Home » ಲೈವ್ ನ್ಯೂಸ್ » ಖಾಸಗಿ ಕಾಲೇಜಿಗೆ ಸರ್ಕಾರಿ ಉಪನ್ಯಾಸಕರು: ಅಪಸ್ವರ, ಸರ್ಕಾರ ಆದೇಶ.

ಖಾಸಗಿ ಕಾಲೇಜಿಗೆ ಸರ್ಕಾರಿ ಉಪನ್ಯಾಸಕರು: ಅಪಸ್ವರ, ಸರ್ಕಾರ ಆದೇಶ.

Facebook
X
WhatsApp
Telegram

ಬೆಂಗಳೂರು.08.ಜನವರಿ.26: ರಾಜ್ಯದಲ್ಲಿ ಮುಂಬರುವ ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳ ಪ್ರಾಯೋಗಿಕ ಪರೀಕ್ಷೆಗೆ ಸರ್ಕಾರಿ ಪಿಯು ಕಾಲೇಜು ಮತ್ತು ಅನುದಾನಿತ ಕಾಲೇಜುಗಳ ವಿಜ್ಞಾನ ಉಪನ್ಯಾಸಕರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸುತ್ತಿರುವುದಕ್ಕೆ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಪಾಲಕರು ಮತ್ತು ಉಪನ್ಯಾಸಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಪರೀಕ್ಷಾ ಮಂಡಳಿಯ ಈ ನಡೆಯಿಂದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯು ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳ ಕೊನೆಯ ಕ್ಷಣದ ಪರೀಕ್ಷಾ ತಯಾರಿ ಅಸ್ತವ್ಯಸ್ತವಾಗಲಿದ್ದು, ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಜನವರಿ 27ರಿಂದ ಫೆಬ್ರವರಿ 14ರವರೆಗೆ ರಾಜ್ಯಾದ್ಯಂತ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಫೆಬ್ರವರಿ 28ರಿಂದ ದ್ವಿತೀಯ ಪಿಯು ಪರೀಕ್ಷೆ-1 ಆರಂಭವಾಗಲಿದೆ. ಈ ಮಧ್ಯೆ ಈಗಾಗಲೇ ಒಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು ಇನ್ನೊಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಬೇಕಿದೆ. ಇವುಗಳ ಜೊತೆಗೆ ವಿದ್ಯಾರ್ಥಿಗಳ ಪುನರ್ ಮನನ ಚಟುವಟಿಕೆಯನ್ನು ಅವಶ್ಯವಾಗಿ ನಡೆಸಲೇಬೇಕಿದೆ. ಈ ಹೊತ್ತಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಖಾಸಗಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನಾಗಿ ಕಳುಹಿಸುವುದು ಸರಿಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಡಿಸೆಂಬರ್‌ನಲ್ಲೇ ಸುತ್ತೋಲೆ:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಡಿಸೆಂಬರ್‌ನಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿ, ಸೂಕ್ಷ್ಮ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಅನುದಾನ ರಹಿತ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನಾಗಿ ಸರ್ಕಾರಿ/ಅನುದಾನಿತ ಕಾಲೇಜಿನ ವಿಜ್ಞಾನ ವಿಷಯ ಬೋಧಿಸುವ ಪ್ರಾಂಶುಪಾಲರು, ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕರನ್ನು ನೇಮಿಸಬೇಕು. ಹಾಗೆಯೇ ಖಾಸಗಿ ಕಾಲೇಜುಗಳಿಗೆ ಸರ್ಕಾರಿ, ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನೇ ಬಾಹ್ಯ ಪರೀಕ್ಷಕರನ್ನಾಗಿ ನೇಮಕ ಮಾಡಬೇಕು ಎಂದು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆಯನ್ನು ನೀಡಿತ್ತು.

ಆದರೆ, ಸುತ್ತೋಲೆಯ ಈ ಅಂಶಗಳ ಬಗ್ಗೆ ಪಿಯು ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ಅನ್ಯ ಖಾಸಗಿ ಕಾಲೇಜುಗಳು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಯಲ್ಲಿ ಶೈಕ್ಷಣಿಕ ವರ್ಷದ ಅತ್ಯಂತ ಮಹತ್ವದ ಅವಧಿಯ 10-15 ದಿನಗಳನ್ನು ನಮ್ಮ ಕಾಲೇಜಿನ ಮಕ್ಕಳಿಗೆ ನೀಡದೆ ಖಾಸಗಿ ಕಾಲೇಜುಗಳ ಮೇಲ್ವಿಚಾರಣೆಯಲ್ಲಿ ವ್ಯಸ್ತರಾದರೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳಿಗೆ ತೊಂದರೆ:

ಪರೀಕ್ಷೆಗಳು ಕನಿಷ್ಠ 5 ದಿನಗಳಿಂದ ಗರಿಷ್ಠ 16 ದಿನಗಳು ನಡೆಯಲಿವೆ. ಇಷ್ಟು ದಿನಗಳು ಪ್ರಾಂಶುಪಾಲರು, ಉಪನ್ಯಾಸಕರು ತಮ್ಮ ಕಾಲೇಜಿನಿಂದ ಹೊರಗುಳಿದರೆ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತದೆ. ಹಾಗೆಯೇ ಜನವರಿ, ಫೆಬ್ರವರಿಯಲ್ಲಿ ನಡೆಯುವ ಪುನರ್ ಮನನ ಚಟುವಟಿಕೆ, ಪರಿಹಾರ ಬೋಧನೆ, ವಿದ್ಯಾರ್ಥಿಗಳ ಕೊನೆ ಹಂತದ ತಯಾರಿ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಬಾರಿ ಎರಡು ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿರುವುದರಿಂದ ಮೊದಲೇ ಪರಿಹಾರ ಬೋಧನೆ, ಪುನರ್ ಮನನ ಚಟುವಟಿಕೆ ನಡೆಸಲು ಸಮಯ ಸಾಕಾಗುವುದಿಲ್ಲ. ಜತೆಗೆ 2 ಅವಧಿಗೆ ನಡೆಯುವ ಆನ್‌ಲೈನ್ ತರಗತಿಗೂ ಧಕ್ಕೆ ಆಗಲಿದೆ ಎಂದು ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ವಿಜ್ಞಾನ ಉತ್ತೀರ್ಣ ಪ್ರಮಾಣ ಶೇ.57 ಮಾತ್ರ
ಕಳೆದ ವರ್ಷದ ಪಿಯು ಪರೀಕ್ಷೆಯನ್ನು ಗಮನಿಸಿದರೆ ಸರ್ಕಾರಿ ಪಿಯು ಕಾಲೇಜುಗಳ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಬರೀ ಶೇ. 55.07 ಮಾತ್ರವಿದೆ. ಅದೇ ಅನುದಾನಿತ ಕಾಲೇಜುಗಳಲ್ಲಿ ಶೇ. 70.19 ಮತ್ತು ಖಾಸಗಿ ಕಾಲೇಜುಗಳಲ್ಲಿ ಶೇ. 88.84ರಷ್ಟಿದೆ. ಅಂದರೆ ವಿಜ್ಞಾನ ವಿಷಯದಲ್ಲಿ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣಕ್ಕೂ ಖಾಸಗಿ ಪಿಯು ಕಾಲೇಜುಗಳ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೂ ಉತ್ತೀರ್ಣತೆಯ ಪ್ರಮಾಣದಲ್ಲಿ ಬರೋಬ್ಬರಿ ಶೇ.33ರಷ್ಟು ವ್ಯತ್ಯಾಸವಿದೆ. ಜತೆಗೆ ಸರ್ಕಾರಿ ಕಾಲೇಜುಗಳ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತಮ ಅಂಕ ಪಡೆದು, ಸಿಇಟಿಯಲ್ಲಿ ಉತ್ತಮ ರ್‍ಯಾಂಕ್‌ ಪಡೆದು ಸರ್ಕಾರಿ ಕೋಟಾದಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗುತ್ತಿದೆ. ಇಂತಹ ಪರಿಸ್ಥಿತಿ ಇರುವಾಗ ಪರೀಕ್ಷೆಗೆ ಬೆರಳೆಕೆಯಷ್ಟೇ ದಿನಗಳು ಬಾಕಿ ಇರುವಾಗ ವಿಜ್ಞಾನ ಉಪನ್ಯಾಸಕರನ್ನು ಪರೀಕ್ಷೆ ಮೇಲ್ವಿಚಾರಣೆಯ ನೆಪದಲ್ಲಿ ವಿದ್ಯಾರ್ಥಿಗಳಿಂದ ದೂರ ಇಡುವುದು ಸಲ್ಲದು ಎಂಬ ಅಭಿಪ್ರಾಯ ಪಿಯು ಉಪನ್ಯಾಸಕರಲ್ಲಿದೆ.

ವೆಬ್ ಕಾಸ್ಟಿಂಗ್ ಇದ್ದಿದ್ದಕ್ಕೆ ಅಕ್ರಮ ನಡೆಯದು: ಸಂಘ
ಪಿಯು ಪ್ರಾಯೋಗಿಕ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ. ಜಿಲ್ಲಾ ಉಪನಿರ್ದೇಶಕರ ಮೇಲುಸ್ತುವಾರಿಯಲ್ಲಿ ಪ್ರತಿ ಪ್ರಾಯೋಗಿಕ ಪರೀಕ್ಷಾ ಕೇಂದ್ರದ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಆದ್ದರಿಂದ ಆಯಾ ಕಾಲೇಜುಗಳ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಆಯಾ ಕಾಲೇಜಿನ ಪ್ರಾಂಶುಪಾಲರನ್ನೇ ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಬಹುದು. ಜೊತೆಗೆ ಬಾಹ್ಯ ಪರೀಕ್ಷಕರು ಮತ್ತು ವೆಬ್ ಕಾಸ್ಟಿಂಗ್ ಹೀಗೆ ಎರಡು ಹಂತಗಳ ಮುಂಜಾಗರೂಕತೆ ವ್ಯವಸ್ಥೆ ಇರುವುದಿಂದ ಖಾಸಗಿ ಕಾಲೇಜುಗಳ ಪ್ರಾಂಶುಪಾಲರನ್ನೇ ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಿಕೊಳ್ಳುವುದರಿಂದ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ಆಗದು ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇ ಗೌಡ ಅಭಿಪ್ರಾಯ ಪಡುತ್ತಾರೆ.

ಪರೀಕ್ಷಾ ಮಂಡಳಿಯ ಈ ನಡೆ ಸರ್ಕಾರಿ ಕಾಲೇಜುಗಳ ಪಿಯು ಫಲಿತಾಂಶ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಜ್ಞಾನ ವಿಷಯದ ಪ್ರಾಂಶುಪಾಲರು, ಉಪನ್ಯಾಸಕರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸುವುದರಿಂದ ವಿನಾಯಿತಿ ನೀಡಬೇಕು. ವೆಬ್ ಕಾಸ್ಟಿಂಗ್ ಇರುವುದರಿಂದ ಅಕ್ರಮಕ್ಕೆ ಅವಕಾಶ ಇರದು. – ನಿಂಗೇ ಗೌಡ, ಅಧ್ಯಕ್ಷರು, ಪಿಯು ಉಪನ್ಯಾಸಕರ ಸಂಘ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology