Home » ಲೈವ್ ನ್ಯೂಸ್ » ಸೆ.19ರಂದು ಔರಾದನಲ್ಲಿ ಬೃಹತ್ ಪ್ರತಿಭಟನೆ!

ಸೆ.19ರಂದು ಔರಾದನಲ್ಲಿ ಬೃಹತ್ ಪ್ರತಿಭಟನೆ!

ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಮತ್ತುರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಸೆಪ್ಟೆಂಬರ್ 19ರಂದು ಔರಾದ ಪಟ್ಟಣದಲ್ಲಿ ಬಿಜೆಪಿ ಔರಾದ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯ ರೂಪುರೇಷೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ವಿವಿಧ ಸಲಹೆಗಳನ್ನು ನೀಡಿದರು.

ಸೆಪ್ಟೆಂಬರ್ 19ರಂದು ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಔರಾದ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರತಿಭಟನೆಗೆ ಚಾಲನೆ ನೀಡುವರು. ನಂತರ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಸಂಖ್ಯಾತ ರೈತರೊಂದಿಗೆ ಪ್ರತಿಭಟನಾ ಮೆರವಣಿಗೆಯ ಮೂಲಕ ಎಪಿಎಂಸಿ ವೃತ್ತದವರೆಗೆ ತೆರಳಿ ಪ್ರತಿಭಟನೆ ನಡೆಸಲಾಗುವುದು.

ಸಭೆಯಲ್ಲಿ ಮಾತನಾಡಿದ ಶಾಸಕರು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಅನೇಕ‌ ಸಲ‌ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಸರ್ಕಾರ ಈ ಎರಡೂ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸದೆ ನಿರ್ಲಕ್ಷಿಸುವುದು ಘೊರ ಅನ್ಯಾಯವೆಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ‌ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರ ಪಹಣಿ ತಿದ್ದುಪಡಿ, ಮ್ಯುಟೇಷನ್ ಸೇರಿದಂತೆ ಅನೇಕ ಸೇವೆಗಳ ದರವನ್ನು ಹೆಚ್ಚಿಸಿ ರೈತರು ಹಾಗೂ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಹೊರೆ ಹಾಕಿದೆ. ಸಾವಿರಾರು ಜನರ ರೇಷನ್ ಕಾರ್ಡ್‌ಗಳನ್ನು ಕಡಿತಗೊಳಿಸಿ ಬಡ ಕುಟುಂಬಗಳಿಗೆ ತೊಂದರೆ ನೀಡುತ್ತಿದೆ. ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಸ್ಥಗಿತಗೊಳಿಸಿ ವಯೋವೃದ್ಧರ ಹೊಟ್ಟೆ ಮೇಲೆ ಕಲ್ಲು ಹಾಕಿದೆ. ಒಂದೆರಡಲ್ಲ, ರೈತರು ಮತ್ತು ಸಾರ್ವಜನಿಕರಿಗೆ ಎಲ್ಲ ವಿಧದಲ್ಲೂ ತೊಂದರೆ ನೀಡುತ್ತಿರುವ ರಾಜ್ಯ ಸರ್ಕಾರದ ಕಿವಿ ಹಿಂಡುವ ಸಮಯ ಬಂದಿದೆ‌ ಎಂದರು.

560 ಕೋಟಿ ವೆಚ್ಚದ ಕೆರೆ ತುಂಬಿಸುವ ಯೋಜನೆ ಹಾಗೂ ಕಾರಂಜಾ ಜಲಾಶಯದಿಂದ ನೀರು ಸರಬರಾಜು ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡುವ ಬದಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬೇಸರ ಹೊರ ಹಾಕಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಸೆ.19ರ ಪ್ರತಿಭಟನೆಯನ್ನು ಬೃಹತ್ ಹೋರಾಟವನ್ನಾಗಿ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಔರಾದ ಹಾಗೂ ಕಮಲನಗರ ತಾಲ್ಲೂಕಿನ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು,ಸರ್ಕಾರದ ನಿಲುವುಗಳಿಂದ ನೊಂದವರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಿರಣ ಪಾಟೀಲ, ರಾಮಶೆಟ್ಟಿ ಪನ್ನಾಳೆ, ರಂಗರಾವ ಜಾಧವ, ಶಿವರಾಜ ಅಲ್ಮಾಜೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವಾಜಿರಾವ ಕಾಳೆ, ಸತೀಷ ಪಾಟೀಲ, ಧೊಂಡಿಬಾ ನರೋಟೆ, ಬಾಬುರಾವ ತೋರ್ಣಾವಾಡಿ, ಪ್ರವೀಣ ಕಾರಬಾರಿ, ಖಂಡೋಬಾ ಕಂಗಟೆ, ಬಂಟಿ ರಾಂಪೂರೆ, ರಾಜಕುಮಾರ ಸೋರಾಳೆ, ಉದಯ ಸೋಲಾಪೂರೆ, ಸಂಜು ಮುರ್ಕೆ, ಸಚಿನ ಬಿರಾದಾರ, ರವೀಂದ್ರರೆಡ್ಡಿ, ಪ್ರಕಾಶ ಮೇತ್ರೆ, ವಿಜಯಕುಮಾರ ದೇಶಮುಖ, ಗುಂಡಪ್ಪ ಬಿರಾದಾರ, ರಮೇಶ ಪಾಟೀಲ, ದೇವಾನಂದ ಪಾಟೀಲ, ಪ್ರಭುರಾವ ಜೀರ್ಗೆ, ಪ್ರದೀಪ ಪವಾರ, ಕೇರಬಾ ಪವಾರ, ಪ್ರಕಾಶ ಅಲ್ಮಾಜೆ, ಬಸವರಾಜ ಹಳ್ಳೆ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology