ಬೆಂಗಳೂರು.05.ಮಾರ್ಚ್ 26 ಸದನದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, 1ನೇ ತರಗತಿ ಮಕ್ಕಳ ದಾಖಲಾತಿಗೆ 6 ವರ್ಷದ ಮಿತಿಯನ್ನು ನಿಗದಿ ಮಾಡಲಾಗಿತ್ತು. ಆ ನಿಯಮದಲ್ಲಿ ಸಡಿಲ ಮಾಡುವಂತೆ ಸಾಕಷ್ಟು ಮಕ್ಕಳ ಪಾಲಕರು ನಮ್ಮ ಬಳಿ ಮನವಿ ಮಾಡಿದ್ದರು.
ಆ ಪಾಲಕರೆಲ್ಲ ಸ್ವಲ್ಪ ಗಾಬರಿಯಲ್ಲೂ ಇದಾರೆ. ಅವರ ಮನವಿಯನ್ನು ಪುರಸ್ಕರಿಸಿ ಸರ್ಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡುತ್ತಿದೆ ಎಂದರು. ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ 3 ಸೆಕ್ಷನ್ 20ರ ಅಡಿಯಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿಯನ್ನು ನೀಡಲಾಗಿರುತ್ತದೆ.
ಅದರಂತೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿ ನೀಡುವ ಸಂಬಂಧ 60 ದಿನಗಳ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲೂ ಬದಲಾವಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಆದೇಶದ ಪ್ರತಿಯನ್ನು ಓದಿದರು.
ಅಂದಹಾಗೆ, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ 1ನೇ ತರಗತಿ ಪ್ರವೇಶಕ್ಕೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿತ್ತು.
ಆದರೆ, ಇದರಿಂದ ಲಕ್ಷಾಂತರ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ಪೋಷಕರ ಮನವಿಯನ್ನು ಪುರಸ್ಕರಿಸಿ ಸರ್ಕಾರ ಈ ಮಹತ್ವದ ಸಡಿಲಿಕೆ ಘೋಷಿಸಿದೆ. ಸರ್ಕಾರದ ಈ ಘೋಷಣೆಯಿಂದಾಗಿ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಜೂನ್ 1ಕ್ಕೆ 6 ವರ್ಷ ತುಂಬಲು ಕೇವಲ 60 ದಿನಗಳು (2 ತಿಂಗಳು) ಬಾಕಿ ಇದ್ದರೂ ಸಹ ಅಂತಹ ಮಕ್ಕಳಿಗೆ ಪ್ರವೇಶ ನೀಡಲು ಸರ್ಕಾರ ಅನುಮತಿ ನೀಡಿದೆ. ಅಂದರೆ, ಜೂನ್ 1ರ ಬದಲಾಗಿ ಆಗಸ್ಟ್ 1ರ ಒಳಗೆ 6 ವರ್ಷ ಪೂರ್ಣಗೊಳಿಸುವ ಮಕ್ಕಳು ಕೂಡ ಈ ವರ್ಷ 1ನೇ ತರಗತಿಗೆ ಸೇರಬಹುದಾಗಿದೆ.





Any questions related to 1ನೇ ತರಗತಿಗೆ ವಯೋಮಿತಿ ಸಡಿಲಿಕೆ?