|

KSRTC ನೌಕರರು ಮತ್ತೆ ಮುಷ್ಕರಕ್ಕೆ ಕರೆ ಕೊಟ್ಟ !

ಬೆಂಗಳೂರು.09.ಆಕ್ಟೋಬರ.25:- ರಾಜ್ಯ ಸಾರಿಗೆ ನಿಗಮದ ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರೂ, ಸರ್ಕಾರ ಎರಡು ತಿಂಗಳಿಗೂ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ನೌಕರರು ಮತ್ತೆ ಹೋರಾಟದ ಹಾದಿ ಹಿಡಿದ್ದಾರೆ..

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಈ ಹೋರಾಟಕ್ಕೆ ಮುನ್ನಡೆ ನೀಡಿದ್ದು, ರಾಜ್ಯದಾದ್ಯಂತ ಉಪವಾಸ ಸತ್ಯಾಗ್ರಹ, ಕಾರ್ಮಿಕರ ಸಮಾವೇಶ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ.

ಅಷ್ಟಕ್ಕೂ ಸಾರಿಗೆ ನೌಕರರ ಬೇಡಿಕೆಗಳೇನು.?

ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.
2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಬೇಕು.
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಅಕ್ಟೋಬರ್ 15ರಿಂದ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ನಗರಗಳಲ್ಲಿ ಐದು ದಿನಗಳ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ತಕ್ಷಣ ಸಂವಾದ ಆರಂಭಿಸಿ ನೌಕರರ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಆಗ್ರಹಿಸಿದ್ದಾರೆ.

ಈಗಾಗಲೇ ನಾವು ನಡೆಸಿದ ಎರಡು ಮುಷ್ಕರಗಳಿಗೆ ರಾಜ್ಯದ ಬಹುತೇಕ ಸಾರಿಗೆ ನೌಕರರಿಂದ ಭಾರೀ ಬೆಂಬಲ ಲಭಿಸಿದೆ. ರಾಜ್ಯ ಉಚ್ಚ ನ್ಯಾಯಾಲಯವೂ ಸರ್ಕಾರ ಮತ್ತು ಜಂಟಿ ಕ್ರಿಯಾ ಸಮಿತಿಯ ನಡುವೆ ಮಾತುಕತೆ ಮುಂದುವರಿಯಬೇಕು ಎಂದು ಸೂಚಿಸಿದೆ.

ಈ ಹಿನ್ನೆಲೆಯಲ್ಲಿ, ನಾವು ಆಗಸ್ಟ್ 11 ಮತ್ತು 15ರಂದು ಸರ್ಕಾರಕ್ಕೆ ಪತ್ರ ಬರೆದು ಸಾಧ್ಯವಾದಷ್ಟು ಬೇಗ ಸಭೆ ಕರೆಯುವಂತೆ ವಿನಂತಿಸಿದ್ದೇವೆ. ಆದರೆ ಸರ್ಕಾರದಿಂದ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ, ಸರ್ಕಾರ ತಕ್ಷಣ ಚರ್ಚೆ ನಡೆಸಿ ನಮ್ಮ ಬೇಡಿಕೆಗಳನ್ನು ಪೂರೈಸಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಅನಂತ ಸುಬ್ಬರಾವ್ ಎಚ್ಚರಿಕೆ ನೀಡಿದರು.

ಪ್ರತಿ ಬಾರಿ ಮುಷ್ಕರಕ್ಕೆ ಕರೆ ನೀಡಿದಾಗ ಮನವೊಲಿಸಿ ಅಗತ್ಯ ಈಡೇರಿಕೆಯನ್ನು ಪೂರ್ಣಗೊಳಿಸುವುದಾಗಿ ಹೇಳುತ್ತಾರೆ ಆದರೆ ಈ ವರೆಗೂ ಈ ಬೇಡಿಕೆ ಈಡೇರಿಲ್ಲ. ಇಂತಹ ಕಾರ್ಮಿಕ ವಿರೋಧಿ ಧೋರಣೆ ನಿಗಮಗಳ ನೌಕರರ ಆಕ್ರೋಶವನ್ನು ಹೆಚ್ಚಿಸಿದೆ.

ಈ ಹಿನ್ನಲೆ ಕ್ರಿಯಾ ಸಮಿತಿಯು ಸೆ. 30, ಅ.6 ಮತ್ತು 8 ರಂದು ಕರೆದಿದ್ದ ಸಭೆಗಳಲ್ಲಿ ವಾಸ್ತವ ಪರಿಸ್ಥಿತಿಯ ವಿಮರ್ಶೆ ನಡೆಸಿ ಮತ್ತೆ ಹೋರಾಟಕ್ಕಿಳಿಯಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಅನಂತ ಸುಬ್ಬರಾವ್ ತಿಳಿಸಿದರು.

Similar Posts

Leave a Reply

Your email address will not be published. Required fields are marked *