ಶಿಕ್ಷಣ ವ್ಯವಸ್ಥೆಯ ಬದಲಾವಣೆಯು ಗುಣಮಟ್ಟವನ್ನು ದುರ್ಬಲಗೊಳಿಸಬಾರದು. ಆದ್ದರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತನ್ನ ಕರಡು ನಿಯಮಾವಳಿಗಳನ್ನು ಪುನರ್ ಪರಿಶೀಲಿಸಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆಂಪರಾಜು ಆಗ್ರಹಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ವತಿಯಿಂದ ಆಯೋಜಿಸಿದ್ದ ‘ಯುಜಿಸಿಯ ವಿಶ್ವವಿದ್ಯಾಲಯಗಳ ಹೊಸ ಕರಡು ನಿಯಮಾವಳಿಗಳ ಸಾಧಕ – ಬಾಧಕ’ ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಬದಲಾವಣೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಇರಬೇಕು. ಶಿಕ್ಷಣ ವ್ಯವಸ್ಥೆ ಪರಾಮರ್ಶೆಯಾಗದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ, ಅದು ಗುಣಮಟ್ಟವನ್ನು ತಗ್ಗಿಸಲು ಕಾರಣವಾಗಬಾರದು. ವಿದ್ಯಾರ್ಥಿ ಕೇಂದ್ರಿತ, ಸದೃಢ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವ ನೀತಿಗಳನ್ನು ಅನುಷ್ಠಾನಗೊಳಿಸಬೇಕು’ ಎಂದರು.
‘ಸಹಾಯಕ ಪ್ರಾಧ್ಯಾಪಕನಾಗಬೇಕಾದರೆ ನಿರ್ದಿಷ್ಟ ವಿಷಯದ ಜ್ಞಾನ ಮತ್ತು ಆಳವಾದ ಅಧ್ಯಯನ ಅವಶ್ಯ. ನಿಯಮಾವಳಿಯಲ್ಲಿ ಆ ಬಗ್ಗೆ ಸಡಿಲಿಕೆ ಇದೆ. ಅಲ್ಲದೆ, ಪ್ರಾಧ್ಯಾಪಕರ ಪಿಎಚ್.ಡಿ ಅಗತ್ಯವನ್ನೂ ತಗ್ಗಿಸಿದೆ. ಇದರಿಂದ ಪ್ರಾಧ್ಯಾಪಕರಲ್ಲಿ ಸಂಶೋಧನಾ ಪ್ರವೃತ್ತಿ, ಸುದೀರ್ಘ ಅಧ್ಯಯನ ಆಸಕ್ತಿ ಕುಂಠಿತವಾಗುತ್ತದೆ. ಪ್ರಾಧ್ಯಾಪಕರೇ ಸಂಶೋಧನಾ ಆಸಕ್ತಿ ರೂಢಿಸಿಕೊಳ್ಳದಿದ್ದರೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ, ಅನ್ವೇಷಣಾ, ಅಧ್ಯಯನ ಪ್ರವೃತ್ತಿ ವೃದ್ದಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.
‘ಉದ್ಯಮಿಗಳು, ಖಾಸಗಿ ವಲಯದವರು, ಶಿಕ್ಷಣ ವ್ಯವಸ್ಥೆಯ ಅರಿವಿಲ್ಲದವರು ಕುಲಪತಿಗಳಾಗಬಹುದು ಎಂಬ ಚಿಂತನೆ ಸಮಂಜಸವಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿದ ಮಾತ್ರಕ್ಕೆ ಪ್ರಾಧ್ಯಾಪಕರಿಗೆ ಎಚ್‌ಎಎಲ್, ಬಿಎಚ್‌ಇಎಲ್ ಸಂಸ್ಥೆಗಳಲ್ಲಿ ನಿರ್ದೇಶಕ ಹುದ್ದೆ ಪಡೆಯಲು ಸಾಧ್ಯವೇ? ಬೇರೆ ಕ್ಷೇತ್ರದಲ್ಲಿ ಇಲ್ಲದ ಸಡಿಲಿಕೆ, ಉನ್ನತ ಶಿಕ್ಷಣದಲ್ಲಿ ಮಾತ್ರ ಏಕೆ’ ಎಂದು ಪ್ರಶ್ನಿಸಿದರು.
ವಿಚಾರಗೋಷ್ಠಿಯಲ್ಲಿ ಕೋಶಾಧಿಕಾರಿ ಜಿ.ಕೃಷ್ಣಮೂರ್ತಿ, ವಿಜ್ಞಾನ ನಿಕಾಯದ ಡೀನ್ ಪ್ರೊ.ಅಶೋಕ್ ಡಿ.ಹಂಜಗಿ, ಶಿಕ್ಷಣ ನಿಕಾಯದ ಡೀನ್ ಪ್ರೊ. ಪಿ.ಸಿ.ಕೃಷ್ಣಮೂರ್ತಿ, ಪ್ರೊ.ಮುರುಳಿಧರ್ ಉಪಸ್ಥಿತರಿದ್ದರು.