Home » ಲೈವ್ ನ್ಯೂಸ್ » ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿಯ ಜೀವಂತ ದರ್ಶನ: ಡಾ. ಅನುರಾಧಾ ಕುಲಕರ್ಣಿ

ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿಯ ಜೀವಂತ ದರ್ಶನ: ಡಾ. ಅನುರಾಧಾ ಕುಲಕರ್ಣಿ

Facebook
X
WhatsApp
Telegram

ಕಲಬುರಗಿ, ಆಗಸ್ಟ್ 19: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿಯ ಹಿಂದಿ ವಿಭಾಗ ಹಾಗೂ ಅಖಿಲ ಭಾರತೀಯ ಹಿಂದಿ ಮಹಾಸಭಾ, ನವದೆಹಲಿ ಇವರ ಸಹಯೋಗದಲ್ಲಿ ಸಂತ ಗೋಸ್ವಾಮಿ ತುಳಸೀದಾಸರ 529ನೇ ಜಯಂತಿಯನ್ನು ಇಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ನಿಕಟಪೂರ್ವ ಉಪನ್ಯಾಸಕಿ ಡಾ. ಅನುರಾಧಾ ಕುಲಕರ್ಣಿ ಮಾತನಾಡಿ, “ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿಯ ಜೀವಂತ ದರ್ಶನವಿದೆ” ಎಂದು ಹೇಳಿದರು.

ಸಂತ ಗೋಸ್ವಾಮಿ ತುಳಸೀದಾಸರು ತಮ್ಮ ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ, ಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನೈತಿಕ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಸಂತ-ಕವಿಯಾಗಿದ್ದಾರೆ. ಅವರ ರಾಮಚರಿತಮಾನಸ ಕೃತಿಯು ಕೇವಲ ಧಾರ್ಮಿಕ ಗ್ರಂಥವಾಗಿರದೆ, ಭಾರತೀಯ ಜೀವನಮೌಲ್ಯಗಳು ಮತ್ತು ಸಾಮಾಜಿಕ ಆದರ್ಶಗಳ ಪ್ರತಿಬಿಂಬವಾಗಿದೆ ಎಂದು ಡಾ. ಅನುರಾಧಾ ಕುಲಕರ್ಣಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಆರ್. ಬಿ. ಕೊಂಡಾ ಅವರು ವಹಿಸಿದ್ದರು. ಅವರು ಮಾತನಾಡಿ, ಸಂತ ತುಳಸೀದಾಸರ ಸಾಹಿತ್ಯವು ಭಾರತೀಯ ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದ್ದು, ಅವರ ಚಿಂತನೆಗಳು ಇಂದಿನ ಪೀಳಿಗೆಗೂ ಪ್ರೇರಣಾದಾಯಕವಾಗಿವೆ ಎಂದು ಹೇಳಿದರು.

ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅವರು ತುಳಸೀದಾಸರ ಜೀವನ, ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಕೊಡುಗೆಯನ್ನು ಪರಿಚಯಿಸಿ, ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ತುಳಸೀದಾಸರ ಸ್ಥಾನ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಹಿಂದಿ ವಿಭಾಗದ ಉಪನ್ಯಾಸಕಿ ಕವಿತಾ ಠಾಕೂರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಸುಷ್ಮಾ ಕುಲಕರ್ಣಿ ಅವರು ಅತಿಥಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಹಿಂದಿ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology