ಕಲಬುರಗಿ.31.ಆಗಸ್ಟ್.26: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ದಿನಾಂಕ ೨೯.೦೮.೨೦೨೬ ರಂದು ೨೦೨೬-೨೭ನೇ ಸಾಲಿಗಾಗಿ ಪ್ರವೇಶ ಪಡೆದ ಬಿ.ಎ, ಬಿಎಸ್ಸಿ ಮತ್ತು ಬಿ.ಕಾಮ್ ವಿದ್ಯಾರ್ಥಿಗಳಿಗೋಸ್ಕರ “ಯುವಸಿರಿ-೨೦೨೬” ಎಂಬ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಆವರಣದಲ್ಲಿ÷ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಛೇರಿ ಕಲಬುರಗಿಯ ಜಂಟಿ ನಿರ್ದೇಶಕರಾದ ಡಾ. ಪಂಡಿತ ಬೇಳಮಗಿ ಅವರು ಜ್ಯೋತಿ ಬೇಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತ ಇಂದಿನ ವೇಗವಾಗಿ ಬದಲಾಗುತ್ತಿರುವ ಸಂಶೋಧನೆ ಮತ್ತು ತಂತ್ರಜ್ಞಾನವು ಶಿಕ್ಷಣ ಮತ್ತು ದೈನಂದಿನ ಜೀವನದ ಪ್ರಮುಖ ಭಾಗವಾಗಿ ಪರಿಣಮಿಸಿದೆ. ಡಿಜಿಟಲ್ ತರಗತಿಗಳು, ಕೃತಕ ಬುದ್ಧಿಮತ್ತೆ, ಆನ್‌ಲೈನ್ ಲರ್ನಿಂಗ್ ಪ್ಲಾಟ್‌ಫಾರ್ಮ್ಗಳು ಮತ್ತು ಇತರ ತಂತ್ರಜ್ಞಾನದ ಸಾಧನಗಳು ಅಭ್ಯಾಸವನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಿವೆ. ಆದರೆ, ತಂತ್ರಜ್ಞಾನ ಯಾವತ್ತೂ ಶಿಕ್ಷಕರ ಪಾತ್ರವನ್ನು ಸಂಪೂರ್ಣವಾಗಿ ಬದಲಿ ಮಾಡಬಲ್ಲದು ಎಂದು ಮಾತಾಡಲಾಗದು.
ಶಿಕ್ಷಕರು ಕೇವಲ ಮಾಹಿತಿ ನೀಡುವುದಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಕೆಲಸವನ್ನು ಮಾಡುವವರು. ಶಿಕ್ಷಕರು ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸುತ್ತಾರೆ, ಅವರ ವೈಯಕ್ತಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ, ಕಷ್ಟಪಡುವ ಸಮಯದಲ್ಲಿ ಪ್ರೇರೇಪಿಸುತ್ತಾರೆ ಮತ್ತು ಶಿಸ್ತು, ಮೌಲ್ಯಗಳು, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡುತ್ತಾರೆ. ಆದರೆ ಇತ್ತಿಚಿನ ದಿನಗಳಲ್ಲಿ ಯುವಜನತೆ ತಂತ್ರಜ್ಞಾನಕ್ಕೆ ಒತ್ತುನೀಡುತ್ತಿದೆ. ತಂತ್ರಜ್ಞಾನ ಮಾಹಿತಿ ಒದಗಿಸಬಹುದು, ಆದರೆ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಇರುವ ಮಾನವ ಸಂಬAಧವು ವಿಶಿಷ್ಟ ಮತ್ತು ಅತ್ಯಾವಶ್ಯಕವಾಗಿದೆ.
ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಮತ್ತು ಜೀವನದ ಮೌಲ್ಯಗಳ ಮಹತ್ತ್ವವನ್ನು ತಿಳಿದುಕೊಳ್ಳಬೇಕು. ಚೆನ್ನಾಗಿ ವಿಷಯ ಅಧ್ಯಯನ ಮಾಡಿ ಆಳವಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸಬೇಕು. ತಮ್ಮ ನಿರಂತರ ಪ್ರಯತ್ನ ನಿಮ್ಮ ಸಾಧನೆಗಳಿಗೆ ಮಾತ್ರವಲ್ಲದೆ ತಮ್ಮ ಕಾಲೇಜು, ಗುರುಗಳು, ಪಾಲಕರು ಮತ್ತು ಸಮಾಜಕ್ಕೂ ಹೆಮ್ಮೆ ತರುತ್ತವೆ. ಶ್ರಮ, ಶಿಸ್ತು, ಗುರುಗಳಿಗೆ ಗೌರವ ಮತ್ತು ಕಲಿಯುವ ಆಸಕ್ತಿ ಯಶಸ್ವಿ ವಿದ್ಯಾರ್ಥಿಯ ಆಧಾರವಾಗಿವೆ
ಎಂದು ಮಾತನಾಡುತ್ತಾ “ಇಂದಿನ ಯಾವುದೇ ಸೂಪರ್ ಕಂಪ್ಯೂಟರ್ ಶಿಕ್ಷಕರ ಪರ್ಯಾಯ ಅಲ”್ಲ ಎಂದು ನುಡಿದರು.
ನಂತರ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಮಹಾವಿದ್ಯಾಲಯದ ನಿವೃತ್ತ ಉಪಪ್ರಾಚಾರ್ಯರಾದ ಪ್ರೊ. ವೀಣಾ ಹೊನುಗುಂಟಿಕರ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ಜೀವನಕ್ಕೆ ಬೇಕಾಗುವ ಮೌಲ್ಯಗಳನ್ನು ಇಲ್ಲಿ ಪಡೆದುಕೊಂಡಿದ್ದಾರೆ. ನೀವುಗಳೂ ಕೂಡಾ ಇಲ್ಲಿ ಏನು ಬೇಕಾದರು ಸಾಧಿಸಬಹುದು ಆದರೆ ನೀವು ನಿಮ್ಮ ಮೇಲೆ ಆತ್ಮವಿಶ್ವಾಸವನ್ನು ಇಟ್ಟು ಪರಿಶ್ರಮಪಡಿ ಎಂಬ ಕಿವಿಮಾತನ್ನು ಹೇಳಿ ವಚನಗಾಯನದ ಮುಖಾಂತರ ವಿದ್ಯಾರ್ಥಿನಿಯರಿಗೆ ಪ್ರೇರೆಪಿಸಿದರು.

ನಂತರ ೨೦೨೬–೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಆಯೋಜಿಸಿರುವ “ಯುವಸಿರಿ–೨೦೨೬” ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಯುವಜನತೆ ದೇಶದ ಶಕ್ತಿ, ಭವಿಷ್ಯದ ಆಶಾಕಿರಣ ಹಾಗೂ ರಾಷ್ಟ್ರ ನಿರ್ಮಾಣದ ಪ್ರಮುಖ ಶಕ್ತಿಯಾಗಿದ್ದಾರೆ. ಅವರಲ್ಲಿರುವ ಪ್ರತಿಭೆ, ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಮುಖ್ಯಅತಿಥಿಗಳು ಹೇಳಿರುವಂತೆ ಯುವಸಿರಿ–೨೦೨೬ ಕೇವಲ ಒಂದು ಕಾರ್ಯಕ್ರಮವಲ್ಲ; ಇದು ನಮ್ಮ ವಿದ್ಯಾರ್ಥಿಗಳ ಪ್ರತಿಭೆ, ಸಾಮರ್ಥ್ಯ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸುವ ಒಂದು ಸುಂದರ ವೇದಿಕೆಯಾಗಿದೆ. ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ, ಸಂವಹನ ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯಲ್ಲಿಯೂ ವಿದ್ಯಾರ್ಥಿಗಳು ತಮ್ಮನ್ನು ತಾವು ಬೆಳೆಸಿಕೊಳ್ಳಬೇಕು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟವಾದ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದಾಗ ಮಾತ್ರ ಅವರ ಕನಸುಗಳು ನನಸಾಗಲು ಸಾಧ್ಯ. “ಕನಸು ಕಾಣಿರಿ, ಗುರಿ ನಿಗದಿಪಡಿಸಿಕೊಳ್ಳಿರಿ, ನಿರಂತರ ಪರಿಶ್ರಮದಿಂದ ಅದನ್ನು ಸಾಧಿಸಿರಿ” ಎಂಬ ಸಂದೇಶವನ್ನು ನಮ್ಮ ಯುವಜನತೆ ಸದಾ ಮನದಲ್ಲಿಟ್ಟುಕೊಳ್ಳಬೇಕು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳು, ಶಿಸ್ತು, ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಾಳಜಿಯೂ ಅತ್ಯಂತ ಅಗತ್ಯ. ನಮ್ಮ ವಿದ್ಯಾರ್ಥಿಗಳು ಉತ್ತಮ ವೃತ್ತಿಪರರಾಗಿ ಮಾತ್ರವಲ್ಲದೆ, ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯ ಎಂದು ನುಡಿದರು.
ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶ್ರೀಮತಿ. ರೇಖಾ ಪಾಟೀಲ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು. ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಅವರು ಕಾರ್ಯಕ್ರಮದ ವೇದಿಕೆಯ ಮೇಲಿರುವ ಗಣ್ಯಮಾನ್ಯರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಛೇರಿ ಕಲಬುರಗಿಯ ಸಹಾಯಕ ನಿರ್ದೇಶಕರಾದ ರಾಜೇಂದ್ರ ಶಿಂಧೆ, ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿಗಳಾದ ಕುಮಾರಿ. ಪ್ರೀಯಾ ಮತ್ತು ಕುಮಾರಿ. ಶ್ವೇತಾ ಅವರು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು. ಸೂಕ್ಷö್ಮಜೀವಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶಿಲ್ಪಾ ಬಂದ್ರಾಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲರನ್ನು ವಂದಿಸಿದರು. ನಂತರ ವಿದ್ಯಾರ್ಥಿಗಳು ತಮ್ಮಲ್ಲಿರುವ ಸೂಪ್ತ ಪ್ರತಿಭೆಗಳನ್ನು ಸಂಗೀತ, ನೃತ್ಯ ಮತ್ತು ನಾಟಕಗಳ ಮುಖಾಂತರ ಪ್ರದರ್ಶಿಸಿದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.





Any questions related to ಸೂಪರ್ ಕಂಪ್ಯೂಟರ್ ಶಿಕ್ಷಕರ ಪರ್ಯಾಯ ಅಲ”್ಲ — ಡಾ. ಪಂಡಿತ ಬೆಳಮಗಿ.?