು. ‘ಶ್ರವಣದೋಷವುಳ್ಳವರು ಮಾನಸಿಕ ಮತ್ತು ದೈಹಿಕವಾಗಿ ಸದೃಢರು. ಅವರಿಗೆ ಸರಿಯಾಗಿ ತರಬೇತಿ ನೀಡಿದರೆ ಎಲ್ಲ ಕೆಲಸ ಮಾಡಲು ಸಮರ್ಥರಿರುತ್ತಾರೆ. ಅವರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಮುಂದಿನ ಅಧಿವೇಶನದಲ್ಲಿಯೂ ಈ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

Author

ಪ್ರಮುಖ ಸುದ್ದಿ

Stock market

Astrology