ಬೆಂಗಳೂರು.03.ಮಾರ್ಚ್.26: ರಾಜ್ಯದ 2026-27ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿದ್ಧತೆ. ಎಲ್ಲರ ಚಿತ್ತ ಈಗ ದಾಖಲೆಯ ಮತ್ತೊಂದು ಬಜೆಟ್ನತ್ತ ನೆಟ್ಟಿದೆ. ರಾಜ್ಯದ ಜನರ ನಿರೀಕ್ಷೆಗಳು ಈ ಬಜೆಟ್ ಗರಿಗೆದರಿವೆ. ಸಿದ್ದರಾಮಯ್ಯ ಅವರ ಈ ಸರ್ಕಾರದ ಮೊದಲ ಆದ್ಯತೆ ನೀಡಲಾಗಿತ್ತು.
ಆ ಯೋಜನೆಗಳಿಗೆ ಅನುದಾನ ಹೊಂದಿಸುವ ಕಸರತ್ತು ಢಾಳಾಗಿತ್ತು. ಆದರೆ, ರಾಜ್ಯದ ಹಿತದೃಷ್ಟಿಯಿಂದ ಕೆಲವು ವಲಯಗಳಿಗೆ ಸರ್ಕಾರ ತುರ್ತಾಗಿ ಈ ಬಜೆಟ್ನಲ್ಲಿ ಅನುದಾನ ಒದಗಿಸಲೇಬೇಕಿದೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ‘ಉದಯವಾಣಿ’ ಇಲ್ಲಿ ಪಟ್ಟಿ ಮಾಡಿದೆ. ಅದರೊಂದಿಗೆ ಯಾಕೆ ಆಯಾ ವಲಯಕ್ಕೆ ಆದ್ಯತೆ ನೀಡಬೇಕು ಎಂಬ ವಿವರಣೆಯನ್ನೂ ನೀಡಲಾಗಿದೆ.
1.ವಿಶೇಷವಾಗಿ ಈ ಭಾಗದ ನೀರಾವರಿ ಯೋಜನೆ ಎಂದೇ ಜನಜನಿತವಾಗಿರುವ ಎತ್ತಿನಹೊಳೆ ಯೋಜನೆಯ ಬಗ್ಗೆ ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದರೆ ಯೋಜನೆಗೆ ಅಡಿಗಲ್ಲು ಬಿದ್ದು ಒಂದು ದಶಕ ಕಳೆದರೂ ಚಿಕ್ಕಬಳ್ಳಾಪುರದತ್ತ ಎತ್ತಿನಹೊಳೆ ಹರಿಸಲು ಸಾಧ್ಯವಾಗಿಲ್ಲ.
2027ರ ವೇಳೆಗೆ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರಲಿದೆ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂ.ಸಿ.ಸುಧಾಕರ್, ಕೃಷ್ಣಬೈರೇಗೌಡ ಪ್ರತಿಪಾದಿಸುತ್ತಿದ್ದಾರೆ. ಈ ಎಲ್ಲ ಲೆಕ್ಕಾಚಾರದಲ್ಲಿ ಈ ಬಾರಿ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದ ಜನರು ಅಪಾರ ಅನುದಾನದ ನಿರೀಕ್ಷೆ ಹೊಂದಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ 2023ರ ಜುಲೈನಲ್ಲಿ ಮತ್ತು 2024ರ ಫೆಬ್ರುವರಿಯಲ್ಲಿ ಮತ್ತು 2025ರಲ್ಲಿ ಮಂಡಿಸಿದ ಬಜೆಟ್ನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯಾವುದೇ ಪ್ರಮುಖ ಯೋಜನೆಗಳ ಪ್ರಸ್ತಾಪ ಇರಲಿಲ್ಲ.
ಕೈಗಾರಿಕೀಕರಣ; ಶಾಪಗ್ರಸ್ತ ರಾಜಧಾನಿ ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಕ್ಕಬಳ್ಳಾಪುರ ಸಮೀಪವಿದ್ದರೂ ಕೈಗಾರಿಕೀಕರಣದ ಅಭಿವೃದ್ಧಿಯಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೀಕರಣದ ಪರ್ವ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಸ್ಥಾಪನೆಗೆ ಸರ್ಕಾರ ಮುಂದಾಗಿದೆ. 7856.37 ಎಕರೆ ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 2278.10 ಎಕರೆಯನ್ನು ಕರ್ನಾಟಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಭೂ ಮಾಲೀಕರಿಗೆ ಪರಿಹಾರ ವಿತರಣೆ ಸಹ ಪ್ರಗತಿಯಲ್ಲಿದೆ. ಹೀಗೆ ಅಂತಿಮ ಅಧಿಸೂಚನೆ ಮತ್ತು ಪ್ರಾಥಮಿಕ ಅಧಿಸೂಚನೆ ಸೇರಿ ಜಿಲ್ಲೆಯಲ್ಲಿ 10134 ಎಕರೆಯು ಕೈಗಾರಿಕೀಕರಣದ ಹಂತದಲ್ಲಿ ಇವೆ. ಹೀಗೆ ಜಿಲ್ಲೆಯ ಚಿಂತಾಮಣಿ ಶಿಡ್ಲಘಟ್ಟ ಗೌರಿಬಿದನೂರು ಮತ್ತು ಬಾಗೇಪಲ್ಲಿಯಲ್ಲಿ ಕೈಗಾರಿಕೀಕರಣಕ್ಕೆ ವೇಗ ದೊರೆತಿದ್ದರೆ ಚಿಕ್ಕಬಳ್ಳಾಪುರ ಮಾತ್ರ ಕೈಗಾರಿಕೀಕರಣದ ವಿಚಾರವಾಗಿ ಶಾಪಗ್ರಸ್ತವಾಗಿದೆ. ಜನರು ಕೈಗಾರಿಕಾ ಟೌನ್ಶಿಪ್ ಎದುರು ನೋಡುತ್ತಿದ್ದಾರೆ. ಕೃಷಿ ಪ್ರಧಾನವಾಗಿರುವ ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ನಿರ್ಮಿಸಬೇಕು ಎನ್ನುವ ಆಗ್ರಹ ರೈತರದ್ದಾಗಿದೆ.
2.ಕೃಷಿಯಲ್ಲಿ ಎ.ಐ. ತಾಂತ್ರಿಕತೆ
ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮೊದಲಿನಿಂದಲೂ ಮುಂದಿದೆ. ಈ ತಂತ್ರಜ್ಞಾನಗಳ ಸಮರ್ಪಕ ಅಳವಡಿಕೆ ಕೃಷಿಯಲ್ಲಿ ಆಗಬೇಕಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (ಎ.ಐ.) ಬಳಸಿಕೊಳ್ಳಬೇಕಿದೆ. ಉದಾಹರಣೆಗೆ ನೆರೆಯ ಮಹಾರಾಷ್ಟ್ರದ ಬಾರಾಮತಿಯಲ್ಲಿ ಕಬ್ಬು ಬೆಳೆಯಲ್ಲಿ ಎಐ ಬಳಸಿಕೊಂಡ ಪರಿಣಾಮ ಉತ್ಪಾದನೆಯಲ್ಲಿ ಶೇ.30ರಷ್ಟು ಏರಿಕೆಯಾಗಿದೆ. ಅಂತಹ ಪ್ರಯೋಗಗಳಿಗೆ ಬಜೆಟ್ನಲ್ಲಿ ಉತ್ತೇಜನ ನೀಡುವ ಅವಶ್ಯಕತೆ ಇದೆ. ರಾಜಧಾನಿ ಬೆಂಗಳೂರಿನಲ್ಲೇ ಐಐಎಂಬಿ, ಐಐಎಚ್ಆರ್, 6 ಕೃಷಿ ವಿವಿಗಳು, ಐಸಿಎಆರ್ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿವೆ. ಇದಕ್ಕಾಗಿ ಉನ್ನತ ಶಿಕ್ಷಣ ಪರಿಷತ್ತಿನ ಮಾದರಿಯಲ್ಲೇ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯ ಉನ್ನತ ಪರಿಷತ್ತು ಅಸ್ತಿತ್ವಕ್ಕೆ ಬರಬೇಕಿದೆ.
3. ಯುಕೆಪಿ-3ಗೆ ಅನುದಾನ
ಉತ್ತರ ಕರ್ನಾಟಕದ ‘ಜೀವನದಿ’ ಕೃಷ್ಣಾ. ಉದ್ದೇಶಿತ ಈ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಜಾರಿಗೊಳಿಸಲು ಈಚೆಗಷ್ಟೇ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅದಕ್ಕೆ ಬಜೆಟ್ನಲ್ಲಿ ಸರ್ಕಾರ ಆದ್ಯತೆ ಮೇರೆಗೆ ಅನುದಾನ ಒದಗಿಸುವ ಅಗತ್ಯವಿದೆ. ಮುಳುಗಡೆ ಜಮೀನುಗಳಿಗೆ ಪರಿಹಾರಕ್ಕೆ 70-72 ಸಾವಿರ ಕೋಟಿ ರೂ. ಬೇಕಾಗುತ್ತದೆ. ಈ ಯೋಜನೆ ಸರ್ಕಾರ ನೀಡುವ ಅನುದಾನದ ಮೇಲೆ ಅವಲಂಬನೆಯಾಗಿದೆ. ಇದರಡಿ ಬರುವ 9 ಉಪಯೋಜನೆಯಲ್ಲಿನ 2ನೇ ಅತಿದೊಡ್ಡ ಉಪಯೋಜನೆ ಕೊಪ್ಪಳ ಏತ ನೀರಾವರಿ. ಇದರಿಂದ 1.12 ಲಕ್ಷ ಹೆಕ್ಟೇರ್ ಭೂಮಿ ನೀರಾವರಿ ಆಗಲಿದೆ. ಇದಕ್ಕೆ 7000 ಕೋಟಿ ರೂ. ಅಗತ್ಯವಿದೆ.
4.ಎಂಡೊಕ್ರೈನಾಲಜಿ, ನಿಮ್ಹಾನ್ಸ್ ಜಾಗ ಗುರುತು:
ಮಧುಮೇಹ ಸಮಸ್ಯೆಗಳಿಗೆ ಒಂದೇ ಸೂರಿನಡಿ ಸಮಗ್ರ ಆರೈಕೆ, ಚಿಕಿತ್ಸೆ ನೀಡುವ ಪ್ರಾದೇಶಿಕ ಎಂಡೊಕ್ರೈನಾಲಜಿ (ನಿರ್ನಾಳ ಗ್ರಂಥಿವಿಜ್ಞಾನ) ಕೇಂದ್ರ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
50 ಕೋಟಿ ರೂ. ನಿಗದಿ ಪಡಿಸಲಾಗಿದೆ. ನಗರದ ಕೆಆರ್ಎಸ್ ರಸ್ತೆಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಿದ್ವಾಯಿ ಆಸ್ಪತ್ರೆ ಬಳಿಯೇ ಇದಕ್ಕೆ 3 ಎಕರೆ ಜಾಗ ಕೊಡಲಾಗಿದ್ದು, ಟೆಂಡರ್ ಕರೆದು ಕಾಮಗಾರಿ ಶುರು ಮಾಡಬೇಕಿದೆ. 40 ಹಾಸಿಗೆ ಸಾಮರ್ಥ್ಯ ಇದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗುಡುಮಾದನಹಳ್ಳಿ ಬಳಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆರಂಭಿಸಲು 20 ಎಕರೆ ಜಾಗ ಗುರುತಿಸಿದೆ. ಘೋಷಣೆಯಾದ 11 ತಿಂಗಳ ಬಳಿಕ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಅನುದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಎರಡು ಯೋಜನೆಗಳು ನಿರ್ಮಾಣವಾದರೆ ಮೈಸೂರು ಜಿಲ್ಲೆಯೊಂದಿಗೆ ಚಾಮರಾಜನಗರ, ಕೊಡುಗ, ಮಂಡ್ಯ ಜನರಿಗೂ ಅನುಕೂಲವಾಗಲಿದೆ.
5. ಸರ್ಕಾರಿ ಶಿಕ್ಷಕರ ನೇಮಕಾತಿ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆಯಿದ್ದು ರಾಜ್ಯದ ಶಾಲಾ ಶಿಕ್ಷಣಕ್ಕೆ ಅತಿಥಿ ಶಿಕ್ಷಕರೇ ಆಸರೆ ಆಗುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 1.80 ಲಕ್ಷಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆ ಮಂಜೂರಾಗಿದ್ದು ಈ ಪೈಕಿ ಸುಮಾರು 62 ಸಾವಿರ ಶಿಕ್ಷಕರ ಹುದ್ದೆ ಖಾಲಿಯಿದೆ. ತನ್ಮೂಲಕ ಪ್ರತಿ 3 ಶಿಕ್ಷಕ ಹುದ್ದೆಯಲ್ಲಿ ಒಂದು ಹುದ್ದೆ ಖಾಲಿ ಇದ್ದಂತೆ ಆಗಿದೆ. ಜತೆಗೆ ಶಿಕ್ಷಕರ ನಿವೃತ್ತಿಯಿಂದಾಗಿ ಪ್ರತಿ ವರ್ಷ ಮೂರ್ನಾಲ್ಕು ಸಾವಿರ ಹುದ್ದೆಗಳು ಖಾಲಿ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಶಿಕ್ಷಕರ ನೇಮಕಾತಿ ಅನಿವಾರ್ಯವಾಗಿದೆ.
6. ವಿ.ವಿ.ಗಳ ಹುದ್ದೆ ಭರ್ತಿ
ರಾಜ್ಯದ ವಿವಿಗಳಲ್ಲಿ ಶೇ.50ಕ್ಕಿಂತ ಹೆಚ್ಚು ಬೋಧಕರ ಹುದ್ದೆಗಳು ಖಾಲಿಯಿದ್ದು, ಉನ್ನತ ಶಿಕ್ಷಣದ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿರುವ 30ಕ್ಕಿಂತ ಹೆಚ್ಚು ಸಾರ್ವಜನಿಕ ವಿವಿಗಳಲ್ಲಿ ಬೋಧಕ ಸಿಬ್ಬಂದಿ ಕೊರತೆ ತೀವ್ರವಾಗಿದ್ದು ರಾಜ್ಯದ ಬಡ, ಹಿಂದುಳಿದ, ದಲಿತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉನ್ನತ ಶಿಕ್ಷಣದಲ್ಲಿ ಅತಿಥಿ ಬೋಧಕರ ಮೇಲಿನ ಅವಲಂಬನೆ ಕಡಿಮೆ ಮಾಡಿ ಕಾಯಂ ಉಪನ್ಯಾಸಕರ ನೇಮಕಕ್ಕೆ ತ್ವರಿತ ಕ್ರಮ ಕೈಗೊಂಡರೆ ರಾಜ್ಯದ ಸಾರ್ವಜನಿಕ ವಿವಿಗಳು ಬಲಗೊಳ್ಳಲಿವೆ. ಕೆಲವು ವಿವಿಗಳು ಮತ್ತು ಕಾಲೇಜುಗಳಲ್ಲಿ ಕೆಲ ವಿಭಾಗಗಳನ್ನು ಅತಿಥಿ ಬೋಧಕರೇ ಮುನ್ನಡೆಸುತ್ತಿದ್ದಾರೆ.
7. ಉದ್ಯೋಗ ನೇಮಕಾತಿ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳು ಹಾಗೂ ಪ್ರಾಧಿಕಾರಗಳಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳ ಭರ್ತಿಗೆ ಈ ಬಜೆಟ್ನಲ್ಲಿ ಘೋಷಣೆ ಮಾಡಬೇಕು. ಜತೆಗೆ ಖಾಸಗಿ ವಲಯದಲ್ಲೂ ಉದ್ಯೋಗ ಸೃಜನೆಗೂ ಆದ್ಯತೆ ಕೊಡಬೇಕು. ರಾಜ್ಯ ಸರ್ಕಾರ ಬೃಹತ್ ಕೈಗಾರಿಕಾ ಇಲಾಖೆ ಮೂಲಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಉದ್ಯಮಗಳ ಸ್ಥಾಪನೆಗಾಗಿ ನೂರಾರು ಎಕರೆ ಭೂಮಿಯನ್ನು ಮಂಜೂರು ಮಾಡುತ್ತಿದೆ. ರಾಜ್ಯದಲ್ಲಿ ಲಕ್ಷಾಂತರ ಮಂದಿ ನಿರುದ್ಯೋಗಿಗಳಿದ್ದು, ಅವರಿಗೆ ಖಾಸಗಿ ವಲಯದಲ್ಲೂ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಸೃಜನೆಗೆ ಕ್ರಮ ಕೈಗೊಳ್ಳಬೇಕು.
8. ಸಾರಿಗೆ ನಿಗಮ: ಬಾಕಿ ಪಾವತಿ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯದ 4 ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕಾಗಿ ಒಟ್ಟು 17054.54 ಕೋಟಿ ರೂ. ವೆಚ್ಚವಾಗಿದೆ. ಅದರಲ್ಲಿ ರಾಜ್ಯ ಸರ್ಕಾರವು 12632.08 ಕೋಟಿ ರೂ. ಮರು ಪಾವತಿ ಮಾಡಿದೆ. ಇನ್ನೂ ಸರಿಸುಮಾರು 4422.43 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸಾರಿಗೆ ನಿಗಮಗಳಿಗೆ ಸರ್ಕಾರ ಬಾಕಿ ಉಳಿಸಿಕೊಂಡಿರುವ ಶಕ್ತಿ ಯೋಜನೆಯ ಟಿಕೆಟ್ ಮೊತ್ತವನ್ನು ಪಾವತಿಸಬೇಕು. ಸಾರಿಗೆ ನೌಕರರ ನೌಕರರ ಬೇಡಿಕೆ ಈಡೇರಿಸಬೇಕು.
9. ಹಾಸ್ಟೆಲ್ ಸಂಖ್ಯೆ ಏರಿಕೆ
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಾಲಿ ಇರುವ ಹಾಸ್ಟೆಲ್ಗಳಿಂದ ವಿದ್ಯಾರ್ಥಿಗಳ ಪ್ರವೇಶ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಸ್ಟೆಲ್ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ತಿಂಗಳಿಗಿಷ್ಟು ಹಣ ಕೊಡುವ ವ್ಯವಸ್ಥೆಯೂ ಯಶಸ್ವಿಯಾಗಿಲ್ಲ. ಅವರು ಪೇಯಿಂಗ್ ಗೆಸ್ಟ್ಗಳ ಶುಲ್ಕ ತುಂಬುವ ಸ್ಥಿತಿಯಲ್ಲೂ ಇಲ್ಲ. ಹಾಸ್ಟೆಲ್ಗಳಲ್ಲಿ ಪ್ರವೇಶ ಸಿಗದ ಕಾರಣ ಹಿಂದುಳಿದ ವರ್ಗಗಳಿಗೆ ಸೇರಿದ ನೂರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹಾಸ್ಟೆಲ್ಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ನೀಡಬೇಕು.
19. ಅಂಗನವಾಡಿ ಸಿಬ್ಬಂದಿಗೆ ಗೌರವಧನ ಹೆಚ್ಚಳ
ಹಲವಾರು ದಶಕಗಳ ಕಾಲದಿಂದಲೂ ಮಕ್ಕಳ ಪೋಷಣೆ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಅಂಗನವಾಡಿ ಸಿಬ್ಬಂದಿ ಗೌರವಧನ ಹೆಚ್ಚಿಸಬೇಕು. ರಾಜ್ಯದಲ್ಲಿ 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 61 ಸಾವಿರಕ್ಕೂ ಹೆಚ್ಚು ಅಂಗನವಾಡಿ ಸಹಾಯಕಿಯರಿದ್ದು ದಶಕದಿಂದಲೂ ಸೇವೆ ಕಾಯಂ ಇಲ್ಲದೇ ಸಿಬ್ಬಂದಿ ಕನಿಷ್ಠ ಗೌರವಧನದಲ್ಲಿ ದುಡಿಯುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 15 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ರೂ. ಹೆಚ್ಚಳ ಮಾಡಬೇಕಿದೆ. 2011ರಿಂದ ನಿವೃತ್ತಿಯಾದವರಿಗೆ ಗ್ರ್ಯಾಚುಟಿ ಸೌಲಭ್ಯ ನೀಡಬೇಕು.
