ಬೆಂಗಳೂರುಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ನಾಲ್ಕು ತಿಂಗಳಿನಿಂದ ವೇತನ ಪಡೆಯದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಶಿಕ್ಷಕರ ದಿನಾಚರಣೆಯನ್ನು ಒಲ್ಲದ ಮನಸ್ಸಿನಿಂದಲೇ ಆಚರಣೆಯಲ್ಲಿ ಪಾಲ್ಗೊಳ್ಳಬೇಕಾದ ಸ್ಥಿತಿ ನಿಮಾರ್ಣವಾಗಿದೆ.ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವ ಇದ್ದಾಗಿನಿಂದಲೂ ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳು ವೇತನ ಪಾವತಿ 4 ತಿಂಗಳು ವಿಳಂಬ ಆಗುತ್ತಿದೆ.
ಇದು ಜಿಬಿಎ ಆಡಳಿತದಲ್ಲೂ ಮುಂದುವರಿದಿದೆ. ಕಡಿಮೆ ವೇತನಕ್ಕೆ ದುಡಿಯುತ್ತಿರುವ ಶಿಕ್ಷಕ ವೃಂದವು ಪಾಲಿಕೆಯ ಶಾಲಾ&-ಕಾಲೇಜುಗಳಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದ್ದರೂ, ವೇತನ ಸೇರಿ ಇತರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಅತಿಥಿ ಶಿಕ್ಷಕರು ಹಲವು ಬಾರಿ ಜಿಬಿಎ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೆ ಇವರ ಬೇಡಿಕೆಗಳು ಕಡತದಲ್ಲೇ ಉಳಿದಿವೆ.ಶೇ.90 ಅತಿಥಿ ಶಿಕ್ಷಕರು:ಐದೂ ಪಾಲಿಕೆಗಳಲ್ಲಿ ಪ್ರಾಥಮಿಕ ಹಂದಿಂದ ಪದವಿವರೆಗೆ ಒಟ್ಟು 169 ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇಷ್ಟೂ ಸ್ಟೂಡೆಂಟ್ಸ್ಗೆ 830 ಶಿಕ್ಷಕರು ಪಾಠ-ಪ್ರವಚನದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇವರಲ್ಲಿ ಶೇ.90 ಮಂದಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.ಕಡಿಮೆ ವೇತನಕ್ಕೆ ದಿನಪೂರ್ತಿ ಕರ್ತವ್ಯ ನಿಭಾಯಿಸುತ್ತಿರುವ ಅತಿಥಿ ಶಿಕ್ಷಕರಿಗೆ ಬೇರೆ ಯಾವುದೇ ಸೌಲಭ್ಯ ಇಲ್ಲ. ಆರೋಗ್ಯ ವಿಮೆ, ಪಿಂಚಣಿಯೂ ಇಲ್ಲ. ಎರಡು ವರ್ಷಗಳ ಹಿಂದೆ ಪ್ರತಿಭಟನೆ ನಡೆಸಿದ್ದ ವೇಳೆ ವೇತನ ಹೆಚ್ಚಳದ ಭರವಸೆಯನ್ನು ಆಗ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ನೀಡಿದ್ದರು. ಈಗ ಅವರು ಸಿಎಂ ಆಗಿದ್ದರೂ ಪಾಲಿಕೆಯ ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳ ಬದಲು 3-4 ತಿಂಗಳಾದರೂ ಬಟವಾಡೆ ಆಗುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಕಡತ ವಿಲೇಗೆ ಅಧಿಕಾರಿಗಳ ಹಿಂದೇಟು
ಪಾಲಿಕೆಯ ಶಾಲಾ&-ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಶಿಕ್ಷಕರಿಗೆ ಮಾತ್ರ ನಿಯಮಿತವಾಗಿ ವೇತನ ಪಾವತಿಯಾಗುತ್ತಿದೆ.
ಅತಿಥಿ ಶಿಕ್ಷಕರಿಗೆ ಗೌರವಧನ ನೀಡಲು ಪಾಲಿಕೆಗಳ ಬಜೆಟ್ನಲ್ಲಿ ಅನುದಾನ ನಿಗದಿಯಾಗಿಲ್ಲ. ಹಾಗಾಗಿ ಹಣ ಲಭ್ಯವಾದಾಗ ಬಟವಾಡೆ ಮಾಡುವ ಪರಿಪಾಠ ಇದೆ. ಗೌರವಧನ ಬಿಡುಗಡೆ ಸಂಬಂಧ ಪಾಲಿಕೆ ಮಟ್ಟದಲ್ಲಿ ಕಡತ ಸಿದ್ಧಗೊಂಡರೂ, ಲೆಕ್ಕಪತ್ರ ವಿಭಾಗದಲ್ಲಿ ವಿಲೇವಾರಿಗೆ ನಾನಾ ನೆಪ ಹೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇತ್ತಿಚಿಗೆ ಜಿಬಿಎ ಸಚಿವರು ಪಾಲಿಕೆ ಶಾಲಾ ಮಕ್ಕಳಿಗೆ ಸಮವಸ್ತ್ರದ ಜತೆಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಇದರ ಜತೆಗೆ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆಯತ್ತಲೂ ಗಮನಹರಿಸಲಿ ಎಂದು ಶಿಕ್ಷಕ ವೃಂದ ಮನವಿ ಮಾಡಿದೆ.





Any questions related to ಅತಿಥಿ’ಹೆಸರಲ್ಲಿ 100% ಕೆಲಸ, ಕಡಿಮೆ ವೇತನಕ್ಕೆ ದುಡಿಯುತ್ತಿರುವ ಶಿಕ್ಷಕರು!?