ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ಬದುಕಿಗೆ ಲಾಭ ತಂದಿದೆ- ಅಮೃತರಾವ್ ಚಿಮಕೋಡೆ
ಬೀದರ.03.ಫೆಬ್ರವರಿ.26:- ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ಬದುಕಿಗೆ ಸ್ಪಷ್ಟವಾದ ಲಾಭವನ್ನು ತಂದಿವೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚಿಮಕೂಡೆ ಹೇಳಿದರು.
ಅವರು ಸೋಮವಾರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕಾರ್ಯಕ್ರಮ ಕುರಿತು ಪ್ರಚಾರ ಕಾರ್ಯ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ ಕಲಾಜಾಥ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಕುಟುಂಬಗಳ ಆಹಾರ ಭದ್ರತೆ, ಉಚಿತ ಪ್ರಯಾಣ ಸೌಲಭ್ಯ ಹಾಗೂ ಯುವಕರಿಗೆ ನಿರುದ್ಯೋಗದ ಸಮಯದಲ್ಲಿ ಆರ್ಥಿಕ ಸಹಾಯ ನೀಡುವ ಮೂಲಕ ಈ ಯೋಜನೆಗಳು ಸಾಮಾಜಿಕ-ಆರ್ಥಿಕ ಸ್ಥಿರತೆಯನ್ನು ಬಲಪಡಿಸುತ್ತಿವೆ. ವಿಶೇಷವಾಗಿ ಗ್ರಾಮೀಣ ಹಾಗೂ ಬಡ ವರ್ಗದ ಕುಟುಂಬಗಳಿಗೆ ದಿನನಿತ್ಯದ ಖರ್ಚಿನ ಒತ್ತಡ ಕಡಿಮೆಯಾಗಿ, ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂಬುದು ವಿವಿಧ ವರದಿಗಳಿಂದ ತಿಳಿದುಬಂದಿದೆ ಎಂದರು.
ಈ ಪ್ರಚಾರ ವಾಹನವು ಫೆಬ್ರವರಿ.3 ರಿಂದ 7 ವರೆಗೆ ಪ್ರಚಾರ ಕೈಗೊಳ್ಳಲಿದೆ. ಬೀದರ ಜಿಲ್ಲೆಯ 20 ಗ್ರಾಮಗಳಿಗೆ ಈ ವಾಹನ ಸಂಚರಿಸಲಿದ್ದು, ವಾಹನದ ಜೊತೆಗೆ ವಾರ್ತಾ ಇಲಾಖೆಯಿಂದ ಆಯ್ಕೆ ಮಾಡಿರುವ ಕಲಾ ತಂಡಗಳಿoದ ಗ್ಯಾರಂಟಿ ಯೋಜನೆಗಳ ಕುರಿತು ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ಮಭೂಮಿ ಜಾನಪದ ಕಲಾ ತಂಡದ ಶಂಕರ ಚೋಂಡಿ, ನಂದೀಶ್ವರ ನಾಟ್ಯ ಸಂಘದ ದೇವದಾಸ್ ಚಿಮಕೋಡ್ ಹಾಗೂ ಸಂಗಡಿಗರಿAದ ಪಂಚ ಗ್ಯಾರಂಟಿ ಯೋಜನೆ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೋಳಿ, ಸಿನಿ ಚಾಲಕ ವಿಜಯಕೃಷ್ಣ ಸೋಲಪುರ ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

