Home » ಲೈವ್ ನ್ಯೂಸ್ » ಸೇವಾಲಾಲ್ ಮಹಾರಾಜರ ಜೀವನ ಎಲ್ಲರಿಗೂ ಪ್ರೇರಣೆ- ಶಾಸಕ ಪ್ರಭು‌ ಚವ್ಹಾಣ

ಸೇವಾಲಾಲ್ ಮಹಾರಾಜರ ಜೀವನ ಎಲ್ಲರಿಗೂ ಪ್ರೇರಣೆ- ಶಾಸಕ ಪ್ರಭು‌ ಚವ್ಹಾಣ

Facebook
X
WhatsApp
Telegram


ಔರಾದ.15.ಫೆಬ್ರವರಿ.26: ಸಂತ ಸೇವಾಲಾಲ್ ಮಹಾರಾಜರ 287 ನೇ ಜಯಂತಿಯ ನಿಮಿತ್ತ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಫೆ.15 ರಂದು ಘಮಸುಬಾಯಿ ತಾಂಡಾ ಬೋಂತಿಯ ಗೃಹ ಕಛೇರಿಯಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.

ನಂತರ ಮಾತನಾಡಿದ ಶಾಸಕರು, ಸಂತ ಸೇವಾಲಾಲ್ ಮಹಾರಾಜರು ದೇಶ ಕಂಡ ಬಹುದೊಡ್ಡ ಸಂತ, ಮಹಾ ತಪಸ್ವಿ, ಬಂಜಾರಾ ಸಮುದಾಯದ ಧರ್ಮಗುರು, ಸಮಾಜ ಸುಧಾರಕರು. ವಿಶೇಷವಾಗಿ ಬಂಜಾರಾ ಸಮಾಜದ ಉನ್ನತಿಗೆ ಹುಟ್ಟಿ ಬಂದ ಅವತಾರ ಪುರುಷರು. ಹಿಂದೆ ಬಂಜಾರಾ ಸಮಾಜವು ಅನಕ್ಷರತೆ, ಅಂಧಶ್ರದ್ಧೆ ಮತ್ತು ಬಡತನದಂತಹ ನಾನಾ ಸಮಸ್ಯೆಗಳಿಂದ ಬಳಲಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ  ತೀವ್ರ ಹಿಂದುಳಿದಿತ್ತು. ಅಂತಹ ಸಮಯದಲ್ಲಿ ಸಂತ ಸೇವಾಲಾಲ್ ಮಹಾರಾಜರು ಸಮಾಜದಲ್ಲಿ ಜಾಗೃತಿ ಮೂಡಿಸಿ, ಶಿಸ್ತು, ನೈತಿಕತೆ ಮತ್ತು ಸಮಾನತೆಯ ಸಂದೇಶ ಸಾರಿದರು.

ದುರ್ಮಾರ್ಗ, ದುಶ್ಚಟಗಳಿಗೆ ಸಿಲುಕಿದ್ದ ಅನೇಕರ ಜೀವನವನ್ನು ಅವರು ಸತ್ಸಂಗ, ಸನ್ಮಾರ್ಗ ಮತ್ತು ಉತ್ತಮ ಮೌಲ್ಯಗಳ ಮೂಲಕ ಪರಿವರ್ತಿಸಿದ್ದರು. ಸಮಾಜದಲ್ಲಿ ನೈತಿಕತೆ, ಸತ್ಯನಿಷ್ಠೆ, ಭಕ್ತಿ ಮತ್ತು ಶ್ರಮದ ಮಹತ್ವವನ್ನು ಸಾರಿದ್ದರು. ಅಂಧಶ್ರದ್ಧೆಗಳನ್ನು ದೂರ ಮಾಡಿ, ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ಆತ್ಮಗೌರವದಿಂದ ಬದುಕುವಂತೆ ಕಲಿಸಿಕೊಟ್ಟ ಮಹಾನ್ ಗುರುಗಳು ಎಂದು ಹೇಳಿದರು.

ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಧೈರ್ಯವಾಗಿ ಹೋರಾಡಿ ಬಂಜಾರಾ ಸಮಾಜವನ್ನು ಸಂಘಟಿತಗೊಳಿಸಿದ್ದರು. ಅವರ ತತ್ವ-ಆದರ್ಶಗಳು ಬಂಜಾರಾ ಸಮಾಜದಲ್ಲಿ ಒಗ್ಗಟ್ಟು ಮತ್ತು ಸ್ವಾವಲಂಬನೆಗೆ ದಾರಿದೀಪವಾಗಿದೆ. ಬಂಜಾರಾ ಸಮಾಜದ ಏಳಿಗೆಯಲ್ಲಿ ಸೇವಾಲಾಲ್ ಮಹಾರಾಜರ ಪಾತ್ರ ಅಮೋಘ ಎಂದು ಬಣ್ಣಿಸಿದರು.

ನಾನು‌ ಇಚ್ಛಾಪೂರ್ತಿ ಮಾತಾ ಜಗದಂಬಾ, ಸಂತ‌‌‌‌ ಸೇವಾಲಾಲ್‌ ಮಹಾರಾಜರ ಭಕ್ತನಾಗಿದ್ದು, ಊರಿನಲ್ಲಿ ಮಾತಾ ಜಗದಂಬಾ, ಸೇವಾಲಾಲ್ ಮಹಾರಾಜರು ಮತ್ತು ಕುಲಗುರು ಡಾ.ರಾಮರಾವ ಮಹಾರಾಜರ ಮಂದಿರಗಳನ್ನು ನಿರ್ಮಿಸಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಸಂತ ಸೇವಾಲಾಲ್ ಮಹಾರಾಜರ ಜೀವನ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರ ತ್ಯಾಗ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಇನ್ನಷ್ಟು ಉನ್ನತಿ ಸಾಧ್ಯ. ಅವರ ತತ್ವ ಸಿದ್ಧಾಂತಗಳು ಮತ್ತು ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಸಚಿನ ರಾಠೋಡ,   ಸುಭಾಷ ರಾಠೋಡ, ಬಳವಂತ ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology