ಕೊಪ್ಪಳ.20.ಆಗಸ್ಟ್.26: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯಲ್ಲಿ 2026ನೇ ಸಾಲಿನ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಪರಿಷ್ಕೃತ ವೇಳಾಪಟ್ಟಿ ಇಂತಿದೆ: ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆ. 24 ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶ, ಆ. 24 ರಿಂದ ಅಕ್ಟೋಬರ್ 22ರವರೆಗೆ ನೋಟಿಸ್ ಹಂತ ಹಾಗೂ ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು, ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ.
ಮತದಾರರ ಪರಿಶೀಲನೆ ಹಾಗೂ ಡಿಜಿಟಲೀಕರಣ ಮಾಹಿತಿ: ದಿನಾಂಕ 16.06.2026 ರವರೆಗಿನ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 11,90,214 ಮತದಾರರಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಆ. 17ರ ವೇಳೆಗೆ 10,41,388 (ಶೇ. 87.50) ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಆನ್‌ಲೈನ್ ಮೂಲಕ ಒಟ್ಟು 1,571 ಗಣತಿ ನಮೂನೆಗಳು ಸ್ವೀಕೃತವಾಗಿವೆ. ಮನೆ ಮನೆ ಭೇಟಿ ಪರಿಶೀಲನೆಯಲ್ಲಿ ಒಟ್ಟು 1,48,826 ಮತದಾರರನ್ನು ವಿವಿಧ ವರ್ಗಗಳಲ್ಲಿ ಗುರುತಿಸಲಾಗಿದ್ದು, 76,071 ಸ್ಥಳಾಂತರಗೊಂಡವರು (ಶಿಫ್ಟೆಂಡ್), 28,922 ಮೃತಪಟ್ಟವರು (ಡೆಥ್), 32,501 ದ್ವಿಪ್ರತಿ/ಪುನರಾವರ್ತಿತ (ಡುಬ್ಲಿಕೇಟ್) ಆಗಿದ್ದಾರೆ.
ಈ ಕುರಿತ ಸಂಪೂರ್ಣ ವಿವರಗಳನ್ನು ಭಾಗವಾರು ಹಾಗೂ ವಿಧಾನಸಭಾ ಕ್ಷೇತ್ರವಾರು ಜಿಲ್ಲಾ ಜಾಲತಾಣದಲ್ಲಿ ([https://koppal.nic.in/en/election/](https://koppal.nic.in/en/election/)) ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ನಮೂನೆ 6 ಮತ್ತು ಘೋಷಣಾ ನಮೂನೆಯೊಂದಿಗೆ ಸಲ್ಲಿಸುವ ಕುರಿತು ಮಾರ್ಗಸೂಚಿಗಳು: ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಹರಾಗಿರುವ ಯಾವುದೇ ವ್ಯಕ್ತಿಯು ಬೂತ್ ಮಟ್ಟದ ಅಧಿಕಾರಿಗಳಿಂದ ನಮೂನೆಯನ್ನು ಪಡೆಯಬಹುದು. ನಮೂನೆ 6 (ಹೊಸ ಮತದಾರರ ನೋಂದಣಿ). ನಮೂನೆ 6ಎ (ಹೊಸ ಮತದಾರರ ನೋಂದಣಿ – ಎನ್.ಆರ್.ಐ), ನಮೂನೆ 7 (ಈಗಿರುವ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು) ಮತ್ತು ನಮೂನೆ 8 (ನಮೂದುಗಳ ತಿದ್ದುಪಡಿಗಾಗಿ) ಇವುಗಳನ್ನು ECINET ಮೊಬೈಲ್ ಆಪ್ ಅಥವಾ voters.eci.gov.in ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿಯೂ ಸಲ್ಲಿಸಬಹುದು.
ನಮೂನೆ 6 ಮತ್ತು ಘೋಷಣಾ ನಮೂನೆಯನ್ನು ಸಲ್ಲಿಸುವ ಮೊದಲು ಅರ್ಜಿದಾರರು ಕೆಲವು ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕಾಗಿದ್ದು, ಅವರು ಭಾರತದ ಪ್ರಜೆಯಾಗಿರಬೇಕು. ಅವರು 01.10.2026ರ ವೇಳೆಗೆ 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಅಥವಾ ಪೂರ್ಣಗೊಳಿಸಲಿರಬೇಕು. ಅರ್ಜಿಯಲ್ಲಿ ನಮೂದಿಸಿರುವ ವಿಳಾಸದಲ್ಲಿ ಅವರು ಸಾಮಾನ್ಯ ನಿವಾಸಿಯಾಗಿರಬೇಕು. ಅವರು ಪ್ರಸ್ತುತ ಭಾರತದ ನೋಂದಾಯಿತರಾಗಿರಬಾರದು. ಬೇರೆ ಯಾವುದೇ ಸ್ಥಳದಲ್ಲಿ ಮತದಾರರಾಗಿ ನೋಂದಾಯಿತರಾಗಿರಬಾರದು. ಚುನಾವಣಾ ಆಯೋಗವು ನಿಗದಿಪಡಿಸಿರುವ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಹೊಸದಾಗಿ ನೋಂದಣಿಗೆ, ತಿದ್ದುಪಡಿಗಾಗಿ ಹಾಗೂ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅರ್ಜಿಗಳು ಸ್ವೀಕೃತಿಯಾಗಿದ್ದು, ಇದುವರೆಗೆ ನಮೂನೆ-6 ರಡಿ 4,982 ಅರ್ಜಿಗಳು, ನಮೂನೆ-6ಎ ರಡಿ 1, ನಮೂನೆ-7 ರಡಿ 892 ಹಾಗೂ ನಮೂನೆ-8 ರಡಿ 10,258 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ಆ. 24 ರಂದು ಕರಡು ಪಟ್ಟಿ ಪ್ರಕಟ, ಅಕ್ಟೋಬರ್ 27ಕ್ಕೆ ಅಂತಿಮ ಪಟ್ಟಿ ಬಿಡುಗಡೆ.?