Home » ಲೈವ್ ನ್ಯೂಸ್ » ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಗ್ರಂಥಾಲಯ ಸ್ಥಾಪನೆ

ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಗ್ರಂಥಾಲಯ ಸ್ಥಾಪನೆ

ಬೆಂಗಳೂರು.01.ಸೆಪ್ಟಂಬರ.26: ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಬೆಂಗಳೂರು, ಧಾರವಾಡ ಮತ್ತು ಮೈಸೂರು ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಪರ್ಧಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಿನದ 24 ಗಂಟೆಯೂ ಓದಲು ಸಾಧ್ಯವಾಗುವ ಗ್ರಂಥಾಲಯಗಳನ್ನು ಸ್ಥಾಪಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು. ಸ್ಥಳ ಪರಿಶೀಲನೆ ನಡೆಸಿ 24 ಗಂಟೆಯ ಗ್ರಂಥಾಲಯ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು.

ತಮಗೆ ಎರಡನೇ ಬಾರಿ ಸಚಿವ ಸ್ಥಾನ ದೊರೆತ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ ಬೇರೆ ಖಾತೆ ಬೇಕೇ ಎಂದು ಕೇಳಿದ್ದರು. ಆದರೆ ತಾವು ಶಿಕ್ಷಣ ಇಲಾಖೆಯಲ್ಲೇ ಮುಂದುವರಿಯಲು ಬಯಸಿರುವುದಾಗಿ ತಿಳಿಸಿದ್ದೆ. ನಾರಾಯಣ ಗುರುಗಳ ಜಯಂತಿ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರುವುದಾಗಿ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಪ್ರತಿ ಪುಟ ಮುದ್ರಣಕ್ಕೆ 50 ಪೈಸೆ ಹೆಚ್ಚಳ

ಮುದ್ರಣ ಇಲಾಖೆಯ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಕಳೆದ 10 ವರ್ಷಗಳಿಂದ ಪುಸ್ತಕಗಳ ಪುಟಗಳ ಮುದ್ರಣ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಇದೀಗ ಪ್ರತಿ ಪುಟದ ಮುದ್ರಣ ದರವನ್ನು 50 ಪೈಸೆ ಹೆಚ್ಚಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಘೋಷಿಸಿದರು.

ಗ್ರಂಥಾಲಯ ಇಲಾಖೆಯನ್ನು ಮುನ್ನೆಲೆಗೆ ತರಲು ಸಮಿತಿ

ಶಾಲಾ ಶಿಕ್ಷಣ ಇಲಾಖೆಯ ಭಾಗವಾಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಿಂದುಳಿದಿರುವುದು ಗಮನಕ್ಕೆ ಬಂದಿದೆ. ಇಲಾಖೆಯನ್ನು ಎಲ್ಲ ರೀತಿಯಿಂದಲೂ ಬಲಪಡಿಸಿ ಮುನ್ನೆಲೆಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಸಮಿತಿ ರಚಿಸಿ, ಗ್ರಂಥಾಲಯ ಇಲಾಖೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಗುವುದು. ಈ ಸಂಬಂಧ ಎಲ್ಲರ ಸಲಹೆಗಳಿಗೆ ಮುಕ್ತ ಸ್ವಾಗತವಿದೆ ಎಂದು ಸಚಿವರು ಹೇಳಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ. ರಾಜಪ್ಪ ದಳವಾಯಿ ಅವರು ಈ ಕಾರ್ಯದಲ್ಲಿ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

Author

ಪ್ರಮುಖ ಸುದ್ದಿ

Stock market

Astrology