11. ಪೊಲೀಸರಿಗೆ ಮತ್ತಷ್ಟು ‘ಬಲ’
ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಯಿಂದ ಡಿವೈಎಸ್ಪಿ ಹುದ್ದೆವರೆಗೂ ಸಾವಿರಾರು ಹುದ್ದೆಗಳು ಖಾಲಿಯಿದೆ. ಈಗಾಗಲೇ ಬೆಂಗಳೂರು ಸೇರಿ ರಾಜ್ಯದ ಪ್ರತಿ ಪೊಲೀಸ್ ಠಾಣೆಗಳು, ವಿಶೇಷ ಘಟಕಗಳಲ್ಲಿ ಹತ್ತಾರು ಹುದ್ದೆಗಳು ಖಾಲಿ ಇವೆ. ಹೀಗಾಗಿ ಹೆಚ್ಚುವರಿ ಒತ್ತಡದಿಂದಲೇ ಪೊಲೀಸ್ ಅಧಿಕಾರಿ- ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ಪೊಲೀಸ್ ಮೂಲಗಳ ಪ್ರಕಾರ, ಪೊಲೀಸ್ ಇಲಾಖೆಯಲ್ಲಿ 15 ಸಾವಿರಕ್ಕೂ ಹೆಚ್ಚು ಹುದ್ದೆಗಳು (ಕಾನ್ಸ್ಟೇಬಲ್ ಮತ್ತು ಪಿಎಸ್ಐ) ಖಾಲಿ ಇವೆ ಎಂದು ಹೇಳಲಾಗಿದೆ. ಆದ್ದರಿಂದ ಪೊಲೀಸ್ ಕಾನ್ಸ್ಟೇಬಲ್ ಮತ್ತು ಪಿಎಸ್ಐ ನೇಮಕಾತಿಗೆ ಆದ್ಯತೆ ನೀಡಬೇಕಿದೆ.
12. ಅನುದಾನ ಪರಿಶಿಷ್ಟರ ತಲುಪಲಿ
ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ವೆಚ್ಚ ಕಾಯ್ದೆಯಡಿ ಮೀಸಲಿಡಲಾಗುವ ಅನುದಾನದ ವೆಚ್ಚಕ್ಕೆ ಇರುತ ತಾಂತ್ರಿಕ ನ್ಯೂನತೆ ಸರಿಪಡಿಸಬೇಕು. ಸಮಾಜ ಕಲ್ಯಾಣ ವಲಯದ ವ್ಯಾಪ್ತಿಗೆ ಬರುವ ಸಮುದಾಯಗಳ ಅಭಿವೃದ್ದಿಗೆ ಸ್ಥಾಪಿಸಲಾಗಿರುವ ನಿಗಮ-ಮಂಡಳಿಗಳ ಕಾರ್ಯಾರಚಣೆಗೆ ನಿರ್ದಿಷ್ಟ ಚೌಕಟ್ಟು ಬೇಕಾಗಿದೆ. ಅನುದಾನ ಹಂಚಿಕೆಗೆ ಇರುವ ಮಾರ್ಗಸೂಚಿ-ಮಾನದಂಡಗಳು ಈಗಿನ ಬೇಡಿಕೆಗಳಿಗೆ ತಕ್ಕಂತೆ ಪರಿಷ್ಕರಿಸಬೇಕಾಗಿದೆ. ಓಲೈಕೆಯ ಯೋಜನೆಗಳ ಬದಲಿಗೆ ಎಸ್ಸಿ-ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಔದ್ಯೋಗಿಕ ಏಳಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು.






Any questions related to 2026-27ನೇ ಬಜೆಟ್ನಲ್ಲಿ ,ಸಿಬ್ಬಂದಿಗೆ ಗೌರವಧನ ಹೆಚ್ಚಳ, ಎಸ್ಸಿ-ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಯೋಜನೆಗಳು ಹಾಗೂ ವಿವಿಧ ನೇಮಕಾತಿಗಳು|?