Home » ಲೈವ್ ನ್ಯೂಸ್ » ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಗಂಭೀರ ಕಾಯಿಲೆ: ಡಾ.ಎಂ.ಸಿ.ಸುಧಾಕರ್

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಗಂಭೀರ ಕಾಯಿಲೆ: ಡಾ.ಎಂ.ಸಿ.ಸುಧಾಕರ್

Facebook
X
WhatsApp
Telegram

ಬೆಂಗಳೂರು.18.ಮಾರ್ಚ್.26: ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯ ಗಳಲ್ಲಿ  ವೈದ್ಯಕೀಯ ಭಾಷೆಯಲ್ಲಿ ಹೇಳುವಂತೆ ‘ಗಂಭೀರ ಸ್ವರೂಪದ ದೀರ್ಘ ಕಾಲದ ಕಾಯಿಲೆ’ ಗಳಿಂದ ಬಳಲುತ್ತಿದ್ದು ಅದಕ್ಕೆ ತಾತ್ಕಾಲಿಕ ಮುಲಾಮು ಕೆಲಸ ಮಾಡಲ್ಲ. ಒಳ್ಳೆಯ ಚಿಕಿತ್ಸೆಯನ್ನೇ ಕೊಡಬೇಕು. ಅಂತಹ ಚಿಕಿತ್ಸೆಯನ್ನು ಹಂತ-ಹಂತವಾಗಿ ಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಾಹಿತಿ ತಿಳಿಸಿದರು.

ನಿಯಮ 330ರಡಿ ಬಿಜೆಪಿಯ ಡಾ. ತಳವಾರ ಸಾಬಣ್ಣ, ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಸಮಸ್ಯೆಗಳ ಆಗರ, ಜಾತಿ ಮತ್ತು ಭ್ರಷ್ಟಾಚಾರದ ಕೇಂದ್ರಗಳಾಗಿದ್ದು ವಿವಿಗಳ ಸ್ಥಿತಿ ಅಧೋಗತಿಗೆ ತಲುಪಿದೆ ಎಂದು ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ, ಎಲ್ಲ ವಿವಿಗಳು ಅಧೋಗತಿಗೆ ತಲುಪಿದ್ದು, ಮುಳಗುತ್ತಿರುವ ಹಡಗುಗಳು ಆಗಿವೆ. ಸರ್ಕಾರದ ಪಾಲಿಗೆ ಬಿಳಿ ಆನೆಗಳಂತಾಗಿವೆ. ಕಳೆದ 20 ವರ್ಷಗಳಿಂದ ಈ ಸ್ಥಿತಿ ಇದೆ. ಇದರ ಬಗ್ಗೆ ಎರಡ್ಮೂರು ದಿನ ಚರ್ಚೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.


ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ಕೊಡಬೇಕು. ವಿವಿಗಳಲ್ಲಿರುವ 14 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಈ ವಿಷಯಗಳನ್ನು ಸದಸ್ಯರು ಆಗಾಗ ಸರ್ಕಾರಗಳ ಗಮನಕ್ಕೆ ತಂದಿದ್ದರೆ ಇಂದು ಈ ವಿಚಾರ ನನ್ನ ತಲೆಗೆ ಬರುತ್ತಿರಲಿಲ್ಲ. ರಾಜ್ಯದಲ್ಲಿ ವಿವಿಗಳ ಸಂಖ್ಯೆ ಹೆಚ್ಚಾದಂತೆ ಆದಾಯದ ಮೂಲಗಳು ಕಡಿತವಾಗಿದೆ. ವಿವಿಗಳು ಗಂಭೀರ ಸ್ವರೂಪದ ಕಾಯಿಲೆಗಳಿಂದ ನರಳುತ್ತಿದ್ದು, ತಕ್ಷಣ ಮುಲಾಮು ಹಚ್ಚಿ ಕಾಯಿಲೆ ವಾಸಿ ಮಾಡಲು ಸಾಧ್ಯವಿಲ್ಲ. ಸುಧೀರ್ಘ ಚಿಕಿತ್ಸೆ ಕೊಡಬೇಕು.

ಆ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದನದಲ್ಲಿ ಪಕ್ಷ ಮತ್ತು ಸಿದ್ಧಾಂತ ಬಿಟ್ಟು ವಿಶೇಷ ಚರ್ಚೆಗೂ ಸಿದ್ಧ. ಆದರೆ, ಚರ್ಚೆ ಬಳಿಕ ಸರ್ಕಾರ ಕೈಗೊಳ್ಳುವ ತೀರ್ಮಾನಗಳನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕು ಎಂದರು.

ಕಲಬುರಗಿ ವಿವಿಯಲ್ಲಿ ಅಂಕಪಟ್ಟಿ ಮುದ್ರಣಕ್ಕೆ 11 ಕೋಟಿ ರೂ. ಖರ್ಚು!
ಕಲಬುರಗಿ ವಿವಿಯಲ್ಲಿ ಅಂಕಪಟ್ಟಿ ಮುದ್ರಣ ಮಾಡಲು 11 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುತ್ತಿದೆ. ತಮಕೂರು ವಿವಿ, ಕುವೆಂಪು ವಿವಿಗಳಲ್ಲೂ ಇಂತಹದ್ದೆ ಸಮಸ್ಯೆ ಆಗಿದೆ. ಆದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಸಚಿವರು ಇದೇ ವೇಳೆ ಸದನಕ್ಕೆ ಮಾಹಿತಿ ನೀಡಿದರು.

ವಿವಿಗಳ 5 ವರ್ಷದ ವೇಳಾಪಟ್ಟಿ ಸಿದ್ಧ: ಸಚಿವ
ರಾಜ್ಯದ ಸರ್ಕಾರಿ ವಿವಿಗಳ 5 ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.


ಕಾಂಗ್ರೆಸ್‌ನ ರಮೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿನ ವಿವಿಗಳ ವೇಳಾಪಟ್ಟಿಯಲ್ಲಿ ಏಕರೂಪತೆ ಇರಲಿಲ್ಲ. ಆದ್ದರಿಂದ ನಾವು ಏಕರೂಪದ ವೇಳಾಪಟ್ಟಿ ಜಾರಿಗೆ ತಂದಿದ್ದೇವೆ. ಇದೀಗ ವಿವಿಗಳ ಕಾರ್ಯಾರಂಭದಲ್ಲಿ ಹೆಚ್ಚೆಂದರೆ 15-20 ದಿನಗಳ ವ್ಯತ್ಯಾಸವಷ್ಟೇ ಇರುವುದು ಎಂದು ಹೇಳಿದರು.

ಸದ್ಯ ಜಾರಿಯಲ್ಲಿರುವ ಯುಯುಸಿಎಂಎಸ್ ತಂತ್ರಾಂಶದಡಿ ಉನ್ನತ ಶಿಕ್ಷಣ ಇಲಾಖೆಯ 30 ವಿವಿಗಳು, 3375 ಕಾಲೇಜುಗಳು ಮತ್ತು 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಸದ್ಯ ಖಾಸಗಿ ವಿವಿ ಅಥವಾ ಡೀಮ್ಡ್ ಟು ಬಿ ವಿವಿಗಳು ಈ ಯೋಜನೆಗೆ ಒಳಪಟ್ಟಿಲ್ಲ.

ಸರ್ಕಾರ ಯುಯುಸಿಎಂಎಸ್ 2.0 ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡಿದ್ದು ಈ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಖಾಸಗಿ ವಿವಿ ಮತ್ತು ಪರಿಭಾವಿತ ವಿವಿ ಮತ್ತು ಇತರ ಇಲಾಖೆಗಳಲ್ಲಿನ ಸಾರ್ವಜನಿಕ ವಿವಿಗಳಿಗೂ ಅಳವಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಹಾಗೆಯೇ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳಲ್ಲಿ ಸ್ಟಾಫ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ಪೂರಕವಾದ ಪಠ್ಯಕ್ರಮ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

26 ವರ್ಷಗಳ ಬಳಿಕ ಈ ವರ್ಷ ಬಿಇಡಿ ಶುಲ್ಕ ಪರಿಷ್ಕರಣೆ: ಸಚಿವ
ರಾಜ್ಯದ ಶಿಕ್ಷಣ ಮಹಾವಿದ್ಯಾಲಯ (ಬಿಇಡಿ ಕಾಲೇಜು) ಗಳ ಪ್ರವೇಶಾತಿ ಶುಲ್ಕವನ್ನು ಈ ಶೈಕ್ಷಣಿಕ ವರ್ಷದಿಂದ ಪರಿಷ್ಕರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.

ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 26 ವರ್ಷಗಳಿಂದ ಬಿಇಡಿ ಕಾಲೇಜುಗಳ ಪ್ರವೇಶಾತಿ ಶುಲ್ಕ ಪರಿಷ್ಕರಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆಗಾಗಿ ಐವರು ಸದಸ್ಯರನ್ನೊಳಗೊಂಡ ರಾಜ್ಯಮಟ್ಟದ ಸಮಿತಿ ರಚಿಸಲಾಗಿದ್ದು, ಈ ಸಮಿತಿ ವರದಿ ಆಧರಿಸಿ ಶುಲ್ಕ ಪರಿಷ್ಕರಣೆಯ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಶುಲ್ಕ ಪರಿಷ್ಕರಣೆ ವಿಷಯವಾಗಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ಸಹ ನಡೆದಿದ್ದು ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ನಮ್ಮ ರಾಜ್ಯ ಮತ್ತು ಇತರ ರಾಜ್ಯದಲ್ಲಿರುವ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಶುಲ್ಕಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology