Home » ಲೈವ್ ನ್ಯೂಸ್ » ಇಂದು ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ವಿಶೇಷ ಲೇಖನ

ಇಂದು ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ವಿಶೇಷ ಲೇಖನ

Facebook
X
WhatsApp
Telegram

“ಸುಖ ಸಂಸಾರಕ್ಕೆ ಒಂದು ಮಗು ಬೇಕು ಎರಡು ಸಾಕು”ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜುಲೈ 11ರಂದು ಆಚರಿಸುತ್ತಾ ಬರಲಾಗುತ್ತಿದೆ. ಇದರ ಉದ್ದೇಶ ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಕುಟುಂಬ ಯೋಜನೆ ಪ್ರಾಮುಖ್ಯತೆ, ಲಿಂಗ ಸಮಾನತೆ, ಬಡತನ, ತಾಯಿ ಆರೋಗ್ಯ ಮತ್ತು ಮಾನವ ಹಕ್ಕುಗಳಂತಹ ವಿವಿಧ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ವ್ಯಕ್ತಿ ಮತ್ತು ಕುಟುಂಬಗಳಿಗೆ ತಮ್ಮ ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ.

ವಿಶ್ವದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಇಂದಿನ ದಿನಮಾನಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ದುಷ್ಪರಿಣಾಮಗಳ ಕುರಿತು ನಾವು ಎಚ್ಚೆತ್ತುಕೊಳ್ಳಬೇಕಿದೆ. “ಚಿಕ್ಕ ಕುಟುಂಬ ಚೊಕ್ಕ ಕುಟುಂಬ” “ಮನೆಗೊಂದು ಮಗು ಊರಿಗೊಂದು ವನ” ಸುಖ ಸಂಸಾರಕ್ಕೆ ಒಂದು ಮಗು ಬೇಕು ಎರಡು ಸಾಕು ಎನ್ನುವ ಉಕ್ತಿಯನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಹಲವಾರು ಸಮಸ್ಯೆಗಳನ್ನು ತಡೆಗಟ್ಟಲು ಕುಟುಂಬ ಯೋಜನೆ ಮತ್ತು ಮಾನವ ಹಕ್ಕುಗಳು ಹಾಗೂ ತಾಯಂದಿರ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಪ್ರಸ್ತುತ ವಿಶ್ವದ ಜನಸಂಖ್ಯೆ ಅಂದಾಜು 8.3 ಬಿಲಿಯನ್‌ನಷ್ಟಿದ್ದು, ಭಾರತದ ಜನಸಂಖ್ಯೆ ಅಂದಾಜು 148 ಕೋಟಿಯಾಗಿದೆ. ಭಾರತವು ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶವಾಗಿದ್ದು, ಜನಸಂಖ್ಯೆ ಹೆಚ್ಚಳದಿಂದ ನಿರುದ್ಯೋಗ, ಬಡತನ, ಆಹಾರ, ವಸತಿ ಸಮಸ್ಯೆಗಳು ಹಾಗೂ ದೇಶದ ಆರ್ಥಿಕತೆಯ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ.

2026ರ ವಿಶ್ವ ಜನಸಂಖ್ಯಾ ದಿನದ ಘೋಷವಾಕ್ಯ “ಇಂದಿನ ಮತ್ತು ಭವಿಷ್ಯದ ಯುವಜನರ ಆಶೆಗಳು ಹಾಗೂ ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದು” ಎಂಬುದಾಗಿದೆ. ಇಂದಿನ ಮತ್ತು ನಾಳಿನ ಯುವಕರ ಆಕಾಂಕ್ಷೆಗಳನ್ನು ಅರಿತುಕೊಳ್ಳುವುದು. ಭಾರತದಂತಹ ಯುವ ದೇಶದಲ್ಲಿ ಯುವ ಶಕ್ತಿಯೇ ದೊಡ್ಡ ಶಕ್ತಿ. ಅವರಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶಗಳು, ಉತ್ತಮ ಆರೋಗ್ಯ ರಕ್ಷಣೆ, ಕೌಶಲ್ಯ ಅಭಿವೃದ್ಧಿ ಮತ್ತು ಸುರಕ್ಷಿತ ವಾತಾವರಣವನ್ನು ಒದಗಿಸುವುದು ದೇಶದ ಪ್ರಗತಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ವಿಶೇಷವಾಗಿ ಯುವಕರು ಮತ್ತು ಮಹಿಳೆಯರ ಸಬಲೀಕರಣವು ಸುಸ್ಥಿರ ಅಭಿವೃದ್ಧಿಗೆ ಪ್ರಮುಖ ಹೆಜ್ಜೆಯಾಗಿದೆ. ಈ ದಿನದಂದು ಪ್ರತಿಯೊಬ್ಬರೂ ಜನಸಂಖ್ಯೆಯ ಬಗ್ಗೆ ಜಾಗೃತರಾಗಿ ಶಿಕ್ಷಣ, ಆರೋಗ್ಯ ರಕ್ಷಣೆ, ಲಿಂಗ ಸಮಾನತೆ ಮತ್ತು ಜವಾಬ್ದಾರಿಯುತ ಪೋಷಕರ ಸಂದೇಶಗಳನ್ನು ಸಮಾಜಕ್ಕೆ ತಿಳಿಸಬೇಕಿದೆ.

ಸರಿಯಾದ ವಯಸ್ಸಿಗೆ ಮದುವೆ, ಮಕ್ಕಳ ಜನನದ ನಡುವಿನ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ಮೇಲಿಂದ ಮೇಲೆ ಗರ್ಭಧರಿಸುವುದು ತಾಯಿ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಂದು ಮಗುವಿನ ನಂತರ ಇನ್ನೊಂದು ಮಗು ಪಡೆಯಬೇಕಾದರೆ ಕನಿಷ್ಠ 2 ರಿಂದ 3 ವರ್ಷಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಮತ್ತು ಮಕ್ಕಳನ್ನು ಪಡೆಯಲು ಬಯಸದೆ ಇದ್ದಲ್ಲಿ ದೀರ್ಘಕಾಲಿನ ಮತ್ತು ಶಾಶ್ವತ ಗರ್ಭನಿರೋಧಕ ವಿಧಾನಗಳನ್ನು ಪಾಲಿಸಬೇಕು.

ಜನಸಂಖ್ಯಾ ನಿಯಂತ್ರಣಕ್ಕಾಗಿ ತಾತ್ಕಾಲಿಕ ಮತ್ತು ದೀರ್ಘಕಾಲಿನ ವಿಧಾನಗಳನ್ನು ಅನುಸರಿಸುವುದು; ತಾತ್ಕಾಲಿಕ ವಿಧಾನಗಳಾದ ಅನಪೇಕ್ಷಿತ ಗರ್ಭಧಾರಣೆ ಮತ್ತು ಲೈಂಗಿಕ ಸೋಂಕುಗಳು ಇವೆರಡನ್ನೂ ತಡೆಯಲು ಕಾಂಡೋಮ್‌ಗಳ (ನಿರೋಧ್) ಉಪಯೋಗ, ಸಂಯೋಜಿತ ಗರ್ಭನಿರೋಧಕ ಮಾತ್ರೆಗಳು (ಮಾಲಾ-ಎನ್) ಹಾರ್ಮೋನ್ ಸಹಿತ ಮಾತ್ರೆಗಳು, ಸೆಂಟ್ ಕ್ರೋಮನ್ (ಛಾಯಾ) ಹಾರ್ಮೋನ್ ರಹಿತ ಮಾತ್ರೆಗಳು ಎದೆ ಹಾಲುಣಿಸುವ ಮತ್ತು ಎದೆ ಹಾಲುಣಿಸದೆ ಇರುವ ಮಹಿಳೆಯರಿಗಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ ಇದಾಗಿದ್ದು, ಯಾವುದೇ ವಯಸ್ಸಿನ ಮಹಿಳೆಯು ಆಕೆಗೆ ಮಕ್ಕಳಿದ್ದರೂ ಅಥವಾ ಇಲ್ಲದಿದ್ದರೂ ಇದನ್ನು ಬಳಸಬಹುದಾಗಿದ್ದು, ಮೊದಲ ಡೋಸ್‌ಗಾಗಿ ಆರೋಗ್ಯ ಸಹಾಯಕಿ ಅಥವಾ ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳಬೇಕು. ತುರ್ತು ಗರ್ಭನಿರೋಧಕ ಮಾತ್ರೆಗಳು (ಇಜಿ ಪಿಲ್ಸ್) ಅಸುರಕ್ಷಿತ ಲೈಂಗಿಕ ಸಂಭೋಗ ಅಥವಾ ಇತರೆ ಗರ್ಭನಿರೋಧಕಗಳ ಬಳಕೆಯ ವೈಫಲ್ಯಗಳಾದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯ 72 ಗಂಟೆಗಳ ಒಳಗೆ ಅಥವಾ ಶೀಘ್ರವೇ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮತ್ತು ಗರ್ಭಪಾತಕ್ಕೆ ಕಾರಣವಾಗುವುದಿಲ್ಲ.

ದೀರ್ಘಕಾಲೀನ ವಿಧಾನಗಳಾದ ಅಂತರ ಚುಚ್ಚುಮದ್ದು, ಮೂರು ತಿಂಗಳಿಗಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ. ಮುಂದಿನ ಚುಚ್ಚುಮದನ್ನು ಸಮಯಕ್ಕೆ ಸರಿಯಾಗಿ ಪಡೆಯಬೇಕು. ತೂಕದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು. ಕೊನೆಯ ಚುಚ್ಚುಮದ್ದು ಪಡೆದ ನಂತರ ಪುನಃ ಗರ್ಭಧರಿಸಲು ಚುಚ್ಚುಮದ್ದು ಪಡೆದ ನಂತರ ಪುನಃ ಗರ್ಭಧರಿಸಲು 7 ರಿಂದ 10 ತಿಂಗಳು ಬೇಕಾಗುತ್ತದೆ. ವಂಕಿ (ಐಯುಸಿಡಿ) ಅಳವಡಿಸಿಕೊಳ್ಳುವುದು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನಗಳಲ್ಲೊಂದಾಗಿದ್ದು, 5 ರಿಂದ 10 ವರ್ಷಗಳ ಕಾಲ ಗರ್ಭಧಾರಣೆಯಿಂದ ಕಾಪಾಡುತ್ತದೆ. ಮತ್ತು ಗರ್ಭಧರಿಸಲು ಬಯಸಿದರೆ ಯಾವುದೇ ಸಮಯದಲ್ಲಿ ತೆಗೆಸಿಕೊಳ್ಳಬಹುದು. ಮಹಿಳಾ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (ಟ್ಯುಬೆಕ್ಟಮಿ) ಮತ್ತು ಪುರುಷ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (ವ್ಯಾಸಕ್ಟಮಿ)ಯು ಮಕ್ಕಳು ಸಾಕೆಂದು ಬಯಸಿದಲ್ಲಿ ಮಹಿಳೆ ಅಥವಾ ದಂಪತಿಗಳಿಗಾಗಿ ಇರುವ ಸುರಕ್ಷಿತ ಮತ್ತು ಶಾಶ್ವತ ವಿಧಾನ. ಇವುಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಣ ವಿಧಾನಗಳನ್ನು ಪಾಲಿಸಬಹುದಾಗಿದೆ.

ಜನಸಂಖ್ಯಾ ಸ್ಪೋಟದಿಂದ ಆಹಾರ, ನೀರು, ವಸತಿ ಹಾಗೂ ಸಸ್ಯ ಸಂಪತ್ತಿನ ಕೊರತೆ ಜೊತೆಗೆ ವಾಯು, ಜಲ ಮತ್ತು ಶಬ್ಧ ಮಾಲಿನ್ಯ, ಸಾಮಾಜಿಕ ಅಸಮಾನತೆ ಹಾಗೂ ನಗರ ಪ್ರದೇಶಗಳಲ್ಲಿ ಕೊಳಚೆ ಪ್ರದೇಶಗಳ ಉಲ್ಭಣದಿಂದಾಗಿ ಸಾಂಕ್ರಾಮಿಕ ರೋಗಗಳ ಹೆಚ್ಚಳ ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗುತ್ತವೆ.

ಜನಸಂಖ್ಯೆಯಿoದಾಗುವ ಈ ದುಷ್ಪರಿಣಾಮಗಳ ಕುರಿತು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜುಲೈ 11ರ ವಿಶ್ವ ಜನಸಂಖ್ಯೆ ದಿನದಂದು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತರುವ ಕುಟುಂಬ ಕಲ್ಯಾಣ ಯೋಜನೆಗಳನ್ನು ನಾವೆಲ್ಲರು ಪಾಲನೆ ಮಾಡುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ಹಾಕೋಣ.

 ಲೇಖನ: ಡಾ. ಸುರೇಶ ಜಿ.
 ಹಿರಿಯ ಸಹಾಯಕ ನಿರ್ದೇಶಕರು,
 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
 ರಾಯಚೂರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology