ಕೊಪ್ಪಳ.26ಜೂನ್.26: ಕೇಂದ್ರ ಸರ್ಕಾರವು ಈಗಾಗಲೇ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ ‘ಕೆನ್-ಬೆತ್ವಾ’ ಯೋಜನೆ ಹಾಗೂ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವಿನ ‘ಪಾರ್ವತಿ-ಕಾಳಿಸಿಂಧು-ಚAಬಲ್’ ನದಿ ಜೋಡಣೆ ಯೋಜನೆಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದೆ. ಇದೇ ಮಾದರಿಯಲ್ಲಿ, ದಕ್ಷಿಣ ಭಾರತದ ಪ್ರಮುಖ ನದಿಗಳಾದ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಯೋಜನೆ’ ಯಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಗುರುವಾರದಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾದ 33 ಸ್ಪಿಲ್ವೇ ಗೇಟುಗಳ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನದಿಗಳ ಜೋಡಣೆ ಅತ್ಯಂತ ತುರ್ತಾಗಿ ಆಗಬೇಕಿದೆ. ನದಿ ಜೋಡಣೆ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯವಾಗಬಾರದು ಎಂದು ಸ್ಪಷ್ಟಪಡಿಸಿದ ನಾಯ್ಡು ಅವರು, ಈ ಯೋಜನೆಯನ್ನು ಜಾರಿಗೊಳಿಸುವಾಗ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು ಎಂದು ಒತ್ತಿ ಹೇಳಿದರು. ಈ ಮೂರೂ ರಾಜ್ಯಗಳ ಹಕ್ಕುಗಳಿಗೆ ಧಕ್ಕೆ ಬಾರದಂತೆ ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸುವುದರ ಜೊತೆಗೆ, ಅಗತ್ಯ ಬಿದ್ದರೆ ತಮಿಳುನಾಡಿಗೂ ನೀರನ್ನು ಕೊಂಡೊಯ್ಯುವ ವ್ಯವಸ್ಥೆ ಮಾಡಬೇಕು ಎಂದರು.
ಈ ಹಿಂದೆ 1983 ರಲ್ಲಿ ಎನ್.ಟಿ. ರಾಮರಾವ್ ಅವರ ನಾಯಕತ್ವದಲ್ಲಿ ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟç ರಾಜ್ಯಗಳು ಒಟ್ಟಾಗಿ ಸೇರಿ ಚೆನೈನ ಕುಡಿಯುವ ನೀರಿಗಾಗಿ 15 ಟಿಎಂಸಿ ನೀರನ್ನು ಒದಗಿಸಿದ್ದ ಐತಿಹಾಸಿಕ ಒಕ್ಕೂಟ ವ್ಯವಸ್ಥೆಯ ಉದಾಹರಣೆಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
“ಪ್ರಸ್ತುತ ದೇಶದಲ್ಲಿ ಒಂದು ಕಡೆ ಭೀಕರ ಪ್ರವಾಹ ಬಂದರೆ, ಮತ್ತೊಂದು ಕಡೆ ತೀವ್ರ ಬರಗಾಲವಿರುತ್ತದೆ. ಈ ವರ್ಷ ‘ಎಲ್ ನಿನೋ’ ಪ್ರಭಾವದಿಂದಾಗಿ ತುಂಗಭದ್ರಾ ಹಾಗೂ ಆಲಮಟ್ಟಿ ಜಲಾಶಯಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಒಳಹರಿವು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ನದಿಗಳನ್ನು ಜೋಡಿಸುವುದೊಂದೇ ಇರುವ ಏಕೈಕ ಮಾರ್ಗವಾಗಿದೆ. ಹೆಚ್ಚುವರಿ ನೀರಿರುವ ನದಿಗಳಿಂದ ಕೊರತೆಯಿರುವ ನದಿಗಳಿಗೆ ನೀರನ್ನು ಹರಿಸುವ ಮೂಲಕ ಬರಗಾಲವನ್ನು ಸಮರ್ಥವಾಗಿ ಎದುರಿಸಬಹುದು. ಇದರಿಂದ ರಾಜ್ಯಗಳ ನಡುವಿನ, ಜಿಲ್ಲೆಗಳ ನಡುವಿನ ಹಾಗೂ ರೈತರ ನಡುವಿನ ನೀರಿನ ಸಂಘರ್ಷಗಳನ್ನು ಸಂಪೂರ್ಣವಾಗಿ ತಡೆಯಬಹುದು” ಎಂದು ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಆಂಧ್ರಪ್ರದೇಶ ಮುಖ್ಯಮಂತ್ರಿಗಳಾದ ಎನ್.ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಎ.ರೇವಂತರೆಡ್ಡಿ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ, ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆ ಮಾನ್ಯ ಸಚಿವರಾದ ಡಾ. ನಿಮ್ಮಲ ರಾಮನಾಯ್ಡು, ಆಂಧ್ರಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಸಚಿವರಾದ ಪಯ್ಯವುಲ ಕೇಶವ್, ತೆಲಂಗಾಣದ ನೀರಾವರಿ ಇಲಾಖೆ ಹಾಗೂ ಸಿಎಡಿ ಸಚಿವರಾದ ಎನ್.ಉತ್ತಮ್ ಕುಮಾರ ರೆಡ್ಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಸಂಸದರಾದ ಕೆ. ರಾಜಶೇಖರ ಹಿಟ್ನಾಳ್, ಬಳ್ಳಾರಿ ಸಂಸದರಾದ ಈ. ತುಕಾರಾಮ್, ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಧಾನಸಭೆ ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಶಿವರಾಜ ಎಸ್. ತಂಗಡಗಿ, ಮುನಿರಾಬಾದ್ ತುಂಗಾಭದ್ರಾ ಯೋಜನೆ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಸನ್ಸಾಬ್ ನಬಿಸಾಬ್ ದೋಟಿಹಾಳ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಹೆಚ್.ಆರ್. ಗವಿಯಪ್ಪ, ಎಂ.ಪಿ. ಲತಾ ಮಲ್ಲಿಕಾರ್ಜುನ, ವಿಧಾನಪರಿಷತ್ ಶಾಸಕರುಗಳಾದ ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ, ಬಸನಗೌಡ ಬಾದರ್ಲಿ ಹಾಗೂ ಎನ್.ಎಸ್. ಬೋಸರಾಜು, ಗದಗ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಧಾನಸಭೆ ಶಾಸಕರುಗಳಾದ ಹೆಚ್.ಕೆ. ಪಾಟೀಲ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.




Any questions related to ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು?