ಕಲಬುರಗಿ.24.ಮೇ.25:- ಗುಲಬರ್ಗಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬಗ್ಗೆ ತಾಳಿರುವ ನಿರ್ಲಕ್ಷ್ಯ ಹೇಳತೀರದ್ದು. ಕಳೆದ ಮೂರು ವರ್ಷಗಳಿಂದ ಒಟ್ಟು 9,024 ಪರೀಕ್ಷಾ ಫಲಿತಾಂಶಗಳನ್ನು ವಿಶ್ವವಿದ್ಯಾಲಯ ಬಾಕಿ ಉಳಿಸಿಕೊಂಡಿದೆ.
ಉತ್ತರಪತ್ರಿಕೆಗಳು ಕಳೆದು ಹೋಗಿರುವ ಗಂಭೀರ ವಿಚಾರ ಮುನ್ನೆಲೆಗೆ ಬಂದಿತ್ತು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಉತ್ತರ ಪತ್ರಿಕೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು.
ಗುಲಬರ್ಗಾ ವಿಶ್ವವಿದ್ಯಾಲಯ ಪರೀಕ್ಷಾ ಸುಧಾರಣಾ ಸಮಿತಿ ಬಿಗಿಪಟ್ಟು ಹಿಡಿದಿದ್ದರಿಂದ ಆ ಉತ್ತರ ಪತ್ರಿಕೆಗಳನ್ನು ಹುಡುಕಿ ಪತ್ತೆಹಚ್ಚಲಾಯಿತು. ಆದರೆ ಈಗಲೂ 9,024 ಫಲಿತಾಂಶ ಬಾಕಿ ಇದೆ ಎನ್ನುತ್ತಿವೆ ಯುಯುಸಿಎಂಎಸ್ ದಾಖಲೆಗಳು. ಎನ್‌ಇಪಿ ಜಾರಿಗೆ ಬಂದ ಮೇಲೆ ದಾಖಲಾತಿ ಪಡೆದಿರುವ ಮೂರು ಬ್ಯಾಚ್‌ಗಳ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಇನ್ನೂ ಫಲಿತಾಂಶವನ್ನು ಪಡೆಯಲಾಗಿಲ್ಲ ಎಂಬುದು ಸ್ಪಷ್ಟ.
ಮೊದಲ ಬ್ಯಾಚ್‌ಗೆ ನಡೆದಿರುವ ಆರು ಸೆಮಿಸ್ಟರ್‌ಗಳ ಪರೀಕ್ಷೆಗಳ ಪೈಕಿ 2736 ಫಲಿತಾಂಶಗಳು ಬಾಕಿ ಉಳಿದಿವೆ. ಎರಡನೇ ಬ್ಯಾಚಿನ ನಾಲ್ಕು ಸೆಮಿಸ್ಟರ್‌ಗಳ ಫಲಿತಾಂಶ ಹೊರಬಿದ್ದಿದ್ದು, 3731 ಫಲಿತಾಂಶಗಳು ಇನ್ನೂ ಪೆಂಡಿಂಗ್ ಇವೆ. ಮೂರನೇ ಬ್ಯಾಚಿನ ಎರಡು ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಲಾಗಿದೆ. ಅಲ್ಲಿಯೂ 2557 ಫಲಿತಾಂಶಗಳು ಬಾಕಿ ಇದೆ. ಈವರೆಗೂ 9024 ಉತ್ತರ ಪತ್ರಿಕೆಗಳ ರಿಸಲ್ಟ್ ಸಿಕ್ಕಿಲ್ಲ.
‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿದ ವಿವಿಯ ಕುಲಪತಿ ಗೂರು ಶ್ರೀರಾಮುಲು, “ಒಂಬತ್ತು ಸಾವಿರ ಫಲಿತಾಂಶ ಬಾಕಿ ಉಳಿದಿದೆ ಎಂದು ಹೇಳುತ್ತಿದ್ದಾರೆ. ಆದರೆ ನಿಧಾನಕ್ಕೆ ಎಲ್ಲವನ್ನೂ ಸರಿಪಡಿಸಲಾಗುತ್ತಿದೆ. ಲೋಕಾಯುಕ್ತವು ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿರುವುದರಿಂದ ಸಮಸ್ಯೆಗಳನ್ನು ಗಂಭೀರವಾಗಿ ನೋಡಲಾಗುತ್ತಿದೆ.
ಪರೀಕ್ಷಾ ಸುಧಾರಣಾ ಸಮಿತಿ ರಚನೆಯಾದ ಮೇಲೆ ಸಾಕಷ್ಟು ಕೆಲಸಗಳು ಆಗಿವೆ. ಪೆಂಡಿಂಗ್ ಇಡೋಕೆ ಏನು ಕಾರಣ ಎಂಬುದನ್ನು ನೋಡಬೇಕಾಗುತ್ತದೆ. ಎಲ್ಲವನ್ನೂ ಸರಿಪಡಿಸಲಾಗುವುದು” ಎಂದು ಸ್ಪಷ್ಟಪಡಿಸಿದರು. (ಈಗಾಗಲೇ ಗುಲಬರ್ಗಾ ವಿವಿ ಕುರಿತು ಈದಿನ ಪ್ರಕಟಿಸಿರುವ ಎರಡು ವರದಿಗಳ ಕುರಿತೂ ಪ್ರಸ್ತಾಪಿಸಿದರು.