ವಿಜಯಪುರ.09.ಆಗಸ್ಟ್.25:- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ’ದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ಈ ಬಾರಿ ಮೂರು ಹೊಸ ಸ್ನಾತಕೋತ್ತರ ಕೋರ್ಸ್‌ಗಳನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿನಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ತಾಲ್ಲೂಕಿನ ಬಿ.ಹೊಸೂರು ಕಾಲೊನಿಯಲ್ಲಿ ಪ್ರಯತ್ನ ನಡೆಸಿದರು.
ಸ್ನಾತಕೋತ್ತರ ಕೋರ್ಸ್‌ಗಳಾದ :
ಎಂ.ಎ. (ಕನ್ನಡ, ಇಂಗ್ಲಿಷ್, ಮಹಿಳಾ ಅಧ್ಯಯನ); ಎಂ.ಎಸ್ಸಿ (ಗಣಿತಶಾಸ್ತ್ರ) ಹಾಗೂ ಎಂ.ಕಾಂ (ವಾಣಿಜ್ಯ ಶಾಸ್ತ್ರ) ಈ ಐದು ವಿಷಯಗಳು ಮೊದಲಿನಿಂದಲೂ ಇದ್ದವು. ಇವುಗಳ ಜೊತೆಗೆ ಈ ಬಾರಿ ಹೊಸದಾಗಿ ಎಂ.ಎಸ್.ಡಬ್ಲ್ಯೂ, ಎಂ.ಎ (ಅರ್ಥಶಾಸ್ತ್ರ, ಶಿಕ್ಷಣ) ಈ ಮೂರು ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ.
‘ಈ ಹೊಸ ಕೋರ್ಸ್‌ಗಳನ್ನು ಕಲಿಯಲು ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆಯಬಹುದು. ಕಳೆದ ವರ್ಷದಿಂದ ಸ್ಥಗಿತಗೊಂಡಿರುವ ಸ್ನಾತಕೋತ್ತರ ತರಗತಿಗಳು ಈ ಬಾರಿ ಪುನರಾರಂಭಗೊಳ್ಳಬಹುದು’ ಎಂಬ ನಿರೀಕ್ಷೆ ಇಲ್ಲಿಯ ಅತಿಥಿ ಉಪನ್ಯಾಸಕರದ್ದು.
‘ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ’ ಎಂಬ ದೃಷ್ಟಿಕೋನದೊಂದಿಗೆ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಂಡ್ಯದಲ್ಲಿ 2014ರಲ್ಲಿ ಹೊರಾವರಣ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಆರಂಭಗೊಂಡಿತು.
ಸ್ನಾತಕ ಪದವಿ ಆರಂಭ:
ಸ್ನಾತಕೋತ್ತರ ಕೋರ್ಸ್‌ಗಳ ಜೊತೆಯಲ್ಲಿ 2021-22ನೇ ಸಾಲಿನಿಂದ ಸ್ನಾತಕ ಪದವಿ ಕೋರ್ಸ್‌ಗಳು ಆರಂಭಗೊಂಡವು. ಪ್ರಸ್ತುತ ಬಿ.ಎ (ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಕನ್ನಡ, ಸಮಾಜ ಕಾರ್ಯ, ಮಹಿಳಾ ಅಧ್ಯಯನ), ಬಿ.ಸಿ.ಎ (ಅನ್ವಯಿಕ ಗಣಕ), ಬಿ.ಎಸ್ಸಿ (ಗಣಿತಶಾಸ್ತ್ರ, ಗಣಕ ವಿಜ್ಞಾನ), ಬಿಕಾಂ (ವಾಣಿಜ್ಯ ಶಾಸ್ತ್ರ) ಕೋರ್ಸ್‌ಗಳು ಲಭ್ಯವಿವೆ.
ಲಭ್ಯ ಸೌಲಭ್ಯಗಳು:
‘ಆಧುನಿಕ ಸೌಲಭ್ಯದ ನೂತನ ಕಟ್ಟಡ, ಕಾಂಪೌಂಡ್, ವೃತ್ತಿಪರ ಅನುಭವಿ ಬೋಧಕರು, ಗ್ರಂಥಾಲಯ, ವೈ-ಫೈ ಹೊಂದಿರುವ ಕಂಪ್ಯೂಟರ್ ಲ್ಯಾಬ್, ಒಬಿಸಿ, ಎಸ್ಸಿ-ಎಸ್ಟಿ ವಿದ್ಯಾರ್ಥಿ ವೇತನ, ವಿಶಾಲ ತರಗತಿ ಕೊಠಡಿಗಳು, ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾ, ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು, ಕೌಶಲ ಆಧಾರಿತ ತರಬೇತಿ ಸೇರಿದಂತೆ ಹಲವಾರು ಸೌಲಭ್ಯಗಳು ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಪೂರಕವಾದ ವಾತಾವರಣವಿದೆ’ ಎಂದು ಅಧ್ಯಯನ ಕೇಂದ್ರದ ವಿಶೇಷಾಧಿಕಾರಿ ವಿಷ್ಣು ಎಂ.ಶಿಂಧೆ ತಿಳಿಸಿದರು.
ಪ್ರವೇಶಾತಿ ಆರಂಭ:
2025-26ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ ಆರಂಭವಾಗಿದ್ದು, ಆಗಸ್ಟ್ 16ರವರೆಗೆ ದಂಡರಹಿತ ಪ್ರವೇಶಾತಿಗೆ ಅವಕಾಶವಿದೆ. ಆ.30ರವರೆಗೆ ದಂಡ ಸಹಿತ ಪ್ರವೇಶಾತಿ ಪಡೆಯಬಹುದು. ನಮ್ಮಲ್ಲಿ 16 ಬೋಧಕರು ಮತ್ತು 14 ಬೋಧಕೇತರ ಸಿಬ್ಬಂದಿ ಇದ್ದಾರೆ. ಪಿ.ಎಚ್‌ಡಿ ಪದವಿ ಪಡೆದ ಅನುಭವಿ ಉಪನ್ಯಾಸಕರಾಗಿದ್ದಾರೆ. ವಾಟ್ಸ್‌ಆಯಪ್ ಸೇರಿದಂತೆ ವ್ಯಾಪಕ ಪ್ರಚಾರ ನಡೆಸಿ, ಪಿಜಿ ತರಗತಿ ಆರಂಭಿಸಲು ಪ್ರಯತ್ನ ನಡೆಸಿದ್ದೇವೆ ಎಂದು ವಿಶೇಷಾಧಿಕಾರಿ ತಿಳಿಸಿದರು.
ಶೂನ್ಯ ಪ್ರವೇಶಾತಿ: ತರಗತಿ ಬಂದ್!
ಮೊದಲ ವರ್ಷದಲ್ಲೇ (2014ರಲ್ಲಿ) 112 ವಿದ್ಯಾರ್ಥಿನಿಯರ ಪ್ರವೇಶಾತಿಯೊಂದಿಗೆ ಶುಭಾರಂಭ ಮಾಡಿದ ಅಧ್ಯಯನ ಕೇಂದ್ರ 2017-18ರಲ್ಲಿ ಪ್ರವೇಶಾತಿ ಸಂಖ್ಯೆ 127ಕ್ಕೇರಿತು. ನಂತರ ಹಲವಾರು ಕಾರಣಗಳಿಂದ ವರ್ಷ ಕಳೆದಂತೆ ತನ್ನ ಆಕರ್ಷಣೆಯನ್ನು ಕಳೆದುಕೊಂಡು 2023-24ನೇ ಸಾಲಿಗೆ ಪ್ರವೇಶಾತಿ 20ಕ್ಕೆ ಕುಸಿಯಿತು. 2024-25ನೇ ಸಾಲಿನಲ್ಲಿ ಶೂನ್ಯ ಪ್ರವೇಶಾತಿ ಕಾರಣದಿಂದ ಸ್ನಾತಕೋತ್ತರ ತರಗತಿ ಬಂದ್ ಆದವು.
‘ಮಂಡ್ಯ ನಗರದಿಂದ 10 ಕಿ.ಮೀ. ದೂರದಲ್ಲಿರುವ ಅಧ್ಯಯನ ಕೇಂದ್ರಕ್ಕೆ ವಿದ್ಯಾರ್ಥಿನಿಯರು ಬಂದು ಹೋಗಲು ಬಸ್‌ಗಳ ತೀವ್ರ ಕೊರತೆ ಹಾಸ್ಟೆಲ್ ಮತ್ತು ಕ್ಯಾಂಟೀನ್ ಸೌಲಭ್ಯ ಇಲ್ಲದಿರುವುದು ಕಾಯಂ ಬೋಧಕರಿಲ್ಲದೆ ಅತಿಥಿ ಉಪನ್ಯಾಸಕರ ಮೇಲಿನ ಅವಲಂಬನೆ ಹಾಗೂ ಇತರ ವಿವಿಗಳಿಗಿಂತ ಪಿಜಿ ಕೋರ್ಸ್‌ಗಳಿಗೆ ದುಬಾರಿ ಶುಲ್ಕ.. ಈ ಎಲ್ಲ ಕಾರಣಗಳಿಂದ ಪಿಜಿ ಕೋರ್ಸ್‌ಗಳು ಆಕರ್ಷಣೆಯನ್ನು ಕಳೆದುಕೊಂಡವು’ ಎಂದು ಹಳೆಯ ವಿದ್ಯಾರ್ಥಿನಿಯರು ದೂರಿದರು.
ಹೊಸ ಹಾಸ್ಟೆಲ್ ಆರಂಭಿಸಲು ಚಿಂತನೆ
‘100 ವಿದ್ಯಾರ್ಥಿನಿಯರ ಸಾಮರ್ಥ್ಯದ ‘ಹಿಂದುಳಿದ ವರ್ಗಗಳ ಹಾಸ್ಟೆಲ್’ ಆರಂಭಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದ್ದು ಆರ್ಥಿಕ ಇಲಾಖೆಯಿಂದ ಅನುಮತಿ ಸಿಗುವುದು ಬಾಕಿ ಇದೆ. ವಿವಿ ಕ್ಯಾಂಪಸ್ 18 ಎಕರೆ ವಿಶಾಲ ಜಾಗ ಹೊಂದಿದ್ದು ಹಾಸ್ಟೆಲ್ ನಿರ್ಮಾಣಕ್ಕೆ ಬಿಸಿಎಂ ಇಲಾಖೆಗೆ ಒಂದು ಎಕರೆ ಜಾಗವನ್ನು ವಿವಿಯಿಂದ ನೀಡುತ್ತೇವೆ’ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಶೇಷಾಧಿಕಾರಿ ವಿಷ್ಣು ಎಂ.ಶಿಂಧೆ ಹೇಳಿದರು.
ಬಸ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಾರಿಗೆ ನಿಯಂತ್ರಣಾಧಿಕಾರಿಗೆ ಪತ್ರ ಬರೆದು ಮಂಡ್ಯ ಬಸ್ ನಿಲ್ದಾಣದಿಂದ ಅಕ್ಕಮಹಾದೇವಿ ವಿವಿ ಪಿಜಿ ಸೆಂಟರ್‌ಗೆ ಬೆಳಿಗ್ಗೆ 9ಕ್ಕೆ ಮತ್ತು ಪಿಜಿ ಸೆಂಟರ್‌ನಿಂದ ಸಂಜೆ 4ಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಹೆಚ್ಚುವರಿ ಬಸ್ ಬಿಡಲು ಮನವಿ ಮಾಡಲಾಗಿದೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡುವ ಮೂಲಕ ಸಮುದಾಯದ ಜೊತೆ ಸಂಪರ್ಕ ಸಾಧಿಸಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.