ಬೆಂಗಳೂರು.15.ಮಾರ್ಚ್.26: ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಅಧರ್ಮೇಲೆ ಕಾರ್ಮಿಕರಿಗೆ ನೇಮಕಾತಿ ನಿಲ್ಲಿಸಲಾಗಿದೆ. ರಾಜ್ಯ ಸರ್ಕಾರ ಹೊರಗುತ್ತಿಗೆ ಸೇವೆಯನ್ನು ಹಂತಹಂತವಾಗಿ ಬಂದ್ ಮಾಡುವ ತೀರ್ಮಾನದ ಮೊದಲ ಹೆಜ್ಜೆಯಾಗಿ ಇಂಧನ ಇಲಾಖೆಯ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕರು, ಗ್ಯಾಂಗ್‌ಮನ್, ಮೀಟರ್ ರೀಡರ್ ಮತ್ತು ಚಾಲಕರಿಗೆ ಸೇವಾ ಭದ್ರತೆ ಕಲ್ಪಿಸಲು 3,200 ಕ್ಕೂ ಹೆಚ್ಚು ಸಿಬ್ಬಂದಿಗೆ ಕಾಯಂ ಹುದ್ದೆ ನೀಡಲು ನಿರ್ಧರ ಮಾಡಲಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ 2028 ರೊಳಗೆ ಹೊರಗುತ್ತಿಗೆ ಸೇವೆ ನಿಲ್ಲಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಸಂಬಂಧ ರಚಿಸಲಾಗಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಶಿಫಾರಸ್ಸುಗಳ ಬಗ್ಗೆ ಚರ್ಚೆ ನಡೆಸಿದ್ದ ಕ್ಯಾಬಿನೆಟ್, ಈ ಕುರಿತು ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿತ್ತು.
ಅಂತೆಯೇ, ಅಪಾಯಕಾರಿ ಕೆಲಸ ನಿರ್ವಹಿಸುವ ಪಟ್ಟಿಯಲ್ಲಿ ಮೊದಲಿರುವ ಇಂಧನ ಇಲಾಖೆಯ ಸುಮಾರು 3,200 ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿಗೆ ಸೇವಾ ಭದ್ರತೆ ಕಲ್ಪಿಸುವ ಪ್ರಕ್ರಿಯೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದೆ.
ಸರ್ಕಾರದ ನಾನಾ ಇಲಾಖೆಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಖಾಸಗಿ ಏಜೆನ್ಸಿಗಳಿಂದ ಭರ್ತಿ ಮಾಡಲಾಗಿದ್ದು, ಇದರಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಜತೆಗೆ, ಮೀಸಲು ಉಲ್ಲಂಘನೆಯಾಗುತ್ತಿದೆ.
ಏಜೆನ್ಸಿಗಳಿಂದ ನೌಕರರ ಶೋಷಣೆಯೂ ನಡೆಯುತ್ತಿದೆ. ಹೀಗಾಗಿ 2028ರೊಳಗೆ ಎಲ್ಲ ಹೊರಗುತ್ತಿಗೆ ನೇಮಕಗಳನ್ನು ನಿಲ್ಲಿಸಬೇಕು ಎಂದು ಸಂಪುಟ ಉಪಸಮಿತಿ ಶಿಫಾರಸ್ಸು ಮಾಡಿತ್ತು.
ಅಂತೆಯೇ, ಇಂಧನ, ಗಣಿ ಮತ್ತು ಆರೋಗ್ಯ ಇಲಾಖೆ ನೌಕರರು ಮತ್ತು ಪೌರಕಾರ್ಮಿಕರಿಗೆ ಆದ್ಯತೆ ಮೇಲೆ ಸೇವಾ ಭದ್ರತೆ ಕಲ್ಪಿಸಲು ಸರಕಾರ ಬಯಸಿದ್ದು, ಮೊದಲ ಹಂತದಲ್ಲಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ಕೆಳಹಂತದ ನೌಕರರನ್ನು ಪರಿಗಣಿಸಲಾಗುತ್ತಿದೆ. ಹಣಕಾಸು ಇಲಾಖೆ ಸಮ್ಮತಿ ಬಳಿಕ ಈ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.






Any questions related to ಹೊರಗುತ್ತಿಗೆ ಸೇವೆ ಬಂದ್- ಇಂಧನ ಇಲಾಖೆಯ 3,200 ಕ್ಕೂ ಹೆಚ್ಚು ಸಿಬ್ಬಂದಿಗೆ ಕಾಯಂ ಹುದ್ದೆ!?