ರಾಯಚೂರು.05.ಸೆಪ್ಟಂಬರ್.26: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ಹತ್ಯೆಗೀಡಾದ ದಲಿತ ಮುಖಂಡ ಭೂಮಾನಂದ ಅವರ ನಿವಾಸಕ್ಕೆ ಇಂದು ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಭೇಟಿ ನೀಡಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಹಾಡಹಗಲೇ ನಡೆದಿರುವ ಈ ಘಟನೆ ಅತ್ಯಂತ ಖಂಡನೀಯ. ತಪ್ಪಿತಸ್ಥರ ವಿರುದ್ಧ ಈಗಾಗಲೇ ಕಾನೂನು ಕ್ರಮ ಆರಂಭವಾಗಿದ್ದು, ಮುಂದಿನ ಅಗತ್ಯ ಕ್ರಮಗಳನ್ನು ಕಾನೂನು ಪ್ರಕಾರ ಕೈಗೊಳ್ಳಲಾಗುವುದು. ಭೂಮಾನಂದ ಅವರ ಕುಟುಂಬದಲ್ಲಿ ಎಳೆಯ ಮಕ್ಕಳಿದ್ದಾರೆ. ಅವರ ಭವಿಷ್ಯ ಹಾಗೂ ಕುಟುಂಬದ ಬದುಕಿಗೆ ಸರ್ಕಾರ ಜವಾಬ್ದಾರಿಯಿಂದ ಬೆಂಬಲವಾಗಿ ನಿಲ್ಲಲಿದೆ. ಕುಟುಂಬಕ್ಕೆ ಬದುಕು ಕಟ್ಟಿಕೊಳ್ಳಲು ಅಗತ್ಯ ನೆರವು ಒದಗಿಸುವುದರ ಜೊತೆಗೆ, ಸಾಧ್ಯವಾದಲ್ಲಿ ಭೂಮಿ ಒದಗಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ರಕ್ಷಣೆ ಮತ್ತು ಕಾನೂನು ಕ್ರಮಗಳು ಮಾತ್ರ ಶಾಶ್ವತ ಪರಿಹಾರವಲ್ಲ. ಗ್ರಾಮಗಳಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಬೇಕಾದರೆ ಸಮಾಜದ ಹಿರಿಯರು, ಮುಖಂಡರು ಹಾಗೂ ಗ್ರಾಮಸ್ಥರು ಒಗ್ಗಟ್ಟಾಗಿ ಕೂತು ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವ್ಯಾಜ್ಯ, ದ್ವೇಷ ಮತ್ತು ಕೇಸುಗಳು ಯಾರ ಬದುಕನ್ನೂ ಹಾಳು ಮಾಡಬಾರದು. ಒಂದು ಜೀವ ಕಳೆದುಕೊಂಡಾಗ ಒಂದು ಕುಟುಂಬ ಮಾತ್ರವಲ್ಲ, ಮತ್ತೊಂದು ಕುಟುಂಬವೂ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಸಮಾಜದಲ್ಲಿ ಮನಸ್ಸಿನ ಪರಿವರ್ತನೆ ಅತ್ಯಗತ್ಯ. ಶಾಂತಿ, ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಪ್ರತಿಯೊಂದು ಕುಟುಂಬವೂ ನೆಮ್ಮದಿಯಿಂದ ಬದುಕುವಂತಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು, ದೇವದುರ್ಗ ಶಾಸಕಿ ಕರಿಯಮ್ಮ ಜಿ.ನಾಯಕ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ, ದೇವದುರ್ಗ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ಹೊಕ್ರಾಣಿ ಗ್ರಾಮಸ್ಥರು ಇದ್ದರು.






Any questions related to ತಪ್ಪಿತಸ್ಥರ ವಿರುದ್ಧ ಈಗಾಗಲೇ ಕಾನೂನು ಕ್ರಮ: ಕೆಹೆಚ್.ಮುನಿಯಪ್ಪ?