03/08/2025 12:17 AM

Translate Language

Home » ಲೈವ್ ನ್ಯೂಸ್ » ಗುತ್ತಿಗೆ ಮೀಸಲು ಜಾರಿಗೆ ವಿಧೇಯಕ ವಿಂಗಡಣೆ

ಗುತ್ತಿಗೆ ಮೀಸಲು ಜಾರಿಗೆ ವಿಧೇಯಕ ವಿಂಗಡಣೆ

Facebook
X
WhatsApp
Telegram

ಬೆಂಗಳೂರು.14.ಜೂನ್.25:- ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ತಿದ್ದುಪಡಿ ವಿಧೇಯಕವನ್ನೇ ವಿಂಗಡಿಸುವ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ. ಸರ್ಕಾರಿ ಕಾಮಗಾರಿಗಳಲ್ಲಿ ‘ಗುತ್ತಿಗೆ ಮೀಸಲು’ ಸೌಲಭ್ಯದ ಕಾನೂನು ತೊಡಕು ನಿವಾರಿಸಲು ಸರ್ಕಾರ ಚಿಂತನೆಯಮಾಡುತ್ತಿದೆ.

ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಮುಸ್ಲಿಮರಿಗೂ (ಪ್ರವರ್ಗ-2ಬಿ) ಅನ್ವಯಿಸಲು ಸರ್ಕಾರ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಆದರೆ, ಈ ವಿಧೇಯಕ ಅಂಗೀಕರಿಸಲು ನಿರಾಕರಿಸಿದ್ದ ರಾಜ್ಯಪಾಲರು, ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದರು.

ಈ ವಿಧೇಯಕ ನನೆಗುದಿಗೆ ಬೀಳುವುದರೊಂದಿಗೆ ಎಸ್ಸಿ, ಎಸ್ಟಿ, ಪ್ರವರ್ಗ-1ರ ಗುತ್ತಿಗೆದಾರರಿಗೂ ಗುತ್ತಿಗೆ ಯಲ್ಲಿ 2 ಕೋಟಿ ಮೀಸಲು ಸಿಗುತ್ತಿಲ್ಲ ಮಾತ್ರವಲ್ಲ, ಚಾಲ್ತಿಯಲ್ಲಿದ್ದ 1 ಕೋಟಿ ಮೀಸಲು ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ಹೀಗಾಗಿ ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳ ಪ್ರವರ್ಗ-1ರ ಸಮುದಾಯಗಳ ಗುತ್ತಿಗೆ ದಾರರಿಗೆ ಟೆಂಡರ್ನಲ್ಲಿ ಮೀಸಲು ಸೌಲಭ್ಯ ಎರಡು ಕೋಟಿ ರೂ.ಗೆ ಹೆಚ್ಚಿಸುವ ಜತೆಗೆ ಸರಕು, ಸೇವೆ ಪೂರೈಸುವ ಟೆಂಡರ್ನಲ್ಲಿ 1 ಕೋಟಿ ರೂ.ವರೆಗೆ ಮೀಸಲು ಕಲ್ಪಿಸುವುದಕ್ಕಾಗಿ ಕೆಟಿಟಿಪಿ ತಿದ್ದುಪಡಿ ವಿಧೇಯಕ ವಿಂಗಡಿಸಿ, ಪ್ರವರ್ಗ -1ಕ್ಕೆ ಪ್ರತ್ಯೇಕ ತಿದ್ದುಪಡಿ ವಿಧೇಯಕ ಕರಡು ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ.

ಸುಗ್ರೀವಾಜ್ಞೆ ಮೊರೆ: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಗೆ (ಕೆಟಿಪಿಪಿ) ತಿದ್ದುಪಡಿ ಸೇರಿಸಿ, ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯಪಾಲರ ಅನುಮತಿ ಪಡೆಯುವ ನಿಟ್ಟಿನಲ್ಲಿ ಕಾನೂನು ಇಲಾಖೆ ಪ್ರಾಥಮಿಕವಾಗಿ ರ್ಚಚಿಸಿದೆ. ಪರಿಶಿಷ್ಟ ಜಾತಿ, ಪಂಗಡಗಳ ಗುತ್ತಿಗೆದಾರರ ಬೇಡಿಕೆಗೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎಸ್ಸಿ ಗುತ್ತಿಗೆದಾರರ ಸಂಘದ ನಿಯೋಗದೊಂದಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ರ್ಚಚಿಸಿದ್ದಾರೆ.

ಏನಿದು ಗುತ್ತಿಗೆ ಮೀಸಲು? : ಗುತ್ತಿಗೆ ಮೀಸಲಾತಿ ಮೊತ್ತ 1ರಿಂದ 2 ಕೋಟಿ ರೂ.ಗೆ ವಿಸ್ತರಣೆ, ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್ನಲ್ಲಿ 1 ಕೋಟಿ ರೂ.ವರೆಗೆ ಮೀಸಲಾತಿ ಸೌಲಭ್ಯವನ್ನು ಮುಸ್ಲಿಮರಿಗೆ (ಪ್ರವರ್ಗ-2ಬಿ) ಅನ್ವಯಿಸಲು ಸರ್ಕಾರ ನಿರ್ಧರಿಸಿ, ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಕಳೆದ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಬಿಲ್ ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಧರ್ವಧಾರಿತ ಮೀಸಲು ಸೌಲಭ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದಿದ್ದ ರಾಜ್ಯಪಾಲರು, ಸುಪ್ರೀಂಕೋರ್ಟ್ನ ಹಲವು ತೀರ್ಪಗಳನ್ನು ಉಲ್ಲೇಖಿಸಿದ್ದರು.ಹಿಂದಿನ ಸರ್ಕಾರದ ಮೀಸಲು ತಿದ್ದುಪಡಿ ವ್ಯಾಜ್ಯವು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವುದರತ್ತ ಗಮನಸೆಳೆದು, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಬೇಕು ಎಂಬ ಸಲಹೆಯೊಂದಿಗೆ ಬಿಲ್ ಮರಳಿಸಿದ್ದಾರೆ.

ಸುಗ್ರೀವಾಜ್ಞೆಗೆ ಕಾರಣ?

ರಾಜ್ಯಪಾಲರು ಹಿಂತಿರುಗಿಸಿದ ತಿದ್ದುಪಡಿ ಬಿಲ್ ವಾಪಸ್ ಪಡೆಯಲು ಸಚಿವ ಸಂಪುಟದ ಸಭೆ ಒಪ್ಪಿಗೆ ಪಡೆದು, ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಬೇಕಾಗುತ್ತದೆ. ನಂತರ ಪ್ರತ್ಯೇಕ ತಿದ್ದುಪಡಿ ಬಿಲ್ಗಳನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ, ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಬೇಕಾಗುತ್ತದೆ. ಸದ್ಯಕ್ಕೆ ವಿಧಾನಮಂಡಲ ಅಧಿವೇಶನ ನಡೆಯುತ್ತಿಲ್ಲ. ಮತ್ತಷ್ಟು ವಿಳಂಬ ತಪ್ಪಿಸುವುದಕ್ಕಾಗಿ ಬಿಲ್ ವಿಂಗಡಿಸಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಯೋಚಿಸಿರಬಹುದು ಎಂಬ ತರ್ಕವಿದೆ.

ಮತ್ತೆ ಗವರ್ನರ್ ಅಂಗಳಕ್ಕೆ?

ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲು ಸಲಹೆ ನೀಡಿ ರಾಜ್ಯಪಾಲರು ಹಿಂತಿರುಗಿಸಿದ ಕೆಟಿಪಿಪಿ ತಿದ್ದುಪಡಿ ಬಿಲ್ಗೆ ಮತ್ತಷ್ಟು ವಿವರಣೆ ನೀಡಿ ರಾಜ್ಯಪಾಲರಿಗೆ ಮತ್ತೆ ಕಳುಹಿಸಬೇಕೆ ಎಂಬ ಬಗ್ಗೆಯೂ ಸರ್ಕಾರ ಆಲೋಚಿಸುತ್ತಿದೆ. ರಾಜ್ಯಪಾಲರು ಹಿಂದಿನ ಕಾರಣಗಳನ್ನು ಉಲ್ಲೇಖಿಸಿ, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಬೇಕೆಂಬ ಸಲಹೆ ಪುನರುಚ್ಚರಿಸಿ ಕಡತ ಹಿಂತಿರುಗಿಸುವ ಸಾಧ್ಯತೆಗಳಿವೆ. ಇದರಿಂದ ಎಸ್ಸಿ, ಎಸ್ಟಿ, ಪ್ರವರ್ಗ-1ಕ್ಕೆ ಸೇರಿದ ಗುತ್ತಿಗೆದಾರರು ಮತ್ತಷ್ಟು ದಿನ ಗುತ್ತಿಗೆ ಮೀಸಲು ಸೌಲಭ್ಯಕ್ಕೆ ಕಾಯುವಂತಾಗಲಿದೆ. ಅಷ್ಟೇ ಅಲ್ಲ, ಚಾಲ್ತಿಯಲ್ಲಿದ್ದ ಒಂದು ಕೋಟಿ ರೂ.ವರೆಗಿನ ಮೀಸಲು ಸೌಲಭ್ಯಕ್ಕೂ ಅಡ್ಡಿಯಾಗಿದೆ. ಪ್ರತ್ಯೇಕ ಬಿಲ್ ಮುಖೇನ ಈ ಸಮಸ್ಯೆಗೆ ಪರಿಹಾರ ಒದಗಿಸಲು ಎಸ್ಸಿ ಗುತ್ತಿಗೆದಾರರು ಒತ್ತಡ ಹೆಚ್ಚಿಸಿದ್ದಾರೆ. ಎಸ್ಟಿ, ಪ್ರವರ್ಗ-1ಕ್ಕೆ ಸೇರಿದ ಸಮುದಾಯಗಳ ಗುತ್ತಿಗೆದಾರರು ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟಿರುವ ಕಾರಣ ಬಿಲ್ ವಿಂಗಡಿಸಿ ಸುಗ್ರೀವಾಜ್ಞೆ ಹೊರಡಿಸುವುದು ಸೂಕ್ತವೆಂಬ ತಾತ್ವಿಕ ನಿಲುವು ಸರ್ಕಾರ ತಳೆದಿದೆ.

ಕೆಪಿಟಿಪಿಪಿ ತಿದ್ದುಪಡಿ ವಿಧೇಯಕದ ಕಂಡಿಕೆಯನ್ನು ಪ್ರತ್ಯೇಕಿಸಿ, ಗುತ್ತಿಗೆ ಮೀಸಲು ಮೊತ್ತ ಹೆಚ್ಚಳದ ಪ್ರಯೋಜನಕ್ಕೆ ಅವಕಾಶ ಕಲ್ಪಿಸಬೇಕೆಂಬ ಕೋರಿಕೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!