Home » ಲೈವ್ ನ್ಯೂಸ್ » ಹಿಂದಿ ಭಾಷೆಯಿಂದ ಉದ್ಯೋಗಾವಕಾಶಗಳ ವಿಸ್ತಾರ- ಡಾ. ರಾಮಲಿಂಗ ಬೋಸ್ಲೆ ಪ್ರತಿಪಾದನೆ

ಹಿಂದಿ ಭಾಷೆಯಿಂದ ಉದ್ಯೋಗಾವಕಾಶಗಳ ವಿಸ್ತಾರ- ಡಾ. ರಾಮಲಿಂಗ ಬೋಸ್ಲೆ ಪ್ರತಿಪಾದನೆ

ಕಲಬುರಗಿ, ಸೆಪ್ಟೆಂಬರ್ 29: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಇಂದು ದಿನಾಂಕ 29.09.2026 ರಂದು ಕಾಲೇಜಿನಲ್ಲಿ ‘ಹಿಂದಿ ದಿವಸ’ ಕಾರ್ಯಕ್ರಮವನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಅಂತರ ಮಹಾವಿದ್ಯಾಲಯ ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ‘ಹಿಂದಿ ಭಾಷೆ ಮತ್ತು ಉದ್ಯೋಗಾವಕಾಶ’ ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ರಾಮಲಿಂಗ ಬೋಸ್ಲೆ ಅವರು ವಿಶೇಷ ಉಪನ್ಯಾಸ ನೀಡಿ, ಮಾತನಾಡುತ್ತಾ “ಇಂದಿನ ಜಾಗತೀಕರಣದ ಯುಗದಲ್ಲಿ ಹಿಂದಿ ಭಾಷೆಯು ಕೇವಲ ಸಂವಹನದ ಮಾಧ್ಯಮವಾಗಿರದೆ, ಯುವಜನತೆಗೆ ಉದ್ಯೋಗದ ಬಾಗಿಲುಗಳನ್ನು ತೆರೆಯುವ ಪ್ರಮುಖ ಅಸ್ತ್ರವಾಗಿದೆ” ಎಂದರು. ಅಲ್ಲದೆ, ಅನುವಾದಕರು, ಜರ್ನಲಿಸಂ, ಕೇಂದ್ರ ಸರ್ಕಾರಿ ಇಲಾಖೆಗಳು, ಬ್ಯಾಂಕಿಂಗ್ ಕ್ಷೇತ್ರ, ಕಾರ್ಪೊರೇಟ್ ಕಂಪನಿಗಳು ಹಾಗೂ ಮಾಧ್ಯಮ ರಂಗದಲ್ಲಿ ಹಿಂದಿ ಬಲ್ಲವರಿಗೆ ಅಪಾರ ಉದ್ಯೋಗಾವಕಾಶಗಳಿವೆ ಎಂದು ವಿದ್ಯಾರ್ಥಿನಿಯರಿಗೆ ವಿವರವಾಗಿ ಮಾರ್ಗದರ್ಶನ ನೀಡಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಆರ್. ಬಿ. ಕೊಂಡಾ ಅವರು ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಸೆಯುವಲ್ಲಿ ಹಿಂದಿ ಭಾಷೆಯ ಪಾತ್ರ ಹಿರಿದಾದದ್ದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃಭಾಷೆಯ ಜೊತೆಗೆ ಹಿಂದಿ ಭಾಷೆಯ ಮೇಲಿನ ಪ್ರಭುತ್ವವು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕೆ ಹೆಚ್ಚಿನ ಬಲ ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಹಿಂದಿ ದಿವಸದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಅಂತರ ಮಹಾವಿದ್ಯಾಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಅತಿಥಿಗಳ ಹಸ್ತದಿಂದ ಆಕರ್ಷಕ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.



ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಸ್ವಾಗತ ಕೋರಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಹಿಂದಿ ದಿವಸದ ಆಚರಣೆಯ ಮಹತ್ವ ಹಾಗೂ ಇಂದಿನ ಕಾಲಘಟ್ಟದಲ್ಲಿ ಭಾಷಾ ಕೌಶಲ್ಯದ ಅಗತ್ಯತೆಯನ್ನು ಸಭೆಗೆ ವಿವರಿಸಿದರು.

ಕಾರ್ಯಕ್ರಮವನ್ನು ಕವಿತಾ ಠಾಕೂರ್ ಅವರು ನಿರ್ವಹಿಸಿದರು, ಸುಷ್ಮಾ ಕುಲಕರ್ಣಿ ಅವರು ಅತಿಥಿಗಳಿಗೆ ವಂದಿಸಿದರು ಹಾಗೂ ಕುಮಾರಿ ಶೆರಿಯಲ್ ಅವರು ಪ್ರಾರ್ಥನಾ ಗೀತೆ ಹಾಡಿದರು.

ಈ ಸಮಾರಂಭದಲ್ಲಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಮಹೇಶ್ ಗಂವ್ಹಾರ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ ಸುಭಾಶ್ಚಂದ್ರ ದೊಡ್ಡಮನಿ, ಡಾ ಮೊಹ್ಸಿನಾ ಫಾತಿಮಾ, ಡಾ ಶ್ರೀದೇವಿ ಸರಡಗಿ, ಗೀತಾ ಪಾಟೀಲ್, ಡಾ ನಾಗರತ್ನ, ರತ್ನಾ ಪ್ಯಾಟಿ, ಡಾ ಕನ್ಯಾಕುಮಾರಿ, ಸಂಗಮೇಶ ತುಪ್ಪದ, ಶ್ವೇತಾ ಕೋಟೆ, ಶಿವಲೀಲಾ ಧೋತ್ರೆ, ಬಸಮ್ಮ ಗೊಬ್ಬುರ ಹಾಗೂ ವಿಭಾಗದ ವಿದ್ಯಾರ್ಥಿನಿಯರು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Author

ಪ್ರಮುಖ ಸುದ್ದಿ

Stock market

Astrology