ಬೆಂಗಳೂರು.04.ಏಪ್ರಿಲ್.25:-ರಾಜ್ಯ ಸರ್ಕಾರ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕಳುಹಿಸಿದ ಸೇವಾಹಿರಿತನದ ಪಟ್ಟಿ ತಿರಸ್ಕರಿಸಿ, ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರಭಾರ ಕುಲಪತಿ ನೇಮಕ ಮಾಡಿದ್ದಾರೆ.
ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಎಲ್.ಗೋಮತಿದೇವಿ ಅವರ ಅವಧಿ ನವೆಂಬರ್ 2024ಕ್ಕೆ ಮುಕ್ತಾಯವಾಗಿತ್ತು. ನಂತರ ಗೃಹ ವಿಜ್ಞಾನ ವಿಭಾಗದ (ಸ್ಕೂಲ್) ನಿರ್ದೇಶಕರಾಗಿದ್ದ ಸಿ. ಉಷಾದೇವಿ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಕ ಮಾಡಲಾಗಿತ್ತು.
ಉಷಾದೇವಿ ಅವರ ಅವಧಿ ಈ ವರ್ಷದ ಮಾರ್ಚ್‌ಗೆ ಮುಗಿದಿದ್ದು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2020ರ ನಿಯಮದಂತೆ ವಿವಿಧ ವಿಭಾಗಗಳ ನಿರ್ದೇಶಕರ (ಡೀನ್) ಸೇವಾ ಹಿರಿತದ ಆಧಾರದಲ್ಲಿ ಪ್ರಭಾರ ಕುಲಪತಿ ನೇಮಕ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಕುಲಸಚಿವರು ಕಳೆದ ಫೆಬ್ರುವರಿಯಲ್ಲೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಪತ್ರದ ಜತೆಗೆ ವಿಶ್ವವಿದ್ಯಾಲಯದ ಆರು ವಿಭಾಗಗಳ ನಿರ್ದೇಶಕರ ಸೇವಾ ವಿವರದ ಪಟ್ಟಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಿದ್ಧಪಡಿಸಿದ್ದ ಪಟ್ಟಿಯನ್ನು ಪತ್ರದೊಂದಿಗೆ ಲಗತ್ತಿಸಿದ್ದರು.
ಆ ಪ್ರಕಾರ ನಿರ್ದೇಶಕರ ಸೇವಾ ಹಿರಿತನದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಾನವಿಕ ಮತ್ತು ಮುಕ್ತ ಕಲೆಗಳ ವಿಭಾಗದ ನಿರ್ದೇಶಕ ಟಿ.ಎಂ. ಮಂಜುನಾಥ ಅವರನ್ನು ಪ್ರಭಾರ ಕುಲಪತಿ ಸ್ಥಾನಕ್ಕೆ ನೇಮಕ ಮಾಡಬೇಕಿತ್ತು.
ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವುದಿದ್ದರೆ ಆರ್.ಕೆ. ವಾಣಿಶ್ರೀ ಅವರಿಗೆ ಆ ಸ್ಥಾನ ಲಭಿಸಬೇಕಿತ್ತು. ಆದರೆ, ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಕಳುಹಿಸಿದ ಪಟ್ಟಿಯಲ್ಲಿ ಹೆಸರೇ ಇಲ್ಲದ ಬಿ.ಕೆ. ಮೀರಾ ಅವರಿಗೆ ಪ್ರಭಾರ ಕುಲಪತಿಯಾಗಿ ನೇಮಿಸಿ, ಆದೇಶ ಹೊರಡಿಸಲಾಗಿದೆ.
‘ಗೋಮತಿ ದೇವಿ ಅವರ ಅವಧಿ ಮುಗಿದಾಗ ಪ್ರಭಾರ ಕುಲಪತಿ ನೇಮಕದಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆ ಅನ್ವಯವೇ ರಾಜ್ಯಪಾಲರು ಕ್ರಮಕೈಗೊಂಡಿದ್ದರು. ಅಂದು ಕಳುಹಿಸಿದ್ದ ನಿರ್ದೇಶಕರ ಸೇವಾಹಿರಿತನದ ಪಟ್ಟಿಯಲ್ಲಿ ಮೊದಲ ಹೆಸರಿದ್ದ ಉಷಾದೇವಿ ಅವರು ಪ್ರಭಾರ ವಹಿಸಿಕೊಂಡಿದ್ದರು.
ಈಗ ಆ ಪಟ್ಟಿಯನ್ನೇ ಕೈಬಿಟ್ಟು, ನಿರ್ದೇಶಕರಲ್ಲದವರನ್ನು ಪ್ರಭಾರ ಕುಲಪತಿಗಳಾಗಿ ನೇಮಿಸಲಾಗಿದೆ. ನೃಪತುಂಗ ವಿಶ್ವವಿದ್ಯಾಲಯಕ್ಕೆ ಪ್ರಭಾರ ಕುಲಪತಿ ನೇಮಕ ಮಾಡುವಾಗ ನಿಯಮ ಅನುಸರಿಸಲಾಗಿದೆ. ಮಹಾರಾಣಿ ಕ್ಲಸ್ಟರ್‌ನಲ್ಲಿ ಏಕೆ ಪಾಲಿಸಿಲ್ಲ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಹಿರಿಯ ನಿರ್ದೇಶಕರು.
ಸರ್ಕಾರ ಕಳುಹಿಸಿದ್ದ ನಿರ್ದೇಶಕರ ಪಟ್ಟಿ
ಸಿ. ಉಷಾದೇವಿ
ಟಿ.ಎಂ. ಮಂಜುನಾಥ್ ಗೋವಿಂದಪ್ಪ
ಆರ್.ಕೆ. ವಾಣಿಶ್ರೀ
ಕೆ.ವೈ. ನಾರಾಯಣಸ್ವಾಮಿ
ಎಸ್.ಬಿ. ಅಶೋಕ
ಕುಲಪತಿ ನೇಮಕ ಪ್ರಕ್ರಿಯೆ ವಿಳಂಬ
ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ 2019ರಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಸ್ಥಾಪಿಸಲಾಗಿತ್ತು. ಅಗತ್ಯ ಮೂಲಸೌಕರ್ಯ ಶ್ರೇಷ್ಠ ಅಧ್ಯಾಪಕ ವೃಂದ ಸೇರಿದಂತೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ಉನ್ನತ ಗ್ರೇಡ್ ಪಡೆದ ಹಾಗೂ ಮಹಿಳಾ ವಿದ್ಯಾರ್ಥಿಗಳನ್ನೇ ಒಳಗೊಂಡಿದ್ದ ದೇಶದ ಎರಡು ಕಾಲೇಜುಗಳಿಗೆ ಅಂದು ಕ್ಲಸ್ಟರ್ ವಿಶ್ವವಿದ್ಯಾಲಯದ ಸ್ಥಾನ ಸಿಕ್ಕಿತ್ತು. ರಾಜ್ಯ ಸರ್ಕಾರ 2018ರಲ್ಲಿ ಕಾಯ್ದೆ ರೂಪಿಸಿ 2019ರಲ್ಲಿ ಅಸ್ತಿತ್ವಕ್ಕೆ ತಂದಿತ್ತು. ಮೊದಲ ಕುಲಪತಿಯ ಅವಧಿ ಕಳೆದ ನವೆಂಬರ್‌ಗೆ ಮುಕ್ತಾಯವಾಗಿದ್ದರೂ ನಾಲ್ಕು ತಿಂಗಳಾದರೂ ನೂತನ ಕುಲಪತಿಗಳ ನೇಮಕ ಪ್ರಕ್ರಿಯೆ ಆರಂಭವಾಗಿಲ್ಲ. ಶೋಧನಾ ಸಮಿತಿ ರಚಿಸಿಲ್ಲ.