Home » ಲೈವ್ ನ್ಯೂಸ್ » ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್

ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್

Facebook
X
WhatsApp
Telegram

ಬೆಂಗಳೂರು.01.ಜೂನ.26: ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಷದ ಹೈಕಮಾಂಡ್‌ ಅಧಿಕಾರ ಹಂಚಿಕೆ ಕಸರತ್ತನ್ನು ಸುಸೂತ್ರವಾಗಿ ಮಾಡಿ ಮುಗಿಸಿತು. ಈಗ ಅದರ ಬೆನ್ನಲ್ಲೇ ಹೊಸ ಸಂಪುಟ ರಚನೆ ಹೊಣೆ ಕೂಡ ವರಿಷ್ಠರ ಮೇಲಿದೆ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯ ಕಾಂಗ್ರೆಸ್‌ನ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗುತ್ತಿದೆ.

ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಬೆನ್ನಲ್ಲೇ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ಹಾರಲಿದ್ದು, ಇದನ್ನು ಖುದ್ದು ಡಿ.ಕೆ.ಶಿವಕುಮಾರ್‌ ಅವರೇ ಖಚಿತಪಡಿಸಿದ್ದಾರೆ.

ಅಲ್ಲಿ ವರಿಷ್ಠರೊಂದಿಗೆ ಸಂಪುಟ ರಚನೆ ಸರ್ಕಸ್‌ ಶುರುವಾಗಲಿದೆ. ನಾಯಕರ ಹಿಂದೆಯೇ ಕೆಲ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಸಂಪುಟದಿಂದ ತಮ್ಮನ್ನು ಕೈಬಿಡುವ ಸುಳಿವು ಪಡೆದಿರುವವರು ದೆಹಲಿಗೆ ದೌಡಾಯಿಸುತ್ತಿದ್ದಾರೆ. ಇದರಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಸೋಮವಾರ ಬೆಳಗ್ಗೆ 10 ಗಂಟೆಗೆ ಎಚ್‌ಎಎಲ್‌ನಿಂದ ವಿಶೇಷ ವಿಮಾನದ ಮೂಲಕ ಒಟ್ಟಿಗೆ ಹೊರಟು ಮಧ್ಯಾಹ್ನ 12 ಗಂಟೆ ಹೊತ್ತಿಗೆ ದೆಹಲಿ ತಲುಪಲಿದ್ದಾರೆ.

ಹೈಕಮಾಂಡ್‌ ಕೈಯಲ್ಲಿ ಇನ್‌ ಆಯಂಡ್‌ ಔಟ್‌ ಪಟ್ಟಿ:
ಈಗಾಗಲೇ ಇಬ್ಬರೂ ನಾಯಕರು ತಮ್ಮದೇ ಆದ ಪ್ರತ್ಯೇಕ ಪಟ್ಟಿಗಳನ್ನು ಹೈಕಮಾಂಡ್‌ ಕೈಯಲ್ಲಿಟ್ಟು ಬಂದಿದ್ದಾರೆ. ಅದರಲ್ಲಿ ಕೆಲವರಿಗೆ ಕೊಕ್‌ ಕೊಟ್ಟು, ಮತ್ತೆ ಹಲವರಿಗೆ ಅವಕಾಶ ಕಲ್ಪಿಸಲಾಗಿದೆ. ಮೂಲಗಳ ಪ್ರಕಾರ 20ಕ್ಕೂ ಹೆಚ್ಚು ಸಚಿವ ಸ್ಥಾನಗಳು ತೆರವಾಗಲಿವೆ. ಆ ಜಾಗಕ್ಕೆ ಯಾರನ್ನು ಸೇರಿಸಬೇಕು ಎನ್ನುವುದು ಈಗಿರುವ ಸವಾಲು. ಈ ಚೌಕಾಸಿಗಾಗಿಯೇ ಸೋಮವಾರ ಇಬ್ಬರೂ ನಾಯಕರೊಂದಿಗೆ ಹೈಕಮಾಂಡ್‌ ಸರಣಿ ಸಭೆಗಳನ್ನು ನಡೆಸಲಿದೆ.

ಅನುಭವಿಗಳು, ಹೊಸಬರು, ಸಮುದಾಯಗಳು, ಬಣಗಳ ಲೆಕ್ಕಾಚಾರದ ಜತೆಗೆ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಬೇಕಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆ ದೆಹಲಿಯಲ್ಲಿ ನಡೆಯಲಿದೆ. ಒಂದು ವೇಳೆ ಡಿಸಿಎಂ ಹುದ್ದೆ ಸೃಷ್ಟಿಸುವುದಾದರೆ ಎರಡು ಅಥವಾ ನಾಲ್ಕು ಸ್ಥಾನಗಳನ್ನು ನೀಡಬೇಕೇ ಎಂಬ ಬಗ್ಗೆಯೂ ಗೊಂದಲವಿದೆ. ಸದ್ಯ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಉಳಿದ ಪ್ರಮುಖ ಸಮುದಾಯಗಳಿಗೆ ಡಿಸಿಎಂ ಸ್ಥಾನ ನೀಡುವ ಸಾಧ್ಯತೆ ಇದೆ.

ನಮ್ಮದೇನೂ ಇಲ್ಲ, ಹೈಕಮಾಂಡ್‌ದು: ಡಿಕೆಶಿ
ಈ ಮಧ್ಯೆ ಭಾನುವಾರ ಇಡೀ ದಿನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ಸಚಿವಾಕಾಂಕ್ಷಿಗಳು ಸಂಪುಟ ಸೇರ್ಪಡೆಗೆ ಪ್ರಭಾವ ಬೀರಲು ಯತ್ನಿಸಿದರು. ನೂತನ ಶಾಸಕಾಂಗ ಪಕ್ಷದ ನಾಯಕನಿಗೆ ಶುಭ ಕೋರುವ ನೆಪದಲ್ಲಿ ಹೂಗುಚ್ಛ ನೀಡಿ, ತಮ್ಮ ಸಣ್ಣ ಪ್ರೊಫೈಲ್‌ ಒಪ್ಪಿಸಿ ಬರುತ್ತಿರುವುದು ಕಂಡುಬಂತು. ಇನ್ನು ಹಲವರು ನಿರ್ಗಮಿತ ಸಿಎಂ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಅವರೆಲ್ಲರಿಗೂ ಡಿಸಿಎಂ, ಹೈಕಮಾಂಡ್‌ನತ್ತ ಕೈತೋರಿಸಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌ ಅವರು, ‘ಬೆಂಗಳೂರಿನ ನಾಗರಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಲೋಕಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ಮಾಡಲಾಗುವುದು. ಆದರೆ, ಸಚಿವರು ಯಾರ್ಯಾರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಜ್ಯ ನಾಯಕರು ಹೈಕಮಾಂಡ್‌ ಕಡೆಗೆ ಕೈತೋರಿಸಿದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ದೆಹಲಿಗೆ ತೆರಳುತ್ತಿದ್ದಾರೆ. ಈಗಾಗಲೇ ಮಾಜಿ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರು ಭಾನುವಾರವೇ ದಿಲ್ಲಿಗೆ ತೆರಳಿದ್ದು, ಇನ್ನೂ ಸುಮಾರು 20ಕ್ಕೂ ಹೆಚ್ಚು ಶಾಸಕರು ಪ್ರಯಾಣ ಬೆಳೆಸಿದ್ದಾರೆ. ಒಟ್ಟಾರೆ ಸೋಮವಾರ ಸಂಜೆ ವೇಳೆಗೆ ಈ ಕುತೂಹಲಕ್ಕೆ ಬಹುತೇಕ ತೆರೆಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

‘ಶಪಥ’ಕ್ಕೆ ಆಗಮಿಸಲು ವರಿಷ್ಠರಿಗೆ ಇಂದು ನಿಯೋಜಿತ ಸಿಎಂ ಡಿಕೆಶಿ ಆಹ್ವಾನ
ಜೂನ್‌ 3ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಅಂದು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ವರಿಷ್ಠರಿಗೆ ಆಹ್ವಾನ ನೀಡಲಿದ್ದಾರೆ. ಪಕ್ಷದ ಅಧಿನಾಯಕ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್‌ಸಿಂಗ್‌ ಸುರ್ಜೇವಾಲ ಅವರಿಗೆ ಪ್ರಮಾಣವಚನದಲ್ಲಿ ಭಾಗವಹಿಸುವಂತೆ ಶಿವಕುಮಾರ್‌ ಆಹ್ವಾನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಿಲ್ಲೀಲಿ ಕಸರತ್ತು

– ಸಂಪುಟ ಆಯ್ಕೆ ಬಗ್ಗೆ ಸಿದ್ದು, ಡಿಕೆಶಿ ಕೆಯಲ್ಲಿದೆ ಪ್ರತ್ಯೇಕ ಪಟ್ಟಿ

– ಹಿಂದಿನ ಸರ್ಕಾರದಲ್ಲಿನ 20ಕ್ಕೂ ಹೆಚ್ಚು ಸ್ಥಾನಗಳ ತೆರವು?

– ಈ ಸ್ಥಾನಕ್ಕೆ ಯಾರನ್ನು ಸೇರ್ಪಡೆ ಮಾಡಬೇಕೆಂಬ ಬಗ್ಗೆ ಚರ್ಚೆ

– ಯಾರು ಒಳಗೆ? ಯಾರು ಹೊರಗೆ?: ವರಿಷ್ಠರ ಕೈಯಲ್ಲಿದೆ ಪಟ್ಟಿ

– ಅನುಭವಿಗಳು, ಹೊಸಬರು, ಸಮುದಾಯಗಳು, ಬಣಗಳ ಲೆಕ್ಕಾಚಾರ

– ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ಬಗ್ಗೆಯೂ ಚಿಂತನೆ

– ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆಯೂ ನಿರ್ಧಾರ

– ಡಿಸಿಎಂ ಬೇಕೆಂದಾದರೆ ಎಷ್ಟು ಹುದ್ದೆ ಬೇಕೆಂಬ ಬಗ್ಗೆಯೂ ಚರ್ಚೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology