Home » ಲೈವ್ ನ್ಯೂಸ್ » ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆ
ರಾಜ್ಯದಲ್ಲಿಯೇ ಉತ್ತಮ ಪ್ರಗತಿ: ಪಿ.ಟಿ. ಪರಮೇಶ್ವರ್ ನಾಯ್ಕ್

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆ
ರಾಜ್ಯದಲ್ಲಿಯೇ ಉತ್ತಮ ಪ್ರಗತಿ: ಪಿ.ಟಿ. ಪರಮೇಶ್ವರ್ ನಾಯ್ಕ್

ಕೊಪ್ಪಳ.05.ಸೆಪ್ಟೆಂಬರ್.26: ಸಕಾರದ ಪಂಚ ಗ್ಯಾರಂಟಿ ಯೋಜನೆಗಳು, ಇವು ಕೇವಲ ಯೋಜನೆಗಳಲ್ಲ, ಇತಿಹಾಸ ಸೃಷ್ಟಿಸಿರುವ ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳಾಗಿವೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಪಿ.ಟಿ. ಪರಮೇಶ್ವರ ನಾಯ್ಕ್ ಹೇಳಿದರು.


ಕೊಪ್ಪಳ ಜಿಲ್ಲಾ ಪಂಚಾಯತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುಧವಾರ (ಸೆ. 03ರಂದು) ಜಿಲ್ಲಾ ಮತ್ತು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.


ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿಯೇ ಉತ್ತಮ ಪ್ರಗತಿ ಸಾಧಿಸುವ ಮೂಲಕ ಮುಂಚೂಣಿಯಲ್ಲಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಇದ್ದಕ್ಕಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಆಗಸ್ಟ್-2023 ರಿಂದ ಮಾಚ್-2026ರವರೆಗೆ 1915 ಕೋಟಿ ರೂ. ಮೊತ್ತವನ್ನು ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಮರಣ ಹೊಂದಿದ 8108 ಫಲನುಭವಿಗಳಿಗೆ ಸಂದಾಯವಾಗಿದ್ದ ಮೊತ್ತದ ಪೈಕಿ 89 ಲಕ್ಷ ರೂ.ಗಳನ್ನು ಸರ್ಕಾರದ ಖಾತೆಗೆ ಮರು ಜಮಾ ಮಾಡಲಾಗಿದೆ ಎಂದು ತಿಳಿಸಿದರು.


ಶಕ್ತಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 2023 ರಿಂದ 2026ರ ಆಗಸ್ಟ್ ಮಾಹೆಯವರೆಗೆ ಫಲಾನುಭವಿಗಳಿಗೆ ದಾಖಲೆಯ 4914 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದಲ್ಲದೇ ವಿದ್ಯಾರ್ಥಿಗಳಿಗೂ ಸಹ ಉಚಿತ ಬಸ್ ಪಾಸ್ ಯೋಜನೆಯಡಿ ಇದುವರೆಗೆ ಜಿಲ್ಲೆಯಲ್ಲಿ 21,192 ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲಾಗಿದೆ ಎಂದು ಅವರು ತಿಳಿಸಿದರು.


ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಜುಲೈ-2026ರ ಅಂತ್ಯದವರೆಗೆ ಕೊಪ್ಪಳ ವಿಭಾಗದಲ್ಲಿ ಒಟ್ಟು 1,39,966 ಗ್ರಾಹಕರಿಗೆ ಆಗಸ್ಟ್-2023 ರಿಂದ ಜುಲೈ-2026ರ ವರೆಗೆ ಒಟ್ಟು 209.2 ಕೋಟಿ ರೂ. ಹಾಗೂ ಗಂಗಾವತಿ ವಿಭಾಗದಲ್ಲಿ 2,86,730 ಫಲಾನುಭವಿಗಳಿಗೆ 442 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರೀಷ್ಕರಣಾ ಕಾರ್ಯದ ಪ್ರಗತಿ ಕೊಪ್ಪಳ ವಿಭಾಗದಲ್ಲಿ ಶೇ. 87.19 ಮತ್ತು ಗಂಗಾವತಿ ವಿಭಾಗದಲ್ಲಿ 86.18 ಆಗಿದೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 43.41 ಕೋಟಿ ನಿರುದ್ಯೋಗ ಬತ್ಯೆಯನ್ನು ಜಿಲ್ಲೆಯಲ್ಲಿ ಓದುವ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ತೇರ್ಗಡೆಹೊಂದಿದ ಅರ್ಹ ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನವಾಗುತ್ತಿದೆ. ಆದ್ಯತಾ ಮತ್ತು ಅಂತ್ಯೋದಯ ಅನ್ನ ಯೋಜನೆಯ 3,26,424 ಪಡಿತರ ಚೀಟಿಗಳಿಗೆ ಅರ್ಹರಾದ 12,29,034 ಪಡಿತರದಾರರಿಗೆ ಹೆಚ್ಚುವರಿ ಅಕ್ಕಿ ಮತ್ತು ಜೋಳ ಸೇರಿ 10 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿದೆ. 2023ರ ಜುಲೈ ನಿಂದ 2024ರ ಡಿಸೆಂಬರ್ ಮಾಹೆಯ ವರೆಗೆ ಡಿಬಿಟಿ ಮೂಲಕ ರೂ. 313.92 ಕೋಟಿ ವೆಚ್ಚ ಮಾಡಲಾಗಿದೆ. ಅದೇ ರೀತಿ 2025ರ ಫೆಬ್ರುವರಿಯಿಂದ 2026ರ ಮಾರ್ಚ್ ವರೆಗೆ 198.57 ಕೋಟಿ ರೂ. ವೆಚ್ಚ ಮಾಡಲಾಗಿದೆ. 2026ರ ಆಗಸ್ಟ್ ಮಾಹೆಯಲ್ಲಿ 2.08 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷರುಗಳಾದ ಎಸ್.ಬಿ ಖಾದ್ರಿ, ಮಂಜುನಾಥ ಗೊಂಡಬಾಳ, ನಾಗರಾಜ ಅರಳಿ, ಅಂಬರೀಶ್ ಗಾಂಜಿ ಸೇರಿದಂತೆ ಜಿಲ್ಲಾ ಮಟ್ಟದ ಸದಸ್ಯರುಗಳು, ತಾಲೂಕು ಮಟ್ಟದ ಅಧ್ಯಕ್ಷರು, ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology