ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ಶ್ರೀ ಪ್ರಭುರಾವ್ ಕಂಬಳಿ ವಾಲೆ ಟ್ರಸ್ಟ್ ರಚನೆಗೆ ಆದೇಶ- ಸಚಿವ ಶಿವರಾಜ ತಂಗಡಗಿ
ಬೀದರ, ಡಿಸೆಂಬರ್.25:- ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಪ್ರಖ್ಯಾತ ಲೇಖಕಿ, ಸಮಾಜ ಸೇವಕಿ ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ಕನ್ನಡ ಹೋರಾಟಗಾರ ,ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಖ್ಯಾತರಾದ ಶ್ರೀ ಪ್ರಭುರಾವ್ ಕಂಬಳಿವಾಲೆ ಅವರ ಹೆಸರಿನಲ್ಲಿ ಟ್ರಸ್ಟ್ ಗಳನ್ನು ರಚಿಸಲು ನಿರ್ಧರಿಸಲಾಗಿದ್ದು ಈ ಸಂಬoಧ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಹೈದರಾಬಾದ್ ಕರ್ನಾಟಕದ ಜನತೆಯ ಬಹುದಿನದ ಅಪೇಕ್ಷೆಯಂತೆ ಈ ಎರಡು ಟ್ರಸ್ಟ್ ಗಳನ್ನು ರಚಿಸುವ ಸಂಬoಧ ಬಂದಿದ್ದ ಪ್ರಸ್ತಾವನೆಗೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಈ ಸಂಬoಧ ಕೂಡಲೇ ಆದೇಶ ಹೊರಡಿಸುವಂತೆ ಇಲಾಖಾ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಇಬ್ಬರು ಮಹನೀಯರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾದದ್ದು, ಹಾಗಾಗಿ ಈ ಟ್ರಸ್ಟ್ ಗಳನ್ನು ಅವರ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ರಚಿಸಲಾಗುತ್ತಿದೆ.
ಈ ಎರಡು ಟ್ರಸ್ಟ್ ಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ನೇಮಕ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

