ರಾಜ್ಯದ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಅತಂತ್ರ ಸ್ಥಿತಿಯಲ್ಲಿದ್ದ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಕೊನೆಗೂ ದೊಡ್ಡ ನೆಮ್ಮದಿಯ ಸುದ್ದಿ ಸಿಕ್ಕಿದೆ.
ಹೈಸ್ಕೂಲ್ ಹಂತದಲ್ಲಿ ಆಂಗ್ಲ ಮಾಧ್ಯಮ ಇಲ್ಲದ ಕಾರಣ ತೀವ್ರ ಆತಂಕಕ್ಕೆ ಒಳಗಾಗಿದ್ದ ಈ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಉಳಿಸಲು ಶಾಲಾ ಶಿಕ್ಷಣ ಇಲಾಖೆಯು ಪರ್ಯಾಯ ಕ್ರಮಕ್ಕೆ ಸಿಂಧ್.
ಹಾಲಿ ಇರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಹಾಗೂ ಪ್ರೌಢಶಾಲೆಗಳನ್ನು 8ನೇ ತರಗತಿಯಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮಕ್ಕೆ ಮೇಲ್ದರ್ಜೆಗೆ ಏರಿಸಲು ಇಲಾಖೆ ನಿರ್ಧರಿಸಿದ್ದು, ಈ ಕುರಿತು ಸರ್ಕಾರಕ್ಕೆ ಸಮಗ್ರ ವರದಿಯ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ.
30 ಸಾವಿರಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರವಾಗಿತ್ತು
ರಾಜ್ಯ ಸರ್ಕಾರವು ಕಳೆದ 2018-19ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಒಟ್ಟು 1,001 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ 1 ರಿಂದ 7ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ವಿಭಾಗಗಳನ್ನು ಆರಂಭಿಸಿತ್ತು. ಅಂದು ಒಂದನೇ ತರಗತಿಗೆ ದಾಖಲಾಗಿದ್ದ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ಯಶಸ್ವಿಯಾಗಿ 7ನೇ ತರಗತಿ ಪೂರೈಸಿ ಹೊರಬಂದಿದ್ದಾರೆ. ಆದರೆ, ಸರ್ಕಾರಿ ವಲಯದಲ್ಲಿ 8ನೇ ತರಗತಿಯಿಂದ ಮೇಲ್ಪಟ್ಟ ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಸೌಲಭ್ಯ ಇಲ್ಲದ ಕಾರಣ ಈ ಮಕ್ಕಳ ಮುಂದಿನ ವಿದ್ಯಾಭ್ಯಾಸದ ದಾರಿ ಮುಚ್ಚಿಹೋಗಿತ್ತು.
ಬಡತನದ ಹಿನ್ನೆಲೆಯುಳ್ಳ ಪೋಷಕರಿಗೆ ತಮ್ಮ ಮಕ್ಕಳನ್ನು ದುಬಾರಿ ವೆಚ್ಚದ ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸಲು ಆರ್ಥಿಕ ಶಕ್ತಿ ಇರಲಿಲ್ಲ. ಇದರಿಂದಾಗಿ ಸಾವಿರಾರು ಮಕ್ಕಳ ಭವಿಷ್ಯ ಅಡ್ಡಕತ್ತರಿಯಲ್ಲಿ ಸಿಲುಕಿತ್ತು. ಈ ಗಂಭೀರ ಸಮಸ್ಯೆಯ ಕುರಿತು ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿದ್ದವು.





Any questions related to ಕರ್ನಾಟಕ ಪಬ್ಲಿಕ್ ಸ್ಕೂಲ್ 8th ರಿಂದ 10ನೇ ವರೆಗೆ ಮೇಲ್ದರ್ಜೆಗೆ ಏರಿಸಲು ಸರ್ಕಾರ ನಿರ್ಧಾರ.?