ಬೀದರ್ : ದಿವಂಗತ ಡಾ. ಚಂದ್ರಕಲಾ ಬಿದರಿ ಅವರು ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ, ಉಪನ್ಯಾಸಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದು, ಅವರ ಸಾಹಿತ್ಯ ಸಾಧನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪಾ ಮಾಸಿಮಾಡೆ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ, ಹಾಗೂ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಭಾಲ್ಕಿ, ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಂಬಾರವಾಡ ರಸ್ತೆಯ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಸಂಚಾಲಕರಾದ ದಿವಂಗತ ಡಾ. ಚಂದ್ರಕಲಾ ಬಿದರಿ ಅವರ ಬದುಕು ಬರಹ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದುದ್ದಕ್ಕೂ ಸುಖ ದುಃಖ, ಕಷ್ಟ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಅನೇಕ ಸಾಧನೆಗಳನ್ನು ಮಾಡಿದ ಅವರು, ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶ, ಆಚಾರ ವಿಚಾರ, ಮೌಲ್ಯಗಳು ಹಾಗೂ ಸಾಹಿತ್ಯ ಪರಂಪರೆ ಸದಾ ಜೀವಂತವಾಗಿದ್ದು, ಅವರ ವ್ಯಕ್ತಿತ್ವ ಮತ್ತು ಕೃತಿಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿವೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಡಾ. ರಾಮಚಂದ್ರ ಗಣಾಪೂರ ಅವರು, ಬಾಲ್ಯದಲ್ಲಿಯೇ ಅಕ್ಕಮಹಾದೇವಿ ನಾಟಕದಲ್ಲಿ ಅಭಿನಯಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದ ಚಂದ್ರಕಲಾ ಬಿದರಿ ಅವರು, ನಂತರ ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸಿ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅವರ ಬದುಕು ಬಹುಮುಖ ವ್ಯಕ್ತಿತ್ವದ ಪ್ರತೀಕವಾಗಿತ್ತು. ಯೋಗ, ಪ್ರಾಣಾಯಾಮ, ಚಿತ್ರಕಲೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತರರ ನೋವಿಗೆ ಸದಾ ಸ್ಪಂದಿಸುತ್ತಿದ್ದ ಅವರ ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿ ಸದಾಕಾಲ ಸ್ಮರಣೀಯವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ್ ಅತಿವಾಳೆ ಅವರು, ಚಂದ್ರಕಲಾ ಬಿದರಿ ಅವರು ರಾಜ್ಯದಾದ್ಯಂತ ಅನೇಕ ಸಾಹಿತಿಗಳಿಗೆ ಮಾರ್ಗದರ್ಶನ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ ಅಸಂಖ್ಯಾತ ಪ್ರತಿಭೆಗಳನ್ನು ಬೆಳೆಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು ಎಂದರು.
ಚAದ್ರಕಲಾ ಬಿದರಿ ಅವರು ನನ್ನ ಸಾಹಿತ್ಯದ ಗುರುಗಳಾಗಿದ್ದರು. ನಾನು ಸಾಹಿತ್ಯ ಮತ್ತು ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳಲು ಅವರ ಮಾರ್ಗದರ್ಶನವೇ ಪ್ರಮುಖ ಕಾರಣ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಥಾನಕ್ಕೆ ನನ್ನ ಹೆಸರನ್ನು ಮೊದಲ ಬಾರಿಗೆ ಶಿಫಾರಸು ಮಾಡಿದವರೂ ಅವರೇ. ಅವರ ವಿಶ್ವಾಸ, ಪ್ರೋತ್ಸಾಹ ಮತ್ತು ಆಶೀರ್ವಾದವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.
ಹಿರಿಯ ಸಾಹಿತಿ ಸುನೀತಾ ಬಿರಾದಾರ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಡಾ. ಮುಕ್ಕುಂಬಿ ಎಂ ಮಾತನಾಡಿದರು. ಲಕ್ಷö್ಮಣ ಮೇತ್ರೆ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂತೋಷಕುಮಾರ ಜೋಳದಪಕೆ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ಕಾರ್ಯಕ್ರಮ ನಿರೂಪಿಸಿದರೇ, ಅಜೀತ್ ನೇಳಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶಂಭುಲಿAಗ ವಾಲ್ದೊಡ್ಡಿ, ಸಂತೋಷಕುಮಾರ ಜೋಳದಪಕೆ, ರವೀಂದ್ರ ಲಂಜವಾಡಕರ್, ಓಂಕಾರ ಉಪ್ಪೆ, ಅಜೀತ್ ನೇಳಗಿ, ಗೊಂಡ್ ಬಾಬುರಾವ, ಸೂರ್ಯಕಾಂತ್ ವಿಶ್ವಕರ್ಮ, ಆರ್, ಎಸ್, ಬಿರಾದಾರ, ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಪ್ರಗತಿಪರ ಚಿಂತಕರು, ಮಹಿಳೆಯರು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






Any questions related to ಚಂದ್ರಕಲಾ ಬಿದರಿ ಸಾಹಿತ್ಯ ಸೇವೆ ರಾಜ್ಯಕ್ಕೆ ಮಾದರಿ: ಸಿದ್ರಾಮಪ್ಪಾ ಮಾಸಿಮಾಡೆ?