ಇಂದಿನ ದುರಿತ ಕಾಲದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ನಮ್ಮ ಆಸರೆಯಾಗಿದೆ ಎಂದು ಚಿಂತಕ ಆರ್.ಕೆ.ಹುಡಗಿ ಅಭಿಪ್ರಾಯಪಟ್ಟರು.
ಔರಾದ್.16.ಏಪ್ರಿಲ್.26:ಪಟ್ಟಣದ ಅಮರೇಶ್ವರ್ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾನತೆ, ಸ್ವಾತಂತ್ರ್ಯ, ಬಂಧುತ್ವದೊಂದಿಗೆ ದೇಶದ ಸರ್ವ ಪ್ರಜೆಗಳಿಗೂ ಸಂವಿಧಾನ ನೀಡಿದೆ. ಸಂವಿಧಾನ ಓದುವುದು, ಗೌರವಿಸುವುದು ಮತ್ತು ರಕ್ಷಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಬೇಕು’ ಎಂದು ಹೇಳಿದರು.
ಸಾಮಾಜಿಕ ಚಿಂತಕ ನಂದಾದೀಪ ಬೋರಾಳೆ ವಿಶೇಷ ಉಪನ್ಯಾಸ ನೀಡಿದ ಅವರು, ‘ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅನನ್ಯ ಕೊಡುಗೆಗಳು ಪೀಳಿಗೆಗಳಾದ್ಯಂತ ಸ್ಫೂರ್ತಿಯಾಗಿದೆ.ಅಂಬೇಡ್ಕರ್ ಅವರ ವಿಚಾರಧಾರೆಗಳು, ಸಾಧನೆಗಳು ವಿಶ್ವಕ್ಕೆ ಮಾರ್ಗದರ್ಶನವಾಗಿದ್ದು, ಅವರನ್ನು ಸರಿಯಾಗಿ ಓದಿ ಅನುಸರಿಸಿದರೆ ಮಾತ್ರ ಆದರ್ಶ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.
‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಲ್ಲ, ಭವ್ಯ ಭಾರತದ ಮಹಾನಾಯಕರು. ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಹಾಗೂ ಸಮಾಜದ ಎಲ್ಲಾ ವರ್ಗಗಳಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅಂಬೇಡ್ಕರ್ ಎಂದರೆ ಭಾರತ, ಭಾರತ ಎಂದರೆ ಅಂಬೇಡ್ಕರ್’ ಎಂಬ ಮಾತು ಇದನ್ನು ಪ್ರತಿಬಿಂಬಿಸುತ್ತದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತಮ ಜಾಧವ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ್, ಉಪನ್ಯಾಸಕ ಡಾ.ದತ್ತಾತ್ರಿ ಮಡಿವಾಳ, ಎನ್‌ಎಸ್‌ಎಸ್ ಅಧಿಕಾರಿ ಉತ್ತಮ ದಂಡೆ, ಪ್ರಿಯಾ ಸದಾಫೂಲೆ ಸೇರಿದಂತೆ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




Any questions related to ಸಂವಿಧಾನ ಓದುವುದು, ಗೌರವಿಸುವುದು ಮತ್ತು ರಕ್ಷಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಬೇಕು – ಆರ್ ಕೆ ಹುಡುಗಿ